ಬೆಂಗಳೂರು: ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರು ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿಗಳ ಮಾಹಿತಿ ಮರೆಮಾಚಿದ್ದ ಆರೋಪ ಕುರಿತು ವಿಚಾರಣೆ ಮುಂದುವರಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿಚಾರಣೆ ರದ್ದುಪಡಿಸಲು ಕೋರಿ ಪಿ.ಸಿ. ಮೋಹನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರಿದ್ದ ಪೀಠ ವಜಾಗೊಳಿಸಿದೆ.
‘ದೇವನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದ ದೇವಸ್ಥಾನ ಟ್ರಸ್ಟ್‌ಗೆ ಸಂಬಂಧಿಸಿದ 42 ಎಕರೆ 14 ಗುಂಟೆ ಜಾಗವನ್ನು ಪಿ.ಸಿ. ಮೋಹನ್ ಅವರು ತಮ್ಮ ಸಹಭಾಗಿತ್ವದ ಪಿ.ಸಿ. ರಿಯಾಲ್ಟಿ ಕಂಪನಿ ಹೆಸರಿನಲ್ಲಿ ಖರೀದಿಸಿದ್ದಾರೆ. 2013ರ ಮಾರ್ಚ್ 30ರಂದೇ ₹33.66 ಕೋಟಿ ಪಾವತಿಸಲಾಗಿದೆ. ಆದರೆ, 2014 ಮತ್ತು 2019ರ ಲೋಕಸಭೆ ಚುನಾವಣೆ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ವಿಷಯ ಮುಚ್ಚಿಟ್ಟಿದ್ದಾರೆ’ ಎಂದು ಆರೋಪಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶ್ರೀರಾಂಪುರದ ಟಿ.ಆರ್. ಆನಂದ್ ಖಾಸಗಿ ದೂರು ದಾಖಲಿಸಿದ್ದರು.
ದೂರು ದಾಖಲಸಿಕೊಂಡಿದ್ದ ವಿಶೇಷ ನ್ಯಾಯಾಲಯ ತನಿಖೆ ನಡೆಸುವಂತೆ ಬೆಂಗಳೂರು ದಕ್ಷಿಣ ಡಿಸಿಪಿ ಅವರಿಗೆ ಸೂಚನೆ ನೀಡಿತ್ತು. ವಿಶೇಷ ನ್ಯಾಯಾಲಯ ನಡೆಸುತ್ತಿರುವ ಈ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಪಿ.ಸಿ.ಮೋಹನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
‘ಸದ್ಯ ಇರುವ ದಾಖಲೆಗಳು ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಮುಂದುವರಿಸಲು ಸಾಕಾಗುತ್ತವೆ’ ಎಂದು ಅಭಿಪ್ರಾಯ ಪಟ್ಟ ಪೀಠ, ವಿಚಾರಣೆ ರದ್ದುಪಡಿಸಲು ಕೋರಿದ್ದ ಪಿ.ಸಿ. ಮೋಹನ್ ಅರ್ಜಿಯನ್ನು ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.