ADVERTISEMENT

ರೋಹಿಣಿ ವಿರುದ್ಧ ಡಿ ರೂಪಾ ಎತ್ತಿರುವ ಪ್ರಶ್ನೆಗಳು ಸರಿ ಇವೆ: ಪ್ರತಾಪ ಸಿಂಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2023, 11:05 IST
Last Updated 21 ಫೆಬ್ರುವರಿ 2023, 11:05 IST
ರೋಹಿಣಿ ಸಿಂಧೂರಿ, ಪ್ರತಾಪ ಸಿಂಹ, ಡಿ.ರೂಪಾ
ರೋಹಿಣಿ ಸಿಂಧೂರಿ, ಪ್ರತಾಪ ಸಿಂಹ, ಡಿ.ರೂಪಾ   

ಬೆಂಗಳೂರು: ‘ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪಾ ಮಾಡಿರುವ ಆರೋಪಗಳು ಸರಿಯಾಗಿವೆ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಎತ್ತಿರುವ ಎಲ್ಲಾ ಪ್ರಶ್ನೆಗಳು ನೈತಿಕ, ಕಾನೂನಾತ್ಮಕವಾಗಿವೆ. ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯ ಶೋಧನಾ ಸಮಿತಿಯೊಂದನ್ನು ರಚಿಸುವ ಮೂಲಕ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಡಿ.ಕೆ.ರವಿ ಸಾವು, ಚಾಮರಾಜನಗರ ಆಕ್ಸಿಜನ್ ದುರಂತ, ಹಿರಿಯ ಅಧಿಕಾರಿಗಳ ಮೇಲಿನ ಕಿರುಕುಳ ಸೇರಿದಂತೆ ಅನೇಕ ಅಂಶಗಳ ಮೇಲೆ ರೂಪಾ ಅವರು ಬೆಳಕು ಚೆಲ್ಲಿದ್ದಾರೆ. ಹಾಗಾಗಿ ಸಿಂಧೂರಿ ಅವರು ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗಿನಿಂದ ಇಲ್ಲಿಯವರೆಗೆ ಅವರ ಆಡಳಿತಾವಧಿಯಲ್ಲಿ ಕೇಳಿಬಂದಿರುವ ಎಲ್ಲಾ ಆರೋಪಗಳ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಪ್ರತಾಪ​ ಸಿಂಹ ಒತ್ತಾಯಿಸಿದ್ದಾರೆ.

ADVERTISEMENT

‘ಶಾಸಕ ಸಾ.ರಾ. ಮಹೇಶ್‌ ಜತೆ ಸಿಂಧೂರಿ ಸಂಧಾನಕ್ಕೆ ಯತ್ನಿಸಿದ್ದಾರೆ’ ಎಂಬ ಸುದ್ದಿಯನ್ನು ಪ್ರಸ್ತಾಪಿಸಿದ್ದ ರೂಪಾ ಭಾನುವಾರ ಜಾಲತಾಣಗಳಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದರು. ಅವರಿಗೆ ಸಂಬಂಧಿಸಿದ 20 ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಂಧೂರಿ, ‘ವೈಯಕ್ತಿಕ ಹಗೆ ಸಾಧಿಸುವುದಕ್ಕಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಮಾನಸಿಕ ಅಸ್ವಸ್ಥತೆಗೆ ಒಳಗಾದರೆ ಅದು ಸಮಾಜಕ್ಕೆ ಬಹುದೊಡ್ಡ ಅಪಾಯಕಾರಿ ಬೆಳವಣಿಗೆ’ ಎಂದಿದ್ದರು.

‘ಮುಖ್ಯಕಾರ್ಯದರ್ಶಿ ಇಬ್ಬರನ್ನೂ ಕರೆದು ಮಾತನಾಡಿದ್ದಾರೆ. ಅವರು ನೀಡಿರುವ ದೂರಿನ ಪತ್ರದ ಆಧಾರದಲ್ಲಿ ಕ್ರಮ ಕೈಗೊಳ್ಳಲು ಪರಿಶೀಲಿಸುತ್ತಿದ್ದಾರೆ. ಮಾಧ್ಯಮಗಳಿಂದ ಅಂತರ ಕಾಪಾಡಿಕೊಂಡು, ಶಿಸ್ತು ಕಾಪಾಡುವುದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ಸರ್ಕಾರ ಎಚ್ಚರಿಕೆ ನೀಡಿದ ಬಳಿಕವೂ ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಮಧ್ಯದ ಜಟಾಪಟಿ ಸೋಮವಾರವೂ ಸಾಮಾಜಿಕ ಜಾಲ ತಾಣಗಳಲ್ಲಿ ಮುಂದುವರಿದಿತ್ತು.

ರೂಪಾ – ರೋಹಿಣಿ ವರ್ಗಾವಣೆ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ನಡುವಣ ಸಂಘರ್ಷ ತಾರಕ್ಕೇರಿದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.

ರೋಹಿಣಿ ಮತ್ತು ಡಿ.ರೂಪಾ ಅವರಗೆ ಯಾವುದೇ ಹುದ್ದೆಯನ್ನು ತೋರಿಸಿಲ್ಲ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.