ADVERTISEMENT

ಬಿಜೆಪಿ ಅವಧಿಯಲ್ಲಿ ಹೆಚ್ಚು ವಕ್ಫ್ ನೋಟಿಸ್: ಗೃಹ ಸಚಿವ ಜಿ. ಪರಮೇಶ್ವರ

ಬಿಜೆಪಿ ನಾಯಕರಿಗೆ ಮುಖಭಂಗ ಮಾಡಲು ಯತ್ನಾಳ ಹೋರಾಟ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 6:52 IST
Last Updated 25 ನವೆಂಬರ್ 2024, 6:52 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ಬೆಂಗಳೂರು: 'ರೈತರಿಗೆ ವಕ್ಫ್ ನೋಟಿಸ್ ವಿಚಾರದಲ್ಲಿ ನಮ್ಮ ಸರ್ಕಾರದ ಮೇಲೆ ಮಾಡುತ್ತಿದ್ದ ಆಪಾದನೆ ಏನೆಂಬ ಸತ್ಯ ಬಯಲಾಗಿದೆ' ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, 'ಸತ್ಯವನ್ನು ಯಾವತ್ತೂ ಹೆಚ್ಚು ದಿನ ಮುಚ್ಚಿಡಲು ಆಗುವುದಿಲ್ಲ. ರೈತರಿಗೆ ನೋಟಿಸ್ ಕೊಡ್ಡಿದ್ದೇವೆ ಎಂದು ನಮ್ಮ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿದ್ದರು. ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿದೆ. ಈಗ ಬಿಜೆಪಿಯವರು ಏನು ಹೇಳುತ್ತಾರೆ' ಎಂದು ಪ್ರಶ್ನಿಸಿದರು.

'ಮಾಜಿ ಶಾಸಕ ಕುಮಾರ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಸುಮಾರು 2,900 ಎಕರೆಗೆ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಕೇವಲ 300 ಎಕರೆಗೆ ನೋಟಿಸ್ ನೀಡಲಾಗಿದೆ. ವಕ್ಫ್ ವಿಚಾರ ಇಟ್ಟುಕೊಂಡು ರಾಜ್ಯ ಸುತ್ತಲು ಹೊರಟಿರುವ ಬಿಜೆಪಿ ನಾಯಕರು, ಯಾರು ಜಾಸ್ತಿ ನೋಟಿಸ್ ನೀಡಿದ್ದು? ಯಾರ ಮೇಲೆ‌ ಆಪಾದನೆ ಮಾಡಬೇಕು? ಎಂಬುದನ್ನು ಈಗಲಾದರು ಅರ್ಥ ಮಾಡಿಕೊಳ್ಳಬೇಕು' ಎಂದರು.

ADVERTISEMENT

'ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ವಕ್ಫ್ ವಿಚಾರದಲ್ಲಿ ಬಿಜೆಪಿಯವರ ಮುಖಭಂಗ ಮಾಡಲು ಹೋರಾಟಕ್ಕೆ ಮುಂದಾಗಿದ್ದಾರೆ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಹೆಚ್ಚು ನೋಟಿಸ್ ಕೊಟ್ಟಿರುವುದು ಗೊತ್ತಾಗಿಯೇ ಬಿಜೆಪಿಯವರಿಗೆ ಮುಜುಗರ ಮಾಡಲು ಹೋರಾಟ ಮಾಡುತ್ತಿದ್ದಾರೆ' ಎಂದು ಕುಟುಕಿದರು.

'ನಾವು ವಿರೋಧ ಪಕ್ಷದಲ್ಲಿದ್ದಾಗ ರೈತರಿಗೆ ನೋಟಿಸ್ ನೀಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ನಾವು ಆ ವಿಚಾರವನ್ನು ಕೈಗೆತ್ತಿಕೊಂಡಿಲ್ಲ. ಈಗ ನಮ್ಮ ಗಮನಕ್ಕೆ ಬಂದಿದೆ. ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡುತ್ತೇವೆ' ಎಂದು ಹೇಳಿದರು.

'ಗೆದ್ದರೆ ಜನಾದೇಶ,‌ ಸೋತರೆ ಇವಿಎಂ ದೋಷ' ಎಂಬ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, 'ನಾವು ಮೊದಲಿಂದಲೂ ಹೇಳುತ್ತಿದ್ದೇವೆ, ಗೆದ್ದಾಗಲೂ ಹೇಳಿದ್ದೇವೆ. ನಾನು ಹೇಳಿದ್ದು ಏನು ಅಂತ ಸರಿಯಾಗಿ ಅರ್ಥಮಾಡಿಕೊಳ್ಳಲು ಹೇಳಿ. ಇವಿಎಂ ದುರ್ಬಳಕೆ ಸೆಲೆಕ್ಟಿವ್ ಆಗಿ ಮಾಡುತ್ತಾರೆ. ಸೆಲೆಕ್ಟೀವ್ ಆಗಿ ರಾಜ್ಯ ಆಯ್ಕೆ ಮಾಡುತ್ತಾರೆ, ಸೆಲೆಕ್ಟಿವ್ ಆಗಿ ಕ್ಷೇತ್ರ ಆಯ್ಕೆ ಮಾಡುತ್ತಾರೆ ಅಂತ ಹೇಳಿದ್ದೇವೆ. ನಾವು ಹೊಸದಾಗಿ ಹೇಳುತ್ತಿಲ್ಲ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ ಎಂದರು.

'2014ರ ನಂತರ ಬಂದ ಚುನಾವಣೆಗಳಲ್ಲಿ ಇವಿಎಂ ಹ್ಯಾಕ್ ಮಾಡಿದ್ದಾರೆ ಅಂತ ಹೇಳಿದ್ದೇವೆ. ಕೇವಲ ನಾನೊಬ್ಬನೇ ಹೇಳಿದ್ದರೆ ತಪ್ಪಾಗಬಹುದು. ಇಡೀ ದೇಶದಲ್ಲಿ ಜನ ಹೇಳುತ್ತಿದ್ದಾರೆ. ಮಹಾರಾಷ್ಟ್ರದ ಚುನಾವಣೆಯನ್ನು ವಿಶ್ಲೇಷಣೆ ಮಾಡುವಾಗ ಆ ರೀತಿಯಾದ ಚರ್ಚೆ ಆಗಿದೆ ಅಂತ ಹೇಳಿದ್ದೇನೆ. ಸಿ.ಟಿ.ರವಿಗೆ ಅರ್ಥ ಮಾಡಿಕೊಳ್ಳೋಕೆ ಆಗಿಲ್ಲ' ಎಂದು ತಿರುಗೇಟು ನೀಡಿದರು.

ಸರ್ಕಾರ ಸುಭದ್ರವಾಗಿದೆ:- 'ನಮಗೆ ಟಾಸ್ಕ್ ಕೊಟ್ಟರೆ ಒಂದು ತಿಂಗಳಲ್ಲಿ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬರುತ್ತೇನೆ' ಎಂಬ ಸಿ.ಪಿ.ಯೋಗೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿ, 'ಅದರ ಅಗತ್ಯ ನಮಗೆ ಇಲ್ಲ. ಸಾಮಾನ್ಯವಾಗಿ ಕಾಂಗ್ರೆಸ್‌ನಲ್ಲಿ ಬಿಜೆಪಿಯವರು ಮಾಡಿದ ಹಾಗೆ ಆಪರೇಷನ್ ಕಮಲ ಮಾಡಲ್ಲ. ಆ ರೀತಿ ನಾವು ಮಾಡಲು ಹೋಗುವುದಿಲ್ಲ. ಈಗ ಯೋಗೇಶ್ವರ್ ಆ ಮಾತು ಹೇಳಿದ್ದರೆ, ಅದರ ಅಗತ್ಯತೆ ನಮಗೆ ಇಲ್ಲ. 138 ಜನ ಶಾಸಕರಿದ್ದೇವೆ. ಸರ್ಕಾರ ಸುಭದ್ರವಾಗಿದೆ. ಇನ್ಯಾರನ್ನು ಕರೆದುಕೊಂಡು ಬರಬೇಕು' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.