ADVERTISEMENT

ಇಎಸ್ಐ ವೇತನ ಮಿತಿ ಹೆಚ್ಚಳಕ್ಕೆ ಸಹಿ ಸಂಗ್ರಹ ಚಳವಳಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 22:46 IST
Last Updated 22 ನವೆಂಬರ್ 2023, 22:46 IST
ಸಹಿ ಚಳವಳಿ ಅಭಿಯಾನದಲ್ಲಿ ಭಾಗವಹಿಸಿದ್ದ ವಿವಿಧ ಕಾರ್ಖಾನೆಗಳ ಕಾರ್ಮಿಕರು
ಸಹಿ ಚಳವಳಿ ಅಭಿಯಾನದಲ್ಲಿ ಭಾಗವಹಿಸಿದ್ದ ವಿವಿಧ ಕಾರ್ಖಾನೆಗಳ ಕಾರ್ಮಿಕರು   

ಬೊಮ್ಮನಹಳ್ಳಿ: ಕಾರ್ಮಿಕರು ಇಎಸ್ಐ ಸೌಲಭ್ಯ ಪಡೆಯಲು ಇರುವ ವೇತನ ಮಿತಿಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ 25 ಲಕ್ಷ ಜನರ ಸಹಿಸಂಗ್ರಹ ಚಳವಳಿಗೆ ಭಾನುವಾರ ಚಾಲನೆ ನೀಡಲಾಯಿತು.

‘ಕರ್ನಾಟಕ ವರ್ಕರ್ಸ್ ಯೂನಿಯನ್’ ಸಂಘಟನೆಯು ಬೊಮ್ಮಸಂದ್ರದಲ್ಲಿ ಈ ಚಳವಳಿ ಹಮ್ಮಿಕೊಂಡಿತ್ತು.

ಕಾರ್ಮಿಕರು ಇಎಸ್ಐ ವ್ಯಾಪ್ತಿಗೆ ಒಳಪಡಲು ಈಗಿರುವ ₹ 21,000 ವೇತನದ ಮಿತಿಯನ್ನು ಹೆಚ್ಚಿಸಬೇಕು. ಸೇವಾ ಅವಧಿ ಹೆಚ್ಚಿದಂತೆ ವೇತನದಲ್ಲಿಯೂ ಹೆಚ್ಚಳ ಆಗುವುದರಿಂದ ಕಾರ್ಮಿಕರು ಇಎಸ್ಐ ವ್ಯಾಪ್ತಿಯಿಂದ ಹೊರಗುಳಿಯುತ್ತಾರೆ. ಇದರಿಂದ ಆರೋಗ್ಯ ಸೇವೆ ದುಬಾರಿಯಾಗಿರುವ ಈ ದಿನಗಳಲ್ಲಿ ಕಾರ್ಮಿಕರು ಅಭದ್ರತೆಗೆ ಸಿಲುಕುತ್ತಿದ್ದಾರೆ ಎಂದು ಯೂನಿಯನ್ ಪ್ರಧಾನ ಕಾರ್ಯದರ್ಶಿ ಇಕೆಎನ್ ರಾಜನ್ ಹೇಳಿದರು.

ADVERTISEMENT

‘ಖಾಸಗಿ ಸಂಸ್ಥೆಗಳ ಆರೋಗ್ಯ ವಿಮೆ ಯೋಜನೆಗಳು ಜನರಿಂದ ವಸೂಲಿಬಾಜಿ ನಡೆಸುತ್ತವೆಯೇ ಹೊರತು, ಗ್ರಾಹಕರ ಆರೋಗ್ಯದ ಕಾಳಜಿಗೆ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ಯಾವುದೇ ವೇತನ ಮಿತಿ ಇಲ್ಲದೇ ಎಲ್ಲ ಕಾರ್ಮಿಕರನ್ನು ಇಎಸ್ಐ ವ್ಯಾಪ್ತಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಲು ಸಹಿ ಸಂಗ್ರಹ ಚಳವಳಿ ಆರಂಭಿಸಲಾಗಿದೆ’ ಎಂದು ಕಾರ್ಮಿಕ ಮುಖಂಡ ಮಿಲ್ಕಿಯೋರ್ ಹೇಳಿದರು.

ವರ್ಷದ 15 ದಿನಗಳ ಸೇವೆಯನ್ನು ಗ್ರ್ಯಾಚುಟಿಗೆ ಪರಿಗಣಿಸಲಾಗುತ್ತಿದ್ದು, ವರ್ಷಕ್ಕೆ 60 ದಿನಗಳವರೆಗೆ ಹೆಚ್ಚಿಸಬೇಕು. ಗುತ್ತಿಗೆ ಪದ್ಧತಿ ರದ್ದಾಗಬೇಕು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು ಎಂಬ ಬೇಡಿಕೆಗಳನ್ನು ಒಳಗೊಂಡು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖ್ಯಸ್ಥೆ ಛಾಯಾದೇವಿ ಹೇಳಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸಂಚಾಲಕ ಕೆ.ವಿ.ಭಟ್, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡ ರೇವಣ್ಣ ಇದ್ದರು. ಉಪಾಧ್ಯಕ್ಷ ರಾಮಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.