ADVERTISEMENT

ಕಲ್ಲೊಡೆದುಕೊಂಡಿದ್ದವರನ್ನು ಲೋಕಸಭೆಗೆ ಕಳಿಸಿದರೆ ಇನ್ನೇನಾಗುತ್ತೆ: ಕುಮಾರಸ್ವಾಮಿ

ಸಂಸದ ಡಿ.ಕೆ. ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಕಿಡಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 9:44 IST
Last Updated 2 ಫೆಬ್ರುವರಿ 2024, 9:44 IST
<div class="paragraphs"><p>ಎಚ್‌.ಡಿ ಕುಮಾರಸ್ವಾಮಿ</p></div>

ಎಚ್‌.ಡಿ ಕುಮಾರಸ್ವಾಮಿ

   

(ಸಂಗ್ರಹ ಚಿತ್ರ)

ರಾಮನಗರ: ‘ಕಲ್ಲೊಡೆದುಕೊಂಡು ಇದ್ದವರನ್ನು ಲೋಕಸಭೆಗೆ ಆರಿಸಿ ಕಳಿಸಿದರೆ ಇನ್ನೇನಾಗುತ್ತೆ. ಇಲ್ಲಿ ಬಡ ಜನರನ್ನು ಲೂಟಿ ಮಾಡಿಕೊಂಡು ಸಾಕಷ್ಟು ಗುಡ್ಡೆ ಮಾಡಿದ್ದಾರೆ. ಅಂತಹವರನ್ನು ದೇಶ ಕಟ್ಟಲು ಲೋಕಸಭೆಗೆ ಕಳಿಸಿದರೆ ಕಟ್ಟುತ್ತಾರಾ? ಅವರ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾರಷ್ಟೆ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ...’

ADVERTISEMENT

‘ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ, ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾಗುತ್ತದೆ’ ಎಂಬ ಸಂಸದ ಡಿ.ಕೆ. ಸುರೇಶ್ ಅವರ ಆಕ್ರೊಶದ ಹೇಳಿಕೆ ಕುರಿತು, ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿ ಶುಕ್ರವಾರ ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆ ಇದು.

‘ಸುರೇಶ್ ಅವರ ಹೇಳಿಕೆ ಬಾಲಿಶವಾಗಿದೆ. ಕೇಂದ್ರ ಸರ್ಕಾರದಿಂದ ನಮ್ಮ ಬೇಡಿಕೆಗಳನ್ನು ಸಂಘರ್ಷದಿಂದ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ವಾಸ್ತವವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ಹಣ ಪಡೆಯಬೇಕು. ಅದು ಬಿಟ್ಟು ಈ ರೀತಿ ಬಾಲಿಶವಾಗಿ ಮಾತನಾಡಿದರೆ, ಸಮಸ್ಯೆ ಬಗೆಹರಿಯುವುದಿಲ್ಲ. ಮತ್ತಷ್ಟು ಜಟಿಲಗೊಳ್ಳುತ್ತದೆ’ ಎಂದು ಕಿಡಿಕಾರಿದರು.

‘ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೊ ಮಾಡಿದ ಕಾಂಗ್ರೆಸ್‌ನವರು ಈಗ ವಿಭಜನೆಯ ಮಾತನಾಡುತ್ತಿದ್ದಾರೆ. ಒಂದು ವೇಳೆ ವಿಭಜನೆಯಾದರೂ, ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

‘ದೇಶದ ಮೊದಲ ಬಜೆಟ್‌ ಮೊತ್ತ ₹174 ಕೋಟಿ ಇತ್ತು. ಆಗ ದೇಶದಲ್ಲಿ ಆಹಾರದ ಕೊರತೆ ಇತ್ತು. ಆಗಿನಿಂದಲೂ ಸರ್ಕಾರಗಳು ಬಜೆಟ್ ಮಂಡಿಸಿಕೊಂಡು ಬಂದಿವೆ. ನಾವು ಹಣಕಾಸು ಆಯೋಗಗಳನ್ನು ಮಾಡಿಕೊಂಡಿದ್ದೇವೆ. ಅವರು ಎಲ್ಲಾ ರಾಜ್ಯಕ್ಕೂ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ಯಾವ ರಾಜ್ಯಕ್ಕೆ ಎಷ್ಟು ಹಣ ಬೇಕೆಂಬ ವರದಿ ಕೊಡುತ್ತಾರೆ. ಯಾವ ರಾಜ್ಯ ಅಭಿವೃದ್ಧಿಯಾಗಿದೆ ಮತ್ತು ಆಗಿಲ್ಲ ಎಂಬುದನ್ನು ನೋಡಿ ಹಣ ಹಂಚುತ್ತಾರೆ. ಈ ಹಂಚಿಕೆಯನ್ನು ಕಾಂಗ್ರೆಸ್ ಇದ್ದಾಗಲೇ ಪ್ರಾರಂಭ ಮಾಡಿದ್ದು‌. ಪ್ರಧಾನಿ ನರೇಂದ್ರ ಮೋದಿ ಇದನ್ನು ಪ್ರಾರಂಭ ಮಾಡಿದ್ದಲ್ಲ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.