ಕೋಲಾರ: ‘ಬರ ಘೋಷಣೆ ಸಂಬಂಧ ಸೋಮವಾರ ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಲಿದ್ದು, ಬರಪೀಡಿತ ತಾಲ್ಲೂಕುಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬರ ಘೋಷಣೆ ಸಂಬಂಧ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಮಾನದಂಡ ನಿಗದಿ ಮಾಡಿದೆ. ಅದರ ಅನ್ವಯವೇ ಬರಪೀಡಿತ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗುವುದು’ ಎಂದರು.
‘ಆ ಮಾನದಂಡ ಪ್ರಕಾರ ರಾಜ್ಯದ 113 ತಾಲ್ಲೂಕುಗಳನ್ನು ಆಗಸ್ಟ್ 18ರಂದು ತಾತ್ಕಾಲಿಕ ಬರಪೀಡಿತ ಎಂದು ಪಟ್ಟಿ ಮಾಡಿಕೊಂಡಿದ್ದೇವೆ. ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆ ಕೈಗೊಂಡು ವರದಿ ತರಿಸಿಕೊಳ್ಳುತ್ತಿದ್ದೇವೆ. ಕನಿಷ್ಠ ಮೂರು ವಾರ ಶೇ 60ಕ್ಕಿಂತ ಹೆಚ್ಚಿನ ಪ್ರಮಾಣದ ಮಳೆ ಕೊರತೆ ಇರಬೇಕು. ಯಾವ ತಾಲ್ಲೂಕು ಅರ್ಹವಾಗುತ್ತವೆ ಎಂಬುದನ್ನು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು. ಅವಶ್ಯವಿದ್ದರೆ ಸಚಿವ ಸಂಪುಟದ ಗಮನಕ್ಕೂ ತಂದು ಘೋಷಣೆ ಮಾಡಲಾಗುವುದು’ ಎಂದು ಹೇಳಿದರು.
‘ಆಗಸ್ಟ್ 31ಕ್ಕೆ ಸುಮಾರು 75 ತಾಲ್ಲೂಕುಗಳ ಪಟ್ಟಿ ಸಿದ್ಧ ಮಾಡಿದ್ದೇವೆ. ಆಯಾಯ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ವಾರ ಅಥವಾ ಹತ್ತು ದಿನಗಳಲ್ಲಿ ಬರಪೀಡಿತ ತಾಲ್ಲೂಕುಗಳ ಎರಡನೇ ಪಟ್ಟಿ ಘೋಷಣೆ ಮಾಡಲಾಗುವುದು’ ಎಂದರು.
‘ಮಳೆ ಪರಿಸ್ಥಿತಿ ಆಧಾರದ ಮೇಲೆ ಮೂರನೇ ಪಟ್ಟಿ ಸಿದ್ಧಪಡಿಸಲೂ ಸರ್ಕಾರ ಚಿಂತನೆ ನಡೆಸಿದೆ. ಮೊದಲ ಪಟ್ಟಿಯಲ್ಲಿ ಬಿಟ್ಟು ಹೋದ ತಾಲ್ಲೂಕುಗಳನ್ನು ಎರಡನೇ ಪಟ್ಟಿಯಲ್ಲಿ ಪರಿಗಣಿಸುತ್ತೇವೆ, ಎರಡನೇ ಪಟ್ಟಿ ಬಿಟ್ಟು ಹೋದ ತಾಲ್ಲೂಕುಗಳನ್ನು ಮೂರನೇ ಪಟ್ಟಿಯಲ್ಲಿ ಪರಿಗಣಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.
‘ಬರಪೀಡಿತ ತಾಲ್ಲೂಕು ಘೋಷಣೆ ಆಗುತ್ತಿದ್ದಂತೆ ತುರ್ತು ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗುವುದು. ಟ್ಯಾಂಕರ್ ಮೂಲಕ ಪೂರೈಕೆ ಮಾಡಲು, ಖಾಸಗಿ ಬಾಡಿಗೆ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲು ಅನುದಾನ ನೀಡಲಾಗುವುದು. ಬೆಳೆ ಹಾನಿ ಪರಿಹಾರ ಕೊಡಿಸಲು ಚಾಲನೆ ನೀಡಲಿದ್ದೇವೆ. ಎನ್‌ಡಿಆರ್‌ಎಫ್ ಮಾನದಂಡ ಪ್ರಕಾರ ರಾಜ್ಯಕ್ಕೆ ದೊರೆಯಬೇಕಾದ ಪರಿಹಾರ ಪಡೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.