ಮಂಡ್ಯ: ಕೋವಿಡ್ ಕರಿನೆರಳಿನಲ್ಲಿ ಕನಸು ಕಂಗಳ ಹುಡುಗಿಯೊಬ್ಬಳು ಪ್ರಾಣ ಕಳೆದುಕೊಂಡಳು. ಮನೆಯ ಬೆಳಕು ಆರಿ ಹೋದ ನಂತರ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು. ಅಧ್ಯಾತ್ಮ ಶಕ್ತಿಯಿಂದ ನೋವು ಮೀರಿದ ಮನೆ ಮಂದಿ ಈಗ ಮಗಳ ಕನಸಿಗೆ ರೆಕ್ಕೆ ಕಟ್ಟುತ್ತಿದ್ದಾರೆ, ಆ ಮೂಲಕ ಮಗಳನ್ನು ಮನೆ–ಮನದಲ್ಲಿ ಜೀವಂತವಾಗಿರುವ ಹೆಜ್ಜೆ ಇಡುತ್ತಿದ್ದಾರೆ.
ಕೇಂದ್ರ ವಿದ್ಯುತ್ ಹಾಗೂ ಕೈಗಾರಿಕೆಗಳ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಅವರಿಂದ ಕಳೆದ ವಾರ ₹ 1 ಕೋಟಿ ಸಾಲದ ಚೆಕ್ ಸ್ವೀಕರಿಸಿದ ಎಸ್.ಲತಾ ಅವರ ಯಶೋಗಾಥೆಯ ಹಿಂದೆ ಒಂದು ನೋವಿನ ಕತೆ ಇದೆ, ನೋವಿನ ಹಿಂದೆ ಸ್ಫೂರ್ತಿಯ ಕಿರಣವಿದೆ. ಲತಾ ಅವರು ನಗರದ ಕೆಎಚ್‌ಬಿ ಕಾಲೊನಿ ನಿವಾಸಿ. ಟೇಲರಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಅವರು ಅದಕ್ಕೆ ಗಾರ್ಮೆಂಟ್ ರೂಪ ಕೊಟ್ಟಿದ್ದರು. ಆ ಯಶೋಗಾಥೆಯ ಹಿಂದೆ ಪುತ್ರಿ ಕೆ.ಎಂ.ಸಿಂಧು ಅವರ ಮುನ್ನೋಟವಿತ್ತು.
ಎಂ.ಕಾಂನಲ್ಲಿ ಚಿನ್ನದ ಪದಕ ಪಡೆದಿದ್ದ ಸಿಂಧು ಅವರ ಕಲ್ಪನೆಯೊಂದಿಗೆ ‘ಲುಂಬಿಣಿ ಮಿನಿ ಗಾರ್ಮೆಂಟ್ಸ್’ ಅರಳಿತ್ತು, ಅಲ್ಲಿ 40 ಮಹಿಳೆಯರು ಬದುಕು ಕಟ್ಟಿಕೊಂಡಿದ್ದರು. ಬುದ್ಧನಿಗೆ ಜ್ಞಾನೋದಯವಾದ ಉದ್ಯಾನದ ಹೆಸರನ್ನೇ ಸಿಂಧು ಅವರು ತಮ್ಮ ಉದ್ದಿಮೆಗೆ ನಾಮಕರಣ ಮಾಡಿದ್ದರು. ದೊಡ್ಡ ಮಟ್ಟದಲ್ಲಿ ಉದ್ದಿಮೆ ಮಾಡಿ ಸಾವಿರಾರು ಮಹಿಳೆಯರಿಗೆ ಕೆಲಸ ಕೊಡಬೇಕು ಎಂಬ ಉನ್ನತ ಕನಸು ಸಿಂಧುವಿಗಿತ್ತು, ಮಹಿಳಾ ಸ್ವಾವಲಂಬನೆ ಅವರ ಉದ್ದೇಶವಾಗಿತ್ತು.
ತಾಯಿ ಲತಾ ಅವರ ಜೊತೆಗೂಡಿ ಗಾರ್ಮೆಂಟ್ ಮುನ್ನಡೆಸುವ ಜೊತೆಗೆ ಐಎಎಸ್ ಪರೀಕ್ಷೆಗೂ ಸಿಂಧು ಸಿದ್ಧರಾಗುತ್ತಿದ್ದರು. ಆದರೆ, 2020, ಡಿ.2ರಂದು ಕೋವಿಡ್‌ನಿಂದಾಗಿ ಸಿಂಧು ಪ್ರಾಣ ಪಕ್ಷಿ ಹಾರಿಹೋಯಿತು. ಅಂದಿನಿಂದ ಲುಂಬಿಣಿ ಮಿನಿ ಗಾರ್ಮೆಂಟ್ಸ್ ಸದ್ದು ನಿಲ್ಲಿಸಿತು. ಶೋಕದಲ್ಲೇ ಮುಳುಗಿದ್ದ ತಾಯಿ ಲತಾ, ತಂದೆ ಮಹಾದೇವಯ್ಯ, ಸಹೋದರ ಗೌತಮ ಈಗ ನೋವು ಮೀರಿದ್ದಾರೆ. ಮಗಳ ಕನಸಿಗೆ ರೆಕ್ಕೆ ಕಟ್ಟುತ್ತಿರುವ ಅವರು ಲುಂಬಿಣಿ ಗಾರ್ಮೆಂಟ್ಸ್‌ಗೆ ಹೊಸ ಉದ್ದಿಮೆ ರೂಪ ನೀಡುತ್ತಿದ್ದಾರೆ. ಒಂದೂವರೆ ವರ್ಷದಿಂದ ನಿಂತಿದ್ದ ಗಾರ್ಮೆಂಟ್ಸ್ ಈಗ ಎದ್ದು ನಿಲ್ಲುತ್ತಿದೆ.
₹ 1 ಕೋಟಿ ಸಾಲ: ಲತಾ ಅವರು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಅಡಿ (ಪಿಎಂಇಜಿಪಿ) ಬ್ಯಾಂಕ್ ಆಫ್ ಬರೋಡಾದಿಂದ ₹ 1 ಕೋಟಿ ಸಾಲ ಪಡೆದಿದ್ದಾರೆ. ಈ ಮೊದಲು ₹ 25 ಲಕ್ಷ ಪಡೆದಿದ್ದ ಅವರು ಸಮರ್ಪಕವಾಗಿ ಸಾಲ ಹಿಂದಿರುಗಿಸಿ ಮಾದರಿಯಾಗಿದ್ದಾರೆ. ಅದೇ ಆಧಾರದ ಮೇಲೆ ₹ 1 ಕೋಟಿ ಸಾಲ ಪಡೆದಿದ್ದಾರೆ. ಲತಾ ಕುಟುಂಬದ ಯಶೋಗಾಥೆಗೆ ಸ್ವತಃ ಕೇಂದ್ರ ಸಚಿವ ಗುರ್ಜರ್ ಕೂಡ ಆಶ್ಚರ್ಯ ವ್ಯಕ್ತಪಡಿಸಿ ಉದ್ಯಮವನ್ನು ಎತ್ತರಕ್ಕೆ ಬೆಳೆಸುವಂತೆ ಶುಭ ಕೋರಿದ್ದಾರೆ.
ಲತಾ ಅವರು ಒಂದು ಸಣ್ಣ ಹೊಲಿಗೆ ಯಂತ್ರದಿಂದ ಟೇಲರಿಂಗ್ ವೃತ್ತಿ ಆರಂಭಿಸಿದ್ದರು. ಹೊಲಿಗೆಯಲ್ಲಿ ಹೊಸ ಹೊಸ ವಿನ್ಯಾಸ ಮಾಡುತ್ತಾ ಗಮನ ಸೆಳೆದಿದ್ದ ಅವರು ಮಗಳ ಮುನ್ನೋಟದೊಂದಿಗೆ ಮಿನಿ ಗಾರ್ಮೆಂಟ್ ಕಟ್ಟಿದ್ದರು. ಈಗದು 100 ಯಂತ್ರಗಳೊಂದಿಗೆ ನೂರಾರು ಮಹಿಳೆಯರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿದೆ.
ಉತ್ತಮ ಹೊಲಿಗೆಗೆ ಹೆಸರಾಗಿರುವ ಲತಾ ಅವರ ಗಾರ್ಮೆಂಟ್ ಹಲವು ಕಂಪನಿಗಳ ಆರ್ಡರ್ ಪಡೆಯುತ್ತಿತ್ತು. ಶರ್ಟ್, ಪ್ಯಾಂಟ್, ಚೂಡಿದಾರ್, ರೈನ್ ಕೋಟ್ ಸೇರಿ ಹಲವು ವಸ್ತ್ರಗಳು ಇಲ್ಲಿ ತಯಾರಾಗುತ್ತಿದ್ದವು. ಮಗಳ ಸಾವಿನಿಂದಾಗಿ ನಿಂತಿದ್ದ ಉದ್ದಿಮೆ ಈಗ ದೊಡ್ಡ ಮಟ್ಟಕ್ಕೇರುತ್ತಿದೆ.
‘ಮಹಿಳೆಯರ ಸ್ವಾವಲಂಬನೆ ನಮ್ಮ ಗಾರ್ಮೆಂಟ್ ಉದ್ದೇಶ. ಬಲು ಬೇಗ ಬ್ಯಾಂಕ್ ಸಾಲ ತೀರಿಸಿ ನಮ್ಮ ಉದ್ದಿಮೆ ಬೆಳೆಸುತ್ತೇವೆ. ಆ ಮೂಲಕ ಮಗಳನ್ನೂ ಸದಾ ಕಾಲ ಉಳಿಸಿಕೊಳ್ಳುತ್ತೇವೆ’ ಎಂದು ಲತಾ ಹೇಳಿದರು.
******
ಆಶ್ರಮದಂತಿರುವ ಗಾರ್ಮೆಂಟ್ಸ್
ಲತಾ ಅವರ ಮನೆಗೆ ಭೇಟಿ ನೀಡಿದರೆ ಅದು ಗಾರ್ಮೆಂಟ್‌ನಂತೆ ಕಾಣುವುದಿಲ್ಲ, ಒಂದು ಆಶ್ರಮಕ್ಕೆ ತೆರಳಿದ ಅನುಭವವಾಗುತ್ತದೆ. ಧಾರವಾಡದ ಮಹಾಮನೆ ಮಠದ ಬಸವಾನಂದ ಸ್ವಾಮೀಜಿಯಿಂದ ಲತಾ ಅವರ ಕುಟುಂಬ ದೀಕ್ಷೆ ಪಡೆದಿದೆ. ಕುಟುಂಬದ ಪ್ರತಿ ಹೆಜ್ಜೆಯಲ್ಲೂ ಸ್ವಾಮೀಜಿಯ ಆಶೀರ್ವಾದವಿದೆ. ಅವರ ಮನೆಯ ಮೇಲಿನ ಕೊಠಡಿ ಬಸವಾನಂದ ಶ್ರೀಗಳಿಗೆ ಮೀಸಲಾಗಿದೆ. ಶ್ರೀಗಳು ಮಂಡ್ಯ ಭಾಗಕ್ಕೆ ಬಂದರೆ ತಂಗುವುದು ಇಲ್ಲಿಯೇ, ಜಾತಿ– ಮತ ಮೀರಿದ ಬಾಂಧವ್ಯ ಶ್ರೀಗಳದ್ದು. ಲತಾ ಅವರ ಮಗ, ಎಂ.ಟೆಕ್ ಪದವೀಧರ ಗೌತಮ ವೀಣಾವಾದಕರಾಗಿದ್ದು ಮನೆಯಲ್ಲಿ ಸಂಗೀತ ವಾತಾವರಣವೂ ಇದೆ.
‘ಹೊಸದಾಗಿ ಸಿದ್ಧಗೊಳ್ಳುತ್ತಿರುವ ಉದ್ದಿಮೆಯನ್ನು ನಮ್ಮ ಆರಾಧ್ಯ ಬಸವಾನಂದ ಶ್ರೀಗಳೇ ಉದ್ಘಾಟಿಸುತ್ತಾರೆ. ಮಗಳ ಸಾವಿನ ನೋವಿನಿಂದ ಹೊರಬರಲು ಶ್ರೀಗಳು ತೋರಿದ ಬೆಳಕೇ ಕಾರಣ’ ಎಂದು ಲತಾ ಅವರ ಪತಿ ಮಹಾದೇವಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.