ಧಾರವಾಡ: ‘ಸಂಸದ ಅನಂತಕುಮಾರ ಹೆಗಡೆ ಅವರು ಸೆಕ್ಯುಲರ್ (ಜಾತ್ಯತೀತ) ಪದವನ್ನು ಸಂವಿಧಾನದಿಂದ ತೆಗೆಯಬೇಕು ಎಂದು ಹೇಳಿಕೆ ನೀಡಿರುವುದು ಅನವಶ್ಯಕ. ಅವರು ಕ್ಷಮೆಯಾಚಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಒತ್ತಾಯಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆ ವಿಷಯದ ಕುರಿತು ಚರ್ಚೆ ಆಗಬೇಕೋ? ಬೇಡವೋ? ಎಂಬ ಕುರಿತು ಎಲ್ಲರೂ ಕೂಡಿ ವಿಚಾರ ಮಾಡಬೇಕಾಗುತ್ತದೆ. ಅವರು ಈ ರೀತಿಯ ಅನವಶ್ಯಕ ಹೇಳಿಕೆ ನೀಡುವುದರಿಂದ ನಮಗೂ (ಪಕ್ಷಕ್ಕೂ) ಧಕ್ಕೆಯಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
‘ಅನಂತಕುಮಾರ ಹೆಗಡೆ ಅವರು ಜನರ ಸಮಸ್ಯೆ, ತೊಂದರೆಗಳ ಕುರಿತು ಮಾತನಾಡಬೇಕು. ಅದನ್ನು ಬಿಟ್ಟು ಸಂಬಂಧ ಇಲ್ಲದ ವಿಚಾರಗಳ ಕುರಿತು ಮಾತನಾಡುವುದರಿಂದ ಜನರ ಭಾವನೆ ಬಹಳ ಧಕ್ಕೆಯಾಗುತ್ತದೆ’ ಎಂದು ಉತ್ತರಿಸಿದರು.
‘ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಪ್ರಲ್ಹಾದ ಜೋಶಿ ಅವರಿಗೆ ಸಿಗಲಿದೆ, ಅದರಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷದ ಹಿರಿಯರೊಂದಿಗೆ ಚರ್ಚಿಸಿ, ಸಮೀಕ್ಷೆಯ ವರದಿ ಆಧರಿಸಿ ಪಕ್ಷದ ವರಿಷ್ಠರು ಎಲ್ಲ ಕ್ಷೇತ್ರಗಳ ಟಿಕೆಟ್ ನಿರ್ಧರಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.