ADVERTISEMENT

ಅನುಮೋದನೆ ಪಡೆದು ಎರಡು ವರ್ಷ ಕಳೆದರೂ ಆರಂಭವಾಗಿಲ್ಲ 20,265 ಕಾಮಗಾರಿ!

ಅನುಮೋದನೆ ಪಡೆದು ಎರಡು ವರ್ಷ ಕಳೆದರೂ ಆರಂಭವಾಗಿಲ್ಲ

ರಾಜೇಶ್ ರೈ ಚಟ್ಲ
Published 24 ಜನವರಿ 2021, 20:33 IST
Last Updated 24 ಜನವರಿ 2021, 20:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಶಾಸಕರು ಸ್ಥಳೀಯ ಪ್ರದೇ ಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ಕ್ರಿಯಾ ಯೋಜನೆ ಸಲ್ಲಿಸಿ, ಜಿಲ್ಲಾಧಿಕಾರಿ ಗಳಿಂದ ಆಡಳಿತಾತ್ಮಕ ಅನುಮೋದನೆ ಪಡೆದ 37,562 ಕಾಮಗಾರಿಗಳ ಪೈಕಿ, 12,345 ಕಾಮಗಾರಿಗಳು ಮಾತ್ರ ಈವರೆಗೆ ಪೂರ್ಣಗೊಂಡಿವೆ. ಉಳಿದ 20,265 ಕಾಮಗಾರಿಗಳು ಎರಡು ವರ್ಷಗಳಾದರೂ ಆರಂಭವಾಗಿಲ್ಲ!

ಕೊಪ್ಪಳ ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ, ಎರಡು ವರ್ಷ ವಾದರೂ ಆರಂಭವಾಗದ ಕಾಮಗಾರಿ ಗಳ ದೊಡ್ಡ ಪಟ್ಟಿಯೇ ಇದೆ. ಅದರಲ್ಲೂ ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆ ಯಲ್ಲಿ 1,500ಕ್ಕೂ ಹೆಚ್ಚು ಹಾಗೂ ರಾಯಚೂರು, ಉಡುಪಿ, ಬೆಂಗಳೂರು (ನಗರ), ಯಾದಗಿರಿ, ಬೀದರ್‌, ತುಮಕೂರು ಜಿಲ್ಲೆಗಳಲ್ಲಿ 1,000ಕ್ಕೂ ಹೆಚ್ಚು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದರೂ ಕೆಲಸ ಆರಂಭವಾಗಿಲ್ಲ.

ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು (ಡಿ.ಸಿ) ಮತ್ತು ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳ (ಸಿಇಒ) ಸಭೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಪೂರ್ಣಗೊಳ್ಳಬೇಕಾದ ಅವಧಿ ಮುಗಿದಿದ್ದರೂ, ಆರಂಭವೇ ಆಗದೆ ಕೇವಲ ಕ್ರಿಯಾ ಯೋಜನೆಯಲ್ಲಷ್ಟೆ ಉಳಿದಿರುವ ದೊಡ್ಡ ಸಂಖ್ಯೆಯ ಕಾಮಗಾರಿಗಳ ಪಟ್ಟಿಯನ್ನು ನೋಡಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೆರಳಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ತೀವ್ರ ವಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ.

ADVERTISEMENT

ಆ ಬೆನ್ನಲ್ಲೆ, ಎರಡು ವರ್ಷ ದಾಟಿದ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿ ವರದಿ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಶಾಲಿನಿ ರಜನೀಶ್‌ ಪತ್ರ ಬರೆದಿದ್ದಾರೆ.

‌ಆಡಳಿತಾತ್ಮಕ ಅನುಮೋದನೆ ನೀಡಲು ಬಾಕಿ ಇರುವ ಕಾಮಗಾರಿಗ ಳಿಗೂ ತುರ್ತಾಗಿ ಅನುಮೋದನೆ ನೀಡ ಬೇಕು. ಅಲ್ಲದೆ, ಕಾಮಗಾರಿ ತ್ವರಿತವಾಗಿ ಕೈಗೊಳ್ಳಲು ಅಂದಾಜು ವೆಚ್ಚದ ಶೇ 75ರಷ್ಟು ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಬೇಕು ಎಂದೂ ಅವರು ಪತ್ರದಲ್ಲಿ ಸೂಚಿಸಿದ್ದಾರೆ. ಸಾಕಷ್ಟು ಅನುದಾನ ಲಭ್ಯ ಇದ್ದರೂ ಅನುಮೋದನೆ ಗೊಂಡ ಕಾಮಗಾರಿ ಗಳನ್ನು ಟೆಂಡರ್‌ ಕರೆದು, ಕಾರ್ಯಾದೇಶ ನೀಡಲು ಜಿಲ್ಲಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿ ರುವ ಬಗ್ಗೆ ಮುಖ್ಯಮಂತ್ರಿ ಬಳಿ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಸಲ್ಲಿಸಿದ ಕ್ರಿಯಾ ಯೋಜನೆ ಗಳಿಗೆ ಅನುಮೋದನೆ ನೀಡದೆ ಜಿಲ್ಲಾಧಿಕಾರಿಗಳು ಅಸಹಕಾರ ತೋರಿಸುತ್ತಿರುವ ಬಗ್ಗೆಯೂ ದೂರಿದ್ದರು.

ಆರಂಭವಾಗದಿರಲು ಕಾರಣವೇನು?

‘ಬಹುತೇಕ ಶಾಸಕರು ಸ್ಥಳೀಯ ಪ್ರದೇಶಾ ಭಿವೃದ್ಧಿ ನಿಧಿಯನ್ನು ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನ ಗಳ ಅಭಿವೃದ್ಧಿಗೆ ಬಳಕೆ ಮಾಡು ತ್ತಾರೆ. ಶೇ 90ಕ್ಕೂ ಹೆಚ್ಚು ಕಾಮಗಾರಿಗಳು ₹ 5 ಲಕ್ಷಕ್ಕಿಂತ ಕಡಿಮೆ ಮೊತ್ತದ್ದಾಗಿರುತ್ತವೆ.ಅಲ್ಲದೆ, ಅವುಗಳನ್ನು ಟೆಂಡರ್‌ ಇಲ್ಲದೆ ಕಾರ್ಯಕರ್ತರಿಗೆ ಶಾಸಕರು ನೀಡು ತ್ತಾರೆ. ಅನೇಕ ಸಂದರ್ಭಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರೂ ನಿವೇಶನ ಲಭ್ಯ ಇರುವುದಿಲ್ಲ. ಕಾಮಗಾರಿಗಳನ್ನು ಪಕ್ಷದ ಕಾರ್ಯಕರ್ತರಿಗೆ ವಹಿಸುತ್ತಿ ರುವುದು, ಕಾಮಗಾರಿ ವಹಿಸಿಕೊಂಡ ಏಜೆನ್ಸಿಗಳ ನಿರ್ಲಕ್ಷ್ಯ ಕೂಡ ವಿಳಂಬಕ್ಕೆ ಕಾರಣವಾಗುತ್ತಿದೆ’ ಎಂದು ಜಿಲ್ಲಾಧಿಕಾರಿ
ಯೊಬ್ಬರು ಹೇಳಿದರು.

ಪಿ.ಡಿ ಖಾತೆಯಲ್ಲಿದೆ ₹ 761.76 ಕೋಟಿ

‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ರಾಜ್ಯದಲ್ಲಿ 30 ಜಿಲ್ಲಾಧಿಕಾರಿಗಳ ಪಿ.ಡಿ (ವೈಯಕ್ತಿಕ ಠೇವಣಿ) ಖಾತೆಯಲ್ಲಿ ಡಿಸೆಂಬರ್‌ ಅಂತ್ಯಕ್ಕೆ ಒಟ್ಟು ₹ 761.76 ಕೋಟಿ ಬಾಕಿ ಉಳಿದಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ ₹ 296 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. 2020 ಏ. 1ಕ್ಕಿಂತ ಮೊದಲಿನ ಹಣ ₹ 672.55 ಕೋಟಿ ಬಾಕಿ ಇತ್ತು. ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ ₹ 214.29 ಕೋಟಿ ವೆಚ್ಚವಾಗಿದೆ’ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.