ADVERTISEMENT

ಕಲಬುರ್ಗಿ, ಗೌರಿ ಹತ್ಯೆ ಸ್ಮರಣೆ: ಆ.30ರಿಂದ ಸೆ. 5 ರವರೆಗೆ ವಿಶೇಷ ಅಭಿಯಾನ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 19:31 IST
Last Updated 5 ಆಗಸ್ಟ್ 2018, 19:31 IST
ನಗರದಲ್ಲಿ ಭಾನುವಾರ ಗೌರಿ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿದ್ದ ಸಮಾನ ಮನಸ್ಕರ ಸಭೆಯಲ್ಲಿ ಪ್ರೊ.ವಿ.ಎಸ್. ಶ್ರೀಧರ್ ಅವರು ಮಾತನಾಡಿದರು. ಕೆ.ಎಲ್. ಅಶೋಕ್ ಮತ್ತು ಸಾಹಿತಿ ಡಾ.ಚಂದ್ರಶೇಖರ ಪಾಟೀಲ ಇದ್ದರು –ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ಗೌರಿ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿದ್ದ ಸಮಾನ ಮನಸ್ಕರ ಸಭೆಯಲ್ಲಿ ಪ್ರೊ.ವಿ.ಎಸ್. ಶ್ರೀಧರ್ ಅವರು ಮಾತನಾಡಿದರು. ಕೆ.ಎಲ್. ಅಶೋಕ್ ಮತ್ತು ಸಾಹಿತಿ ಡಾ.ಚಂದ್ರಶೇಖರ ಪಾಟೀಲ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೆ ಒಂದು ವರ್ಷ ತುಂಬಿರುವ ಪ್ರಯುಕ್ತ ಹಾಗೂ ವಿಚಾರವಾದಿಗಳು, ಬರಹಗಾರರಿಗಿರುವ ಜೀವ ಬೆದರಿಕೆ ವಿರುದ್ಧ ಜಾಗೃತಿ ಮೂಡಿಸಲು ಆ. 30ರಿಂದ ಸೆ. 5ರವರೆಗೆ ಧಾರವಾಡದಿಂದ ಬೆಂಗಳೂರಿನವರೆಗೆ ವಿಶೇಷ ಅಭಿಯಾನ ನಡೆಯಲಿದೆ.

ಪ್ರೊ.ಎಂ.ಎಂ. ಕಲಬುರ್ಗಿ ಅವರನ್ನು 2015ರ ಆ. 30ರಂದು ಹತ್ಯೆ ಮಾಡಲಾಗಿತ್ತು. ಗೌರಿ ಅವರನ್ನು 2017ರ ಸೆ. 5ರಂದು ಹತ್ಯೆ ಮಾಡಲಾಗಿತ್ತು. ಹತ್ಯೆ ನಡೆಸುವ ಶಕ್ತಿಗಳ ವಿರುದ್ಧ ಹೋರಾಟ ಮತ್ತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಭಾನುವಾರ ನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಘಟಕ ಕೆ.ಎಲ್‌.ಅಶೋಕ್‌ ಹೇಳಿದರು.

ಆಯಾ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ತಮ್ಮದೇ ಆದ ರೀತಿಯಲ್ಲಿ ಕಾರ್ಯಕ್ರಮ ನಡೆಸಬೇಕು. ಕಲಬುರ್ಗಿ ಹುಟ್ಟೂರು ವಿಜಯಪುರ ಜಿಲ್ಲೆಯ ಜನರೂ ಭಾಗವಹಿಸಲಿದ್ದಾರೆ. ಧಾರವಾಡ, ಮಂಗಳೂರು, ಶಿವಮೊಗ್ಗ, ಮೈಸೂರು, ಬೆಂಗಳೂರಿನಲ್ಲಿ ಸಮಾವೇಶ ನಡೆಸಲಾಗುವುದು. ಆಯಾ ಪ್ರದೇಶದ ಅನುಕೂಲಕ್ಕೆ ತಕ್ಕಂತೆ ಜನರು ತಮ್ಮದೇ ಆದ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ರೂಪಿಸಬಹುದು ಎಂದು ಅವರು ಹೇಳಿದರು.

ADVERTISEMENT

ಆ.30 ರಂದು ಕಲಬುರ್ಗಿ ದಿನ ಹಾಗೂ ಸೆ. 5ರಂದು ಗೌರಿ ದಿನ ಆಚರಿಸಲಾಗುವುದು. ಗೌರಿ ಲಂಕೇಶ್‌ ಪತ್ರಿಕೆಯನ್ನೂ ಹೊರತರಲಾಗುವುದು. ಗೌರಿ ಸ್ಮಾರಕ ಟ್ರಸ್ಟ್‌ನಿಂದ ಪೆನ್‌ಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಇಂಥ ಕಾರ್ಯಕ್ರಮಗಳಿಗೆ ನಿಧಿಯಾಗಿ ಬಳಸಲಾಗುವುದು ಎಂದರು.

ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ, ‘ಗೌರಿ ಪ್ರಕರಣ ಇನ್ನೂ ತನಿಖೆ ಹಂತದಲ್ಲಿರುವುದರಿಂದ ಯಾವ ಸಂಘಟನೆ ಮೇಲೂ ಆರೋಪ ಮಾಡುವುದು ಬೇಡ. ಸತ್ಯ ಏನು ಎಂಬುದು ಆರೋಪಿಗಳ ಬಾಯಿಯಿಂದಲೇ ಬರಲಿ. ಪ್ರಕರಣ ತಾರ್ಕಿಕ ಅಂತ್ಯ ಕಾಣಲಿ' ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಪ್ರೊ.ವಿ.ಎಸ್‌.ಶ್ರೀಧರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.