ADVERTISEMENT

4 ಸಾವಿರ ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ– ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2023, 15:50 IST
Last Updated 3 ಡಿಸೆಂಬರ್ 2023, 15:50 IST
<div class="paragraphs"><p>ಸಿ.ಎಂ. ಸಿದ್ದರಾಮಯ್ಯ</p></div>

ಸಿ.ಎಂ. ಸಿದ್ದರಾಮಯ್ಯ

   

ಬೆಂಗಳೂರು:‘ಪ್ರಸಕ್ತ ಸಾಲಿನಲ್ಲಿ (2023-24) 4 ಸಾವಿರ ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಉದ್ದೇಶಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ವಿಶ್ವ ಅಂಗವಿಕಲರ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಪ್ರಸಕ್ತ ಸಾಲಿನಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿ ₹2 ಕೋಟಿ ವೆಚ್ಚದಲ್ಲಿ ಏಳು ಜಿಲ್ಲೆಗಳಲ್ಲಿ 10 ವಸತಿ ಶಾಲೆಗಳನ್ನು ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಅಂಗವಿಕಲರ ಶೈಕ್ಷಣಿಕ, ವೈದ್ಯಕೀಯ, ಪುನರ್ವಸತಿ, ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿಗೆ ₹284.27 ಕೋಟಿ  ಮೀಸಲಿಡಲಾಗಿದೆ. ಅಂಗವಿಕಲರು ಮರಣ ಹೊಂದಿದರೆ ಅವರ ಕುಟುಂಬದವರಿಗೆ ನೀಡುವ ಪರಿಹಾರ ಮೊತ್ತವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಏರಿಸಲಾಗಿದೆ’ ಎಂದರು.

‘2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 13,24,205 ಅಂಗವಿಕಲರಿದ್ದಾರೆ. ಅಂಗವಿಕಲರು ಸಮಾಜಕ್ಕೆ ಹೊರೆ ಅಲ್ಲ. ಇತ್ತೀಚಿನ ದಿನಗಳಲ್ಲಿ ಕ್ರೀಡೆಯೂ ಸೇರಿದಂತೆ ಎಲ್ಲ ರಂಗಗಳಲ್ಲಿ ಅಂಗವಿಕಲರು ಅಪ್ರತಿಮ ಸಾಧನೆ ತೋರುತ್ತಿದ್ದಾರೆ. ಹೀಗಾಗಿ, ಸಮಾಜಕ್ಕೆ ಹೊರೆ ಎನ್ನುವ ಭಾವನೆಯನ್ನು ದೂರ ಮಾಡಬೇಕಿದೆ. ಅಂಗವಿಕಲರಿಗೆ ಶಿಕ್ಷಣ, ಉದ್ಯೋಗಗಳಲ್ಲಿ ಸಮಾನ ಅವಕಾಶ ದೊರಕಿಸುವುದು ಸರ್ಕಾರದ ಕರ್ತವ್ಯ’ ಎಂದರು.

‘ಇತ್ತೀಚೆಗೆ ನಡೆಸಲಾದ ಜನ ಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದ ಹೆಚ್ಚಿನ ಸಂಖ್ಯೆಯ ಅಂಗವಿಕಲರು, ಉದ್ಯೋಗ, ಶಿಕ್ಷಣ ಹಾಗೂ ವಾಹನ ಖರೀದಿಗೆ ನೆರವು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಗಳ ಕುರಿತಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ಅಂಗವಿಕಲರ ಯೋಜನೆಗಳ ಕೈಪಿಡಿಯನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಖಾತೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.