ADVERTISEMENT

ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ: ಮೋದಿಗೆ ಸಿದ್ದರಾಮಯ್ಯ ಮನವಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 16:30 IST
Last Updated 9 ನವೆಂಬರ್ 2024, 16:30 IST
ಸಿದ್ದರಾಮಯ್ಯ 
ಸಿದ್ದರಾಮಯ್ಯ    

ಬೆಂಗಳೂರು: ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲಿನ ದು:ಸ್ವಪ್ನದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಹೊರಬಂದಿಲ್ಲ ಎಂದು ಕಾಣಿಸುತ್ತದೆ. ಹೋದಲ್ಲಿ ಬಂದಲ್ಲಿ ಮೋದಿಯವರು ಕರ್ನಾಟಕವನ್ನು ಮತ್ತೆ ಮತ್ತೆ ತಮ್ಮ ಭಾಷಣದಲ್ಲಿ ಎಳೆದು ತರುತ್ತಿದ್ದಾರೆ. ಕರ್ನಾಟಕದ ಮದ್ಯ ಮಾರಾಟಗಾರರು ನೀಡಿರುವ ರಾಜಕೀಯ ಪ್ರೇರಿತ ದೂರು ಅಷ್ಟು ಬೇಗ ಮೋದಿಯವರನ್ನು ತಲುಪಿ ಬಿಟ್ಟಿದೆ. ಕೊರೊನಾ ಕಾಲದ ಭ್ರಷ್ಟಾಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಪ್ರಾಸಿಕ್ಯೂಟ್ ಮಾಡುವಂತೆ ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದ ತನಿಖಾ ಸಮಿತಿ ಮಾಡಿರುವ ಶಿಫಾರಸಿನ ಸುದ್ದಿ ಅವರಿಗಿನ್ನೂ ತಲುಪಿಲ್ಲ ಎಂದು ಕಾಣುತ್ತಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೇ ಕೊರೊನಾ ಕಾಲದಲ್ಲಿ ಅಸಹಾಯಕ ಜನ ಸಾಯುತ್ತಿರುವಾಗ ಅಧಿಕಾರದಲ್ಲಿದ್ದ ನಿಮ್ಮ ಪಕ್ಷದ ಸರ್ಕಾರ ಸಾವಿನ ವ್ಯಾಪಾರ ಮಾಡುತ್ತಿದ್ದದ್ದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ?

ADVERTISEMENT

ನಿಮ್ಮ ಪಕ್ಷದ ಸರ್ಕಾರ 40% ಕಮಿಷನ್ ಸುಲಿಗೆ ನಡೆಸುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ನಿಮಗೆ ಖುದ್ದಾಗಿ ದೂರು ನೀಡಿದರೂ ಆ ಬಗ್ಗೆ ನೀವು ತುಟಿ ಬಿಚ್ಚಿರಲಿಲ್ಲ. ಸಚಿವರೊಬ್ಬರ ಕಿರುಕುಳದಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರೂ ನೀವು ಪ್ರತಿಕ್ರಿಯಿಸಿರಲಿಲ್ಲ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಬೆಳಗೆದ್ದು ಘೋಷಣೆ ಕೂಗುವ ನೀವು ತಮ್ಮ ಮನೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಪೋಕ್ಸೊ ಕಾಯ್ದೆಯಡಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವುದಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

‌ಗ್ಯಾರಂಟಿ ಕಾರ್ಯಕ್ರಮಗಳನ್ನು ನೂರಕ್ಕೆ ನೂರರಷ್ಟು ನಾವು ಅನುಷ್ಠಾನಕ್ಕೆ ತಂದಿದ್ದರೂ ಮಹಾರಾಷ್ಟ್ರದಲ್ಲಿ ನಿಮ್ಮ ಪಕ್ಷ ಸುಳ್ಳು ಹೇಳುವ ಜಾಹೀರಾತು ಪ್ರಕಟಿಸುತ್ತದೆ. ನೀವು ಹೇಳುತ್ತಾ ಬಂದಿರುವ ಸುಳ್ಳುಗಳಿಂದಲೇ ಅವರು ಪ್ರೇರಣೆ ಪಡೆದುಕೊಂಡಿರುವುದು ಸ್ಪಷ್ಟ. ನಾಯಕರೇ ಸುಳ್ಳುಕೋರರಾದರೆ ಅನುಯಾಯಿಗಳು ಸತ್ಯವಂತರಾಗಲು ಹೇಗೆ ಸಾಧ್ಯ? ಆಗಿರುವ ತಪ್ಪನಾದರೂ ಒಪ್ಪಿಕೊಂಡು ಕ್ಷಮೆ ಕೇಳಿ ಎಂದು ನಾನು ನಿಮ್ಮನ್ನು ಕೋರಿದ್ದೆ. ಆದರೆ ನೀವು ಇಲ್ಲಿಯ ವರೆಗೆ ಪ್ರತಿಕ್ರಿಯಿಸಿಲ್ಲ, ಯಾಕೆ ಎಂದು ಕೇಳಿದ್ದಾರೆ.

ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೊಂಡಿರುವ ಗ್ಯಾರಂಟಿ ಯೋಜನೆಗಳು ನಿಮ್ಮ ಕಣ್ಣು ಕುಕ್ಕುತ್ತಿರುವುದನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಇದಕ್ಕಾಗಿ ಕರ್ನಾಟಕದ ಕಾಲೆಳೆಯುತ್ತಲೇ ಇದ್ದೀರಿ. ಕರ್ನಾಟಕಕ್ಕೆ ಬರುವ ಹುಮ್ಮಸ್ಸಿನಲ್ಲಿರುವ ಉದ್ಯಮಿಗಳನ್ನು ನಿಮ್ಮ ಸ್ಥಾನದ ಬಲದಿಂದ ತಡೆದು ಗುಜರಾತ್ ಗೆ ಕರೆದೊಯ್ದು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದೀರಿ. ನಮ್ಮ ಆದಾಯವನ್ನು ಕುಂಠಿತಗೊಳಿಸಬೇಕೆಂಬ ದುರುದ್ದೇಶದಿಂದ ನಮ್ಮ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದ್ದೀರಿ. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರದೆ ಇದ್ದರೆ ಕನ್ನಡಿಗರು ಪ್ರಧಾನಿ ಕೋಪಕ್ಕೆ ತುತ್ತಾಗಲಿದ್ದಾರೆ ಎಂದು ಕಳೆದ ಚುನಾವಣೆಯ ಕಾಲದಲ್ಲಿ ನಿಮ್ಮ ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ ನೀಡಿದ್ದ ಎಚ್ಚರಿಕೆ ಇಂದು ನಿಜವಾಗುತ್ತಿದೆ. ನೀವು ನಿರಂತರವಾಗಿ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಮತ್ತು ಅಪಮಾನವನ್ನು ಕನ್ನಡಿಗರು ಬಹಳ ದಿನ ಸಹಿಸಲಾರರು. ನರೇಂದ್ರ ಮೋದಿ ಅವರೇ, ಮೊದಲು ನೀವು ನಮ್ಮೆಲ್ಲರಿಗೆ ಸೇರಿರುವ ದೇಶದ ಪ್ರಧಾನಿಯಾಗಿ, ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ. ಇದು ನನ್ನ ಸವಿನಯ ಮನವಿ ಎಂದು ಸಿಎಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.