ಬೆಂಗಳೂರು: ‘ಗಲ್ಲು ಶಿಕ್ಷೆ ವಿಧಿಸುವಾಗ ವಿಚಾರಣಾ ನ್ಯಾಯಾಲಯಗಳಿಗೆ ಭಾವನೆಗಳೇ ಮುಖ್ಯವಾಗಿರಬಾರದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ತಾಯಿಯನ್ನು ಕೊಲೆಗೈದಿದ್ದ ಮಗನಿಗೆ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಾಡು ಮಾಡಿ ಆದೇಶಿಸಿದೆ.
ಗಲ್ಲು ಶಿಕ್ಷೆ ರದ್ದುಪಡಿಸುವಂತೆ ಕೋರಿ ಅಪರಾಧಿ ತಿಮ್ಮಪ್ಪ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ಎಸ್.ರಾಚಯ್ಯ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಪೀಠ, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹ 25 ಸಾವಿರ ದಂಡ ವಿಧಿಸಿದೆ. ‘ಒಂದು ವೇಳೆ ದಂಡ ಪಾವತಿಸದಿದ್ದರೆ ಪುನಃ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಆದೇಶದಲ್ಲಿ ವಿವರಿಸಿದೆ.
‘ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಸೂಕ್ತವಲ್ಲ. ಗಲ್ಲು ಶಿಕ್ಷೆ ವಿಧಿಸಲು ಭಾವನೆಗಳು ಪ್ರಭಾವಶಾಲಿ ಅಂಶಗಳಾಗಬಾರದು. ಅಪರಾಧದ ಸ್ತರ ಹೆಚ್ಚು ಮುಖ್ಯವಾಗುತ್ತದೆ. ಅಂತೆಯೇ, ಇದು ಇದು ಅಪರೂಪದಲ್ಲೇ ಅಪರೂಪ ಎನ್ನುವಂತಹ ಪ್ರಕರಣವೇನೂ ಅಲ್ಲ’ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?: ‘ಹೆಂಡತಿ ನನ್ನನ್ನು ತೊರೆದು ಹೋಗಲು ತಾಯಿಯೇ ಕಾರಣ’ ಎಂದು ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯ ತಿಮ್ಮಪ್ಪ ತಾಯಿಯ ಜೊತೆ ವಾಗ್ವಾದ ನಡೆಸಿದ್ದ. ಈ ವೇಳೆ ಉದ್ವೇಗಕ್ಕೆ ಒಳಗಾಗಿದ್ದ ಆತ ಮಾರಕಾಸ್ತ್ರ ಬಳಸಿ ತನ್ನ ತಾಯಿಯ ಕುತ್ತಿಗೆಗೆ ಮಚ್ಚಿನಿಂದ ಹೊಡೆದಿದ್ದ. ಆಕೆ ಶಿರಚ್ಛೇದನಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರು’ ಎಂದು ತೀರ್ಮಾನಿಸಿದ್ದ ಚಿತ್ರದುರ್ಗದ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2018ರ ಜೂನ್ 2ರಂದು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.