ADVERTISEMENT

500ಕ್ಕೂ ಹೆಚ್ಚು ನಕಲಿ ಕ್ಲಿನಿಕ್‌?; ಪತ್ತೆಯೇ ಸವಾಲು!

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 16:17 IST
Last Updated 8 ಜುಲೈ 2023, 16:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   ರಾಯಿಟರ್ಸ್

ಬೆಂಗಳೂರು: ರಾಜ್ಯದಲ್ಲಿ 500ಕ್ಕೂ ಹೆಚ್ಚು ನಕಲಿ ವೈದ್ಯರಿಗೆ ನೋಂದಣಿ ಸಂಖ್ಯೆ ನೀಡಿ, ಕ್ಲಿನಿಕ್‌ ತೆರೆಯಲು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಮಂಡಳಿ (ಕೆಎಯುಪಿ) ನೋಂದಣಾಧಿಕಾರಿಯೇ ಸಹಕರಿಸಿರುವುದು ಆಯುಷ್‌ ಇಲಾಖೆ ನಡೆಸಿದ ಪ್ರಾಥಮಿಕ ಪರಿಶೀಲನೆಯಲ್ಲಿ ದೃಢಪಟ್ಟಿದೆ.

ಎರಡು ವರ್ಷಗಳ ಹಿಂದೆ ಕೆಎಯುಪಿ ಮಂಡಳಿ ಮೇಲೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವೈದ್ಯರೊಬ್ಬರಿಗೆ ಮಂಡಳಿಯ ನೋಂದಣಿ ಸಂಖ್ಯೆ ನೀಡಲು ಲಂಚ ಪಡೆಯುತ್ತಿದ್ದ ಆಗಿನ ನೋಂದಣಾಧಿಕಾರಿಯನ್ನು ಬಂಧಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದಾಗ ಹಿಂದಿನ ನೋಂದಣಾಧಿಕಾರಿಯಾಗಿದ್ದ ಡಾ.ವೆಂಕಟರಾಮಯ್ಯ ಅವರ ಅವಧಿಯಲ್ಲಿ 13 ನಕಲಿ ವೈದ್ಯರಿಗೆ ಮಂಡಳಿಯ ನೋಂದಣಿ ಸಂಖ್ಯೆ ನೀಡಿರುವುದು ಪತ್ತೆಯಾಗಿತ್ತು.

ನಕಲಿ ನೋಂದಣಿಗಳ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ಆಯುಷ್‌ ಇಲಾಖೆಯ ತಾಂತ್ರಿಕ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ, ವಿಸ್ತೃತ ತನಿಖೆ ನಡೆಸಲು ನಿರ್ಧರಿಸಲಾಗಿತ್ತು. ರಾಜ್ಯದಲ್ಲಿ ಸುಮಾರು 500 ನಕಲಿ ವೈದ್ಯರು ಇರಬಹುದು ಎಂದು ಇಲಾಖೆ ಅಂದಾಜಿಸಿದ್ದರೂ, ಇದುವರೆಗೂ ಅಂಥ ವೈದ್ಯರು ನಡೆಸುತ್ತಿರುವ ಕ್ಲಿನಿಕ್‌ಗಳನ್ನು ನಿರ್ದಿಷ್ಟವಾಗಿ ಪತ್ತೆಹಚ್ಚಲು ಇಲಾಖೆಗೆ ಸಾಧ್ಯವಾಗಿಲ್ಲ.

ADVERTISEMENT

ನಕಲಿ ನೋಂದಣಿ ಹೇಗೆ?:

ರಾಜ್ಯದಲ್ಲಿ ಸ್ವಾತಂತ್ರ್ಯಪೂರ್ವದಿಂದ ಪಾರಂಪರಿಕ ವೈದ್ಯವೃತ್ತಿ ಮಾಡಿಕೊಂಡು ಬಂದಿದ್ದ ವೈದ್ಯರಿಗೆ ಅವರ ಪ್ರಾಕ್ಟೀಸ್‌ ಮುಂದುವರಿಕೆಗಾಗಿ ಪರವಾನಗಿ ನೀಡಲು 1962ರಲ್ಲಿ ಜಾರಿಗೆ ಬಂದಿದ್ದ ಕೆಎಯುಪಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಪರವಾನಗಿ ಪಡೆಯಲು ಅವರು ಕಾಯ್ದೆ ಜಾರಿಗೆ ಬಂದ ವರ್ಷಕ್ಕೆ ಕನಿಷ್ಠ 25 ವರ್ಷ ಪೂರೈಸಿರಬೇಕು. 10 ವರ್ಷ ಕರ್ನಾಟಕದಲ್ಲಿ ಸೇವೆ ಸಲ್ಲಿಸಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಇದರಿಂದ ಸ್ವಾತಂತ್ರ್ಯಾ ನಂತರ ಜನಿಸಿದವರಿಗೆ ಪರವಾನಗಿ ಪಡೆಯಲು ಅವಕಾಶ ಇರಲಿಲ್ಲ. ಅಂಥವರು ಹಣ ನೀಡಿ ವಾಮಮಾರ್ಗದ ಮೂಲಕ ಪರವಾನಗಿ ಪಡೆದಿದ್ದಾರೆ. ಹಿಂದೆ ನೋಂದಣಿ ಸಂಖ್ಯೆ ಪಡೆದಿದ್ದು ಮೃತರಾದವರು, ನವೀಕರಣಕ್ಕೆ ಅರ್ಜಿ ಸಲ್ಲಿಸದೇ ನೋಂದಣಿ ರದ್ದಾದವರ ಸಂಖ್ಯೆಗಳನ್ನು ನಕಲಿ ವೈದ್ಯರಿಗೆ ನೀಡಲಾಗಿದೆ. 

ನಕಲಿ ವೈದ್ಯರ ಪತ್ತೆ ಕಗ್ಗಂಟು:

ಎಸಿಬಿ ದಾಳಿಯ ನಂತರ ಆಯುಷ್‌ ಇಲಾಖೆ ಮಂಡಳಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದಾಗ ಹಾರ್ಡ್‌ಡಿಸ್ಕ್‌ನಲ್ಲಿದ್ದ ದಾಖಲೆಗಳು ಅಸಲಿಯಾದ ಮೂಲ ನೋಂದಣಿದಾರರ ಹೆಸರಿನಲ್ಲೇ ಇದ್ದವು. ನಕಲಿ ನೋಂದಣಿ ಸಂಖ್ಯೆಯನ್ನು ಆನ್‌ಲೈನ್‌ ಹೊರತಾಗಿ ನೀಡಲಾಗಿದೆ. ನಕಲಿ ವೈದ್ಯರಿಗಾಗಿ ಪ್ರತ್ಯೇಕ ನೋಂದಣಿ ಪುಸ್ತಕ ರಚಿಸಿಕೊಂಡಿದ್ದರು ಎನ್ನಲಾಗಿದೆ. ಅಂತಹ ಕಾಗದ ಪತ್ರಗಳ ಯಾವ ಕಡತಗಳನ್ನೂ ವೆಂಕಟರಾಮಯ್ಯ ಅವರ ನಂತರ ಅಧಿಕಾರ ವಹಿಸಿಕೊಂಡ ನೋಂದಣಾಧಿಕಾರಿಗೆ ಹಸ್ತಾಂತರಿಸಿಲ್ಲ. ಹಾಗಾಗಿ, ವಿಚಾರಣೆ ಪೂರ್ಣಗೊಂಡಿಲ್ಲ. ನೋಂದಣಿ ದಾಖಲೆಗಳನ್ನು ಒದಗಿಸುವಂತೆ ಆಯುಷ್‌ ಅಧಿಕಾರಿಗಳು ನೀಡಿದ ನೋಟಿಸ್‌ಗಳಿಗೆ ರಾಜ್ಯದ ಕ್ಲಿನಿಕ್‌ಗಳೂ ಸ್ಪಂದಿಸಿಲ್ಲ.

‘ನಕಲಿ ವೈದ್ಯರಿಗೆ ಪರವಾನಗಿ ನೀಡಿದ ಪ್ರಕರಣಗಳ ಮಾಹಿತಿಯನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಪಡೆದಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ನಕಲಿ ವೈದ್ಯರಿಗೆ ನೋಂದಣಿ ಮಾಡಿಕೊಟ್ಟಿದ್ದ ಕೆಎಯುಪಿ ಮಂಡಳಿ ಹಿಂದಿನ ನೋಂದಣಾಧಿಕಾರಿಯಾಗಿದ್ದ ಈಗಿನ ಜಯಚಾಮರಾಜೇಂದ್ರ ಆಯುರ್ವೇದ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ವೆಂಕಟರಾಮಯ್ಯ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಆಯುಷ್‌ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.