ADVERTISEMENT

500ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರ ಸ್ಥಗಿತ

ಎಸ್‌ಎಸ್‌ಎಲ್‌ಸಿ: ಪುನರಾವರ್ತಿತ ನಕಲು ಪ್ರಕರಣಗಳು, ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಕುಸಿತ

ಚಂದ್ರಹಾಸ ಹಿರೇಮಳಲಿ
Published 13 ಆಗಸ್ಟ್ 2023, 23:31 IST
Last Updated 13 ಆಗಸ್ಟ್ 2023, 23:31 IST
   

ಬೆಂಗಳೂರು: 500ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ಮುಚ್ಚಲು, ಅಂತಹ ಕೇಂದ್ರಗಳಿಗೆ ಸಂಯೋಜನೆಗೊಂಡಿದ್ದ ಶಾಲೆಗಳ ಮಕ್ಕಳನ್ನು ಸಮೀಪದ ಇತರೆ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದೆ.

ಹಲವು ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಸರ್ಕಾರಿ ಶಾಲಾ ಮಕ್ಕಳ ಸಂಖ್ಯೆ ಪ್ರತಿವರ್ಷ ಗಣನೀಯವಾಗಿ ಕಡಿಮೆ ಆಗುತ್ತಿರುವುದು, ನಕಲು ತಡೆಯಲು ವಿಫಲವಾಗಿರುವ ಪರೀಕ್ಷಾ ಕೇಂದ್ರಗಳ ಜತೆಗೆ, ನಿಯಮ ಪಾಲಿಸದ ಕೆಲವು ಖಾಸಗಿ ಪರೀಕ್ಷಾ ಕೇಂದ್ರಗಳನ್ನೂ ಮುಚ್ಚಲಾಗುತ್ತಿದೆ.

ದ್ವಿತೀಯ ಪಿಯು ಪರೀಕ್ಷೆಗಳಿಗೆ ಹೋಲಿಸಿದರೆ ಎಸ್‌ಎಸ್ಎಲ್‌ಸಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿವೆ. ಅಲ್ಲದೇ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ದ್ವಿತೀಯ ಪಿಯು ಪರೀಕ್ಷೆಗಾಗಿ ಹೊಸ ಕೇಂದ್ರಕ್ಕೆ ಅನುಮತಿ ನೀಡಬೇಕಾದರೆ ಆ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಸಂಖ್ಯೆ ಕನಿಷ್ಠ 400 ಇರಬೇಕು ಎಂಬ ನಿಯಮವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದೆ.

ADVERTISEMENT

ಹಾಗಾಗಿ, ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆ ಇವೆ. ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಅದೇ ಕನಿಷ್ಠ 200 ಮಕ್ಕಳಿದ್ದರೂ ಸಾಕು ಎಸ್‌ಎಸ್‌ಎಲ್‌ಸಿಗೆ ಹೊಸ ಪರೀಕ್ಷಾ ಕೇಂದ್ರ ಮಂಜೂರು ಮಾಡಬಹುದು. ಇದರಿಂದ ಪರೀಕ್ಷಾ ಕೇಂದ್ರಗಳ ಸಂಖ್ಯೆ ಅಧಿಕವಾಗಿದ್ದು, ನಿಯಂತ್ರಣ ಹಾಗೂ ನಿರ್ವಹಣೆಯ ವೈಫಲ್ಯಗಳು ಮರುಕಳಿಸುತ್ತಿವೆ ಎನ್ನುವುದು ಶಿಕ್ಷಣ ಇಲಾಖೆಯ ವಿವರಣೆ.

ಕಳೆದ ಐದು ವರ್ಷಗಳಿಂದ ಈಚೆಗೆ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿರುವ ಮಕ್ಕಳ ಸಂಖ್ಯೆ 100ಕ್ಕಿಂತ ಕೆಳಗೆ ಇಳಿದಿದೆ. ಕೆಲವು ಪರೀಕ್ಷಾ ಕೇಂದ್ರಗಳು ಜನವಸತಿಯಿಂದ ದೂರವಿರುವ ಸುರಕ್ಷಿತವಲ್ಲದ ಪರಿಸರದಲ್ಲಿವೆ. ಇಂತಹ ಎಲ್ಲ ಕೇಂದ್ರಗಳನ್ನೂ ಪಟ್ಟಿ ಮಾಡಲಾಗಿದೆ. ಇದುವರೆಗೂ ಅಲ್ಲಿ ಪರೀಕ್ಷೆ ಬರೆಯುತ್ತಿದ್ದ ನಿಗದಿತ ಶಾಲೆಯ ಮಕ್ಕಳನ್ನು ಸಮೀಪದ ಬೇರೊಂದು ಕೇಂದ್ರಗಳಿಗೆ ನಿಯೋಜಿಸಲಾಗುತ್ತಿದೆ. ಈ ಕುರಿತು ಪರಿಷ್ಕೃತ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತನ್ನ ವೆಬ್‌ಸೈಟ್‌ನಲ್ಲಿ ಶೀಘ್ರ ಪ್ರಕಟಿಸಲಿದೆ.

2023ರ ಮಾರ್ಚ್‌–ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ ಆರೋಪದ ಮೇಲೆ 38 ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು. ವಿಜಯಪುರ, ಯಾದಗಿರಿ, ಬೆಳಗಾವಿ, ಬೀದರ್‌, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳನ್ನು ಅತಿ ಹೆಚ್ಚು ನಕಲು ನಡೆದ ಜಿಲ್ಲೆಗಳೆಂದು ಗುರುತಿಸಲಾಗಿತ್ತು. ಹಾಗಾಗಿ, 2024ರಲ್ಲಿ ನಡೆಯುವ ಪರೀಕ್ಷೆಯಲ್ಲಿ ನಕಲು, ವ್ಯವಹಾರಕ್ಕೆ ಸಂಪೂರ್ಣ ಕಡಿವಾಣ ಹಾಕಲು ಕ್ರಮಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿತ್ತು. ಮುಂದೆ ನಡೆಯುವ ಪರೀಕ್ಷೆಗಳನ್ನು ಅತ್ಯಂತ ವ್ಯವಸ್ಥಿತವಾಗಿ, ನಕಲಿಗೆ ಅವಕಾಶವಿಲ್ಲದಂತೆ, ಪಾರದರ್ಶಕವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎನ್ನುವುದು ಮೌಲ್ಯನಿರ್ಣಯ ಮಂಡಳಿಯ ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.