ಬೆಂಗಳೂರು: ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ" ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ, ಹೈಕೋರ್ಟ್ ನಲ್ಲಿ ಕೇವಿಯೆಟ್ ಅರ್ಜಿಯೊಂದನ್ನು ದಾಖಲಿಸಲಾಗಿದೆ.
ಈ ಸಂಬಂಧ ನಾಗರಭಾವಿ ನಿವಾಸಿಯಾದ ಹೈಕೋರ್ಟ್ ವಕೀಲ ಎಸ್.ಪಿ.ಪ್ರದೀಪ್ ಕುಮಾರ್ ಶನಿವಾರ ಈ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.
"ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನಾದರೂ, ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದರೆ ಆಗ, ನಮ್ಮ ವಾದ ಆಲಿಸದೆ ಯಾವುದೇ ಆದೇಶ ಮಾಡಬಾರದು" ಎಂದು ಕೇವಿಯೆಟ್ ಅರ್ಜಿದಾರರು ಕೋರಿದ್ದಾರೆ. ಹೈಕೋರ್ಟ್ ವಕೀಲ ಎಂ.ಎಚ್.ಪ್ರಕಾಶ್ ವಕಾಲತ್ತು ವಹಿಸಿದ್ದಾರೆ.
"ಮುಡಾ ಹಗರಣವನ್ನು ತನಿಖೆಗೆ ಒಳಪಡಿಸಲು ಆದೇಶಿಸಬೇಕು" ಎಂದು ಕೋರಿ ಎಸ್.ಪಿ.ಪ್ರದೀಪ್ ಕುಮಾರ್ ಈಗಾಗಲೇ "ಜನಪ್ರತಿನಿಧಿಗಳ ವಿಶೇಷ ಕೋರ್ಟ್" ನಲ್ಲಿ ಖಾಸಗಿ ದೂರೊಂದನ್ನು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.