ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2022–23ನೇ ಸಾಲಿನಲ್ಲಿ ದೇಶದ 5.18 ಕೋಟಿ ಕಾರ್ಮಿಕರ ಜಾಬ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. 2021–22ಕ್ಕೆ ಹೋಲಿಸಿದರೆ 2022–23ರಲ್ಲಿ ಇದು ಶೇ 247ರಷ್ಟು ಹೆಚ್ಚಳ ಆಗಿದೆ.
ಕರ್ನಾಟಕದಲ್ಲಿ 2021–22ರಲ್ಲಿ 2.50 ಲಕ್ಷ ಮಂದಿಯ ಜಾಬ್ ಕಾರ್ಡ್ ಡಿಲೀಟ್ ಆಗಿತ್ತು. 2022–23ರಲ್ಲಿ 8.07 ಲಕ್ಷ ಕಾರ್ಮಿಕರ ಜಾಬ್ ಕಾರ್ಡ್ ರದ್ದುಗೊಳಿಸಲಾಗಿದೆ. ಲೋಕಸಭೆಯಲ್ಲಿ ಸದಸ್ಯರು ಮಂಗಳವಾರ ಕೇಳಿರುವ ಪ್ರಶ್ನೆಗೆ ಕೇಂದ್ರ ಪಂಚಾಯತ್‌ರಾಜ್ ಸಚಿವ ಗಿರಿರಾಜ್ ಸಿಂಗ್ ಈ ಸಂಬಂಧ ಉತ್ತರ ನೀಡಿದ್ದಾರೆ. ರಾಜ್ಯ ಸರ್ಕಾರಗಳು ನಿಯಮಿತವಾಗಿ ಜಾಬ್ ಕಾರ್ಡ್‌ಗಳ ನವೀಕರಣ ಮಾಡುತ್ತವೆ. ಹಾಗೆಂದು ಅವುಗಳನ್ನು ಅಳಿಸಲು ವ್ಯವಸ್ಥೆಯಲ್ಲಿನ ಲೋಪ ನಿರ್ದಿಷ್ಟ ಕಾರಣ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಯೋಜನೆಯನ್ನು ಜಾರಿಗೊಳಿಸುವುದು ರಾಜ್ಯ ಸರ್ಕಾರಗಳ ಹೊಣೆ ಎಂದು ಅವರು ಹೇಳಿದ್ದಾರೆ.
ಯೋಜನೆಯಡಿ ಕರ್ನಾಟಕದಲ್ಲಿ 2018-19ರಲ್ಲಿ 19.10 ಲಕ್ಷ, 2019–20ರಲ್ಲಿ 20.15 ಲಕ್ಷ, 2020–21ರಲ್ಲಿ 27.90 ಲಕ್ಷ ಹಾಗೂ 201–22ರಲ್ಲಿ 31.48 ಲಕ್ಷ ಮಹಿಳೆಯರು ಉದ್ಯೋಗ ಪಡೆದಿದ್ದರು. 2022–23ರಲ್ಲಿ ಉದ್ಯೋಗ ಪಡೆದ ಮಹಿಳೆಯರ ಸಂಖ್ಯೆ 27 ಲಕ್ಷಕ್ಕೆ ಕುಸಿದಿದೆ ಎಂಬ ಮಾಹಿತಿ ಸಚಿವರ ಉತ್ತರದಲ್ಲಿದೆ.
ಕಾರ್ಮಿಕರ ವೇತನ ಬಾಕಿ ಇಲ್ಲ: ನರೇಗಾ ಯೋಜನೆಯಲ್ಲಿ ರಾಜ್ಯದಲ್ಲಿ ಯಾವುದೇ ಕಾರ್ಮಿಕರ ಕೂಲಿಯನ್ನು ಬಾಕಿ ಉಳಿಸಿಕೊಂಡಿಲ್ಲ. ಈ ವರ್ಷದ ಜುಲೈ 21ರ ವರೆಗೆ ಕೂಲಿ ಸಾಮಗ್ರಿಗಳ ಬಾಕಿ ₹579 ಕೋಟಿ ಇದೆ ಎಂದು ಸಚಿವರು ಉತ್ತರ ನೀಡಿದ್ದಾರೆ.
ಅನುದಾನ ಹೆಚ್ಚಳ: ಇಲಾಖೆಯು ಕರ್ನಾಟಕ ರಾಜ್ಯಕ್ಕೆ 2014–15ರಲ್ಲಿ ₹1,602 ಕೋಟಿ ಅನುದಾನ ನೀಡಿತ್ತು. 2022–23ರಲ್ಲಿ ₹8,107 ಕೋಟಿಗೆ ಏರಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.