ಬೆಂಗಳೂರು: ದೇಶವ್ಯಾಪಿಯಾಗಿ ಮೋಟಾರು ವಾಹನ ಕಾಯ್ದೆ (1988ರ ತಿದ್ದುಪಡಿ)ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಿದೆ. ಈ ತಿದ್ದುಪಡಿ ಕಾಯ್ದೆಯು ವಾಹನ ಸವಾರರು ಮತ್ತು ಮಾಲೀಕರನ್ನು ನಿದ್ದೆಗೆಡಿಸಿರುವುದು ಸುಳ್ಳಲ್ಲ!
ರಸ್ತೆ ಅಪಘಾತಗಳಿಂದ ಸಂಭವಿಸುವ ಪ್ರಾಣಹಾನಿಯನ್ನು ತಪ್ಪಿಸುವ ಸಲುವಾಗಿ ವಾಹನ ಸವಾರರನ್ನು ನಿಯಂತ್ರಿಸಲು ಗಣನೀಯ ಪ್ರಮಾಣದಲ್ಲಿ ದಂಡದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಇದನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಮರ್ಥಸಿಕೊಂಡಿದ್ದಾರೆ.
ಇದನ್ನೂ ಓದಿ: ಅಪಘಾತಕ್ಕೆ ಕಡಿವಾಣ: ದುಬಾರಿ ದಂಡ
ರಸ್ತೆ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರನ್ನು ನಿಯಂತ್ರಿಸಲು ಹೆಚ್ಚಿನ ಪ್ರಮಾಣದಲ್ಲಿ ದಂಡ ಹಾಕುವುದೇ ಪರಿಹಾರವೆಂದು ಸರ್ಕಾರ ಭಾವಿಸಿದೆ. ಆದರೆ ಸಾಕಷ್ಟು ಪ್ರಮಾಣದ ದಂಡ ವಸೂಲಿಸಮಾಜದಲ್ಲಿ ಭ್ರಷ್ಟಚಾರಕ್ಕೆ ಅನುವು ಮಾಡಿಕೊಡುತ್ತದೆ.
ಮೋಟಾರು ವಾಹನ ಕಾಯ್ದೆ 1988, ಸೆಕ್ಷನ್ 140 ರ ಅಡಿಯಲ್ಲಿ ಅಫಘಾತ ಸಂಭವಿಸಿದ ನಂತರ ಗಾಯಾಳುವಿನ ತುರ್ತು ಚಿಕಿತ್ಸೆಗಾಗಿ ₹ 25 ಸಾವಿರ ಅಥವಾ ಮೃತಪಟ್ಟ ವ್ಯಕ್ತಿಯ ಕುಟುಂಬದವರ ಅಂತ್ಯಕ್ರಿಯೆ, ಇತ್ಯಾದಿ ಕಾರಣಕ್ಕೆ ₹ 50 ಸಾವಿರ ತಕ್ಷಣದ ಪರಿಹಾರವನ್ನು ವಿಮಾ ಕಂಪನಿಯಿಂದ ಪಡೆಯುವ ಹಕ್ಕನ್ನು ನೀಡಿತ್ತು. ಆದರೆ ಮೋಟಾರು ವಾಹನ ಕಾಯ್ದೆ 1988ರ ತಿದ್ದುಪಡಿ ಕಾಯ್ದೆ ಇಂತಹ ಹಕ್ಕನ್ನು ಮೊಟಕುಗೊಳಿಸಿದೆ. ಅಫಘಾತಕ್ಕೆ ಒಳಗಾದ ವ್ಯಕ್ತಿಗೆ ಯಾವುದೇ ಬಗೆಯ ಮಧ್ಯಂತರ ಪರಿಹಾರ ಸಿಗುವುದಿಲ್ಲ. ಪರಿಹಾರ ಪಡೆಯಬೇಕಾದರೆ ನ್ಯಾಯಾಲಯದಲ್ಲಿ ಅಪಘಾತ ಪ್ರಕರಣದ ತೀರ್ಪು ಬರುವವರೆಗೂ ಕಾಯಬೇಕು!
ಈ ಹಿಂದೆ ಸೆಕ್ಷನ್ 145 ರ ಅಡಿಯಲ್ಲಿ ಮೂರನೇ ವ್ಯಕ್ತಿಯ(Third Party Liability) ನಿಬಂಧನೆ ಇತ್ತು. ತಿದ್ದುಪಡಿ ಮೂಲಕ 'ಹೊಣೆಗಾರಿಕೆ' ಪದದ ವ್ಯಾಪ್ತಿಯನ್ನು ಕುಗ್ಗಿಸಲಾಗಿದೆ. ಅಂದರೆ ವಾಹನ ಚಾಲಕ/ನಿರ್ವಾಹಕ/ ಸಹಾಯಕರು (ವಿಶೇಷವಾಗಿ ಗೂಡ್ಸ್ ವಾಹನಗಳ ಹಮಾಲಿಗಳು) ಕಾರ್ಮಿಕ ಪರಿಹಾರ ಕಾಯ್ದೆಯ ಅನ್ವಯ ಪರಿಹಾರ ಪಡೆಯುವ ಹಕ್ಕನ್ನು ಮೊಟಕುಗೊಳಿಸಲಾಗಿದೆ. ವಾಹನದಲ್ಲಿನ ಸಹ ಪ್ರಯಾಣಿಕನನ್ನು ಮೂರನೇ ವ್ಯಕ್ತಿ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ಉದಾಹರಣೆಗೆ ವಾಹನ ಅಪಘಾತ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ್ದರೆ ವಿಮಾ ಕಂಪನಿ ನಷ್ಟ ಪರಿಹಾರದ ಜವಾಬ್ದಾರಿಯಿಂದ ನುಣುಚಿಕೊಂಡು ವಾಹನದ ಚಾಲಕ ಮತ್ತು ಮಾಲೀಕನನ್ನು ಹೊಣೆಗಾರನನ್ನಾಗಿಸಿದೆ.
ಅಂತೆಯೇ ಸೆಕ್ಷನ್ 147 ರ ಅಡಿಯಲ್ಲಿನ ವಿಮಾ ಕಂಪನಿಗಳ ಮೇಲಿನ ಅಪರಿಮಿತ ಹೊಣೆಗಾರಿಕೆಯನ್ನು (Unlimited Liability) ತೆಗೆದುಹಾಕಲಾಗಿದೆ. ಉದಾಹರಣೆಗೆ ವಾಹನದ ವಿಮೆಯನ್ನು 10 ಲಕ್ಷಕ್ಕೆ ಮಾಡಿಸಿದ್ದರೆ, ವಿಮಾ ಕಂಪನಿಗಳು ಕೇವಲ 10 ಲಕ್ಷ ರೂಪಾಯಿವರೆಗಿನ ಪರಿಹಾರ ನೀಡಲಷ್ಟೇ ಜವಾಬ್ದಾರಿ ಹೊಂದಿರುತ್ತವೆ. ಒಂದು ಪಕ್ಷ ನ್ಯಾಯಾಲಯವು 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡಿ ಎಂದು ತೀರ್ಪು ಕೊಟ್ಟರೆ ವಾಹನದ ಮಾಲೀಕ ಉಳಿದ ಪರಿಹಾರವನ್ನು ನೀಡಬೇಕಾಗುತ್ತದೆ.
ಕಾರ್ಮಿಕ ವಲಯಕ್ಕೆ ಆಘಾತಕಾರಿಯಾಗುವಂತಹ ಅಂಶವೊಂದಿದೆ. ಕೆಲಸದ ಅವಧಿಯಲ್ಲಿ (During the course of employment) ವಾಹನ ಚಾಲಕ ಅಫಘಾತದಲ್ಲಿ ಗಾಯಗೊಂಡರೆ ಅಥವಾ ಸಾವನ್ನಪ್ಪಿದರೆ ವಾಹನದ ಮಾಲೀಕ ಮತ್ತು ವಿಮಾ ಕಂಪನಿಯನ್ನು ಹೊಣೆಗಾರರನ್ನಾಗಿಸಿ ಕಾರ್ಮಿಕ ನ್ಯಾಯಾಲಯದಲ್ಲಿ ಪರಿಹಾರ ಕೋರಬಹುದಾಗಿತ್ತು. ಸದರಿ ತಿದ್ದುಪಡಿ ಇದರ ಸ್ವರೂಪವನ್ನು ಬದಲಾಯಿಸಲಾಗಿದೆ. ಅಫಘಾತ ಚಾಲಕನ ಅಜಾಗರೂಕತೆಯಿಂದ ಸಂಭವಿಸಿದ್ದರೆ ನ್ಯಾಯಾಲಯದಲ್ಲೂ ಪರಿಹಾರ ಪಡೆಯುವುದು ಅಸಾಧ್ಯ! ಮೊದಲೇ ಹದಗೆಟ್ಟ ರಸ್ತೆಗಳು ಒತ್ತಡದ ಕೆಲಸ, ಹಠಾತನೇ ಎದುರಾಗುವ ಸಮಸ್ಯೆಗಳ ಮಧ್ಯೆ ಚಾಲಕ ವೃತ್ತಿ ಮಾಡುವವರಿಗೆ ಈ ತಿದ್ದುಪಡಿಯಿಂದ ತೊಂದರೆಯಾಗಲಿದೆ.
ಇದನ್ನು ಸರಿದೂಗಿಸಲು ವಾಹನ ಚಾಲಕ/ನಿರ್ವಾಹಕ/ಹಮಾಲಿಗಳಿಗೆ ವಿಮಾ ಪಾಲಿಸಿಯಲ್ಲಿ ಹೆಚ್ಚಿನ ಹಣ ನೀಡಿ ವಿಮೆ ಪಡೆದುಕೊಳ್ಳುವ ಹೊಣೆಗಾರಿಕೆಯನ್ನು ವಾಹನ ಮಾಲೀಕರ ಮೇಲೆ ವರ್ಗಾಯಿಸಲಾಗಿದೆ. ಪ್ರತಿವರ್ಷವೂ ವಿಮೆ ಪಾಲಿಸಿಯನ್ನು ನವೀಕರಿಸಬೇಕು ಅಲ್ಲದೇ ವರ್ಷ ವರ್ಷವೂ ವಿಮೆಯ ಮೊತ್ತ ಏರಿಕೆಯಾಗುತ್ತದೆ. ಇದರಿಂದ ವಾಹನ ಮಾಲೀಕರಿಗೆ ಹೆಚ್ಚಿನ ಹೊರೆಯಾಗುತ್ತದೆ.
ಇದನ್ನೂ ಓದಿ:ಭಾರಿ ದಂಡದ ಭಯ: ವಾಹನ ವಿಮೆಗೆ ಮುಗಿಬಿದ್ದ ಜನ
ಸಣ್ಣಪುಟ್ಟ ನ್ಯೂನತೆಗಳಿದ್ದಾಗ ಅಥವಾ ವಿಮಾ ಪಾಲಿಸಿಯಲ್ಲಿನ ನಿಬಂಧನೆಗಳನ್ನು ಅರ್ಥೈಸುವಲ್ಲಿ ತೊಡಕುಗಳು ಕಂಡುಬಂದಾಗ ಸೆಕ್ಷನ್ 150 ರ ಅಡಿಯಲ್ಲಿ ವಿಮಾ ಕಂಪನಿಗಳು ತೊಂದರೆಗೆ ಒಳಗಾದವರಿಗೆ ಪರಿಹಾರ ನೀಡಿ ನಂತರ ವಾಹನದ ಮಾಲೀಕರಿಂದ ಪರಿಹಾರದ ಹಣವನ್ನು ಹಿಂಪಡೆಯುವಂತಹ ಅವಕಾಶವಿತ್ತು. ಆದರೆ ತಿದ್ದುಪಡಿಯು ಭಾದಿತನ ಸಾಮಾಜಿಕ ಹಿತಾಸಕ್ತಿಯನ್ನು ಪರಿಗಣಿಸದೇ ವಿಮಾ ವಲಯವನ್ನು ಸಂಪೂರ್ಣವಾಗಿ ಲಾಭ ನಷ್ಟದ ಸಂಸ್ಥೆಯಂತೆ ಬಿಂಬಿಸಲಾಗಿದೆ.
ಈ ಹಿಂದೆ ಇದ್ದ ಸೆಕ್ಷನ್ 163 ಎ ಪ್ರಕಾರ ರಚನಾತ್ಮಕ ಸೂತ್ರದಡಿಯಲ್ಲಿ ಗಾಯಾಳು ಮತ್ತು ಮೃತರಿಗೆ ವೈದ್ಯಕೀಯ ವೆಚ್ಚದ ಪರಿಹಾರವನ್ನು ನೀಡಲು ಸಾಧ್ಯವಿತ್ತು. ಇದಕ್ಕೆ ಬದಲಾಗಿ ಜಾರಿಗೆ ಬಂದಿರುವ ಸೆಕ್ಷನ್ 164 ಇಂತಹ ಸೌಲಭ್ಯಗಳನ್ನು ಮೊಟಕುಗೊಳಿಸಿ ಒಂದು ಬಾರಿಗೆ ಮಾತ್ರ ಗಾಯಾಳುವಿಗೆ ₹ 2.50 ಲಕ್ಷ ಮತ್ತು ಮೃತರಿಗೆ ₹ 5 ಲಕ್ಷ ನಿರ್ದಿಷ್ಟ ವೈದ್ಯಕೀಯ ವೆಚ್ಚ ಪಡೆಯಲು ಅನುವು ಮಾಡಿಕೊಟ್ಟಿದೆ.
ಹಿಂದಿನ ಕಾಯ್ದೆಯ ಸೆಕ್ಷನ್ 166 ರ ಅಡಿಯಲ್ಲಿ ಗಾಯಾಳು ಪರಿಹಾರ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ಇರಲಿಲ್ಲ. ತಿದ್ದುಪಡಿ ಪ್ರಕಾರ ಗಾಯಾಳು ಅಫಘಾತ ಸಂಭವಿಸಿದ ಆರು ತಿಂಗಳ ಒಳಗೆ ಪ್ರಕರಣ ದಾಖಲಿಸಬೇಕು. ಇದರಿಂದ ಗಂಭೀರ ಗಾಯಗಳಿಂದ ನರಳುವ ವ್ಯಕ್ತಿ ಚಿಕಿತ್ಸೆಯನ್ನು ಬಿಟ್ಟು ನ್ಯಾಯಾಲಯ ಅಥವಾ ವಕೀಲರ ಕಚೇರಿ ಅಥವಾ ಪೋಲಿಸ್ ಠಾಣೆಗೆ ಎಡತಾಕಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ?
ಅಲ್ಲದೇ ಕೆಲವು ವಿಶೇಷ ಪ್ರಕರಣಗಳಲ್ಲಿ(ವಿಮಾ ಸೌಲಭ್ಯವಿಲ್ಲದೇ ಇರುವ) ಗಾಯಾಳುವಿಗೆ 2.50 ಲಕ್ಷ ಮತ್ತು ಮೃತನಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವ ಶಾಸನಾತ್ಮಕ ಹೊಣೆಗಾರಿಕೆ ಸರ್ಕಾರಕ್ಕಿತ್ತು. ಆದರೆ ಪ್ರಸ್ತುತ ತಿದ್ದುಪಡಿ ಮೂಲಕ ಅದನ್ನೂ ತೆಗೆದುಹಾಕಿ ವಿಮಾ ಕಂಪನಿಗಳನ್ನು ಜನರ ಹಿತಾಸಕ್ತಿ ವಲಯದಿಂದ ಹೊರಗಿಡಲಾಗಿದೆ.
ಈ ಮೇಲಿನ ಎಲ್ಲಾ ಅಂಶಗಳ ನೇರ ಪರಿಣಾಮ ವಾಹನ ಮಾಲೀಕರು ಮತ್ತು ಚಾಲಕರ ಮೇಲೆ ಬೀಳಲಿದೆ. ವರ್ಷದಿಂದ ವರ್ಷಕ್ಕೆ ಲಾಭವನ್ನು ಹೆಚ್ಚಳ ಮಾಡಿಕೊಳ್ಳುತ್ತಿರುವ ವಿಮಾ ಕಂಪನಿಗಳು ಸರ್ಕಾರದ ಮೂಲಕವೇ ನೀತಿ ನಿಯಮಗಳನ್ನು ಬದಲಾಯಿಸುವಷ್ಟು ಬಿಗಿಹಿಡಿತ ಸಾಧಿಸಿರುವುದು ಈ ತಿದ್ದುಪಡಿಯಿಂದ ತಿಳಿದುಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.