ಕಾರವಾರ: 'ವಿವಾದ ಸೃಷ್ಟಿಯಾದರೂ ದೃಢವಾಗಿ ನಿಲ್ಲುವುದು ನಿಜವಾದ ನಾಯಕತ್ವ. ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು' ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಅಂಕೋಲಾ ತಾಲ್ಲೂಕಿನ ಹಿಲ್ಲೂರಿನಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸಂವಿಧಾನ ತಿದ್ದುಪಡಿಗೆ ಬಿಜೆಪಿ 400 ಸೀಟು ಗೆಲ್ಲಬೇಕು ಎಂದು ಎರಡು ದಿನದ ಹಿಂದೆ ತಾವೇ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೆ ಸಂಸದರು ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ ನಡೆಸಿದರು.
'ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ. ಅವು ಬೊಗಳಿದರೆ ಮಾತ್ರ ಆನೆಗೆ ಗತ್ತು ಬರುತ್ತದೆ' ಎನ್ನುತ್ತ ತಮ್ಮನ್ನು ಆನೆಗೆ, ಮಾಧ್ಯಮಗಳನ್ನು ನಾಯಿಗೆ ಹೋಲಿಕೆ ಮಾಡಿದರು.
'ಬಿಜೆಪಿ ಸಶಕ್ತ ನಾಯಕತ್ವ ಹೊಂದಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಬಿಜೆಪಿ ಗೆಲ್ಲುತ್ತಲೇ ಇರಬೇಕು. ವಿವಾದ ಸೃಷ್ಟಿಯಾಗಿದೆ ಎಂದು ಕಾರ್ಯಕರ್ತರು ವಿಚಲಿತರಾದರೆ ನಾಯಕತ್ವ ಅಲುಗಾಡುತ್ತದೆ. ಹೀಗಾಗಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಬಿಜೆಪಿ ಗೆಲ್ಲಿಸುವ ಚರ್ಚೆ ಆರಂಭಿಸಿ' ಎಂದರು.
'ಉತ್ತರ ಕನ್ನಡದಲ್ಲಿ ಈ ಬಾರಿ ಹಲವರು ಬಿಜೆಪಿ ಅಭ್ಯರ್ಥಿಯಾಗಲು ಮುಂದೆ ಬಂದಿದ್ದಾರೆ. ಇದು ಪಕ್ಷ ಉನ್ನತ ಮಟ್ಟಕ್ಕೆ ಬೆಳೆದಿದೆ ಎಂಬುದರ ಸಂಕೇತ. ಯಾರಿಗೆ ಅವಕಾಶ ಸಿಗಲಿ. ಬಿಜೆಪಿ ಗೆಲ್ಲಿಸಬೇಕು' ಎಂದೂ ಕರೆ ನೀಡಿದರು.
ಗೋಕರ್ಣ ಬಿಜೆಪಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡಿದ್ದ ಸಂಸದ ಅನಂತಕುಮಾರ, 'ಆರ್ಟಿಕಲ್ 370 ರದ್ದು, ಅಯೋಧ್ಯೆ ರಾಮಮಂದಿರ ನಿರ್ಮಾಣವಷ್ಟೆ ಹಿಂದೂ ಸಮಾಜದ ಗುರಿಯಲ್ಲ. ಹಿಂದೂ ರಾಷ್ಟ್ರನಿರ್ಮಾಣ, ವಿಶ್ವದಾದ್ಯಂತ ಭಗವಾಧ್ವಜ ಹಾರಿಸುವುದು ಅಂತಿಮ ಗುರಿ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.