ಬೆಂಗಳೂರು: ‘ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ, ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಈ ಪ್ರಕರಣದಲ್ಲಿ ಕೇವಲ ಸರ್ಕಾರ, ಕಾಂಗ್ರೆಸ್ ಪಕ್ಷವಷ್ಟೆ ಅಲ್ಲ, ‘ಇಂಡಿಯಾ’ (ವಿರೋಧ ಪಕ್ಷಗಳ ಮೈತ್ರಿಕೂಟ) ಒಕ್ಕೂಟ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲಲಿದೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸಂಪುಟ ಸಹೋದ್ಯೋಗಿಗಳ ಜತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯಾವುದೇ ಒತ್ತಡಕ್ಕೆ ಸಿದ್ದರಾಮಯ್ಯ ಅವರು ಮಣಿಯುವುದಿಲ್ಲ. ಈ ಪ್ರಕರಣದಲ್ಲಿ ರಾಜಕೀಯ ಹೋರಾಟ ಮತ್ತು ಕಾನೂನು ಸಮರಕ್ಕೆ ನಾವು ಸಿದ್ಧರಾಗಿದ್ದೇವೆ’ ಎಂದು ಘೋಷಿಸಿದರು.
‘ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿಯಾಗಿ ಪರಿವರ್ತನೆ ಮಾಡಿಕೊಳ್ಳಲು ನಡೆಯುತ್ತಿರುವ ಹುನ್ನಾರದ ವಿರುದ್ಧ ಹೋರಾಟ ಮಾಡುತ್ತೇವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಬೇಕಿದೆ. ಮುಖ್ಯಮಂತ್ರಿ ವಿರುದ್ಧ ಕಾನೂನುಬಾಹಿರವಾಗಿ ವಿಚಾರಣೆಗೆ ಅನುಮತಿ ನೀಡಲಾಗಿದೆ. ನ್ಯಾಯಪೀಠದಿಂದ ಅನ್ಯಾಯ ಆಗುವುದಿಲ್ಲ ಎಂಬ ನಂಬಿಕೆ ಇದೆ’ ಎಂದರು.
‘ರಾಜ್ಯಪಾಲರು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕವಾದ ತೀರ್ಮಾನ ಮಾಡಿದ್ದಾರೆ. ಈ ಷಡ್ಯಂತ್ರದಲ್ಲಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಎಚ್.ಡಿ ಕುಮಾರಸ್ವಾಮಿ ಅವರು ಮುಂದಿನ 8-10 ತಿಂಗಳಲ್ಲಿ ಈ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದಿದ್ದಾರೆ. ಈ ಹೇಳಿಕೆಗೆ ಪೂರಕವಾಗಿ ಈ ಷಡ್ಯಂತ್ರ ನಡೆಯುತ್ತಿದೆ’ ಎಂದು ಆರೋಪಿಸಿದರು.
‘ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ರಾಜಭವನ ಬಿಜೆಪಿ ಕಚೇರಿಯಾಗಿದೆ. ಮುಡಾ ಹಗರಣದ ನೆಪದಲ್ಲಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಷಡ್ಯಂತ್ರದ ಭಾಗ. ಇದಕ್ಕೆ ಬಿಜೆಪಿಯವರು ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯಪಾಲರ ನಡೆ ಅನಪೇಕ್ಷಣೀಯ. ಇದನ್ನು ರಾಜ್ಯದ ಜನತೆ ಸಹಿಸಿಕೊಳ್ಳುವುದಿಲ್ಲ' ಎಂದೂ ಹೇಳಿದರು.
‘ಕೇಂದ್ರದ ಬಿಜೆಪಿ ಸರ್ಕಾರ ದೆಹಲಿ, ತಮಿಳುನಾಡು ಮುಂತಾದ ರಾಜ್ಯ ಸರ್ಕಾರಗಳ ವಿರುದ್ಧ ನಡೆಸುತ್ತಿರುವಂತಹ ಕೆಟ್ಟ ರಾಜಕಾರಣವನ್ನು ಈಗ ಕರ್ನಾಟಕದಲ್ಲೂ ಆರಂಭಿಸಿದೆ. ಇದು ಭಾರಿ ಬಹುಮತದಿಂದ ಆರಿಸಿ ಬಂದಿರುವ ರಾಜ್ಯ ಸರ್ಕಾರದ ವಿರುದ್ಧ ತೋರಿಸುತ್ತಿರುವ ಅಸಹನೆ’ ಎಂದು ಅವರು ಟೀಕಿಸಿದರು.
ಬೆಂಗಳೂರು: ‘ಮೇಲಿನಿಂದ ಒತ್ತಡವಿರುವ ಕಾರಣ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ, ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ’ ಎಂದು ಗೃಹ ಸಚಿವ ಜಿ. ಪಮೇಶ್ವರ ಹೇಳಿದರು.
‘ನಾವು ಕೂಡ ಕಾನೂನು ಮೂಲಕವೇ ಉತ್ತರ ಕೊಡುತ್ತೇವೆ. ಎಲ್ಲ ಸಚಿವರು, ಶಾಸಕರು ಮುಖ್ಯಮಂತ್ರಿಯವರ ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದರು.
ಬೆಂಗಳೂರು: ‘ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ಹಾಸ್ಯಾಸ್ಪದ ನಿರ್ಧಾರ’ ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಭಿಪ್ರಾಯಪಟ್ಟರು.
‘ರಾಜ್ಯಪಾಲ ಕಚೇರಿಯ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿವೆ. ಇದು ಅಸಾಧ್ಯ’ ಎಂದರು.
‘ದೂರುದಾರರು ಈ ಹಿಂದೆ ಲೋಕಾಯುಕ್ತ ಸೇರಿದಂತೆ ಇತರೇ ತನಿಖಾ ಸಂಸ್ಥೆಗಳ ಮುಂದೆ ದೂರು ದಾಖಲಿಸಿಲ್ಲ. ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಯಾವುದೇ ತನಿಖೆಯೇ ನಡೆಯದೇ ಮುಖ್ಯಮಂತ್ರಿಗಳ ವಿರುದ್ಧ ಏಕಾಏಕಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ. ಲೋಕಾಯುಕ್ತ ಅಥವಾ ಪೊಲೀಸ್ ತನಿಖೆ, ಇತರೇ ಸಂಸ್ಥೆಗಳಿಂದ ತನಿಖೆ ನಡೆದು ತಪ್ಪಿತಸ್ಥರು ಎಂದು ಸಾಬೀತಾದ ನಂತರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಹುದು. ಆದರೆ, ಈಗ ನೀಡಿರುವುದು ರಾಜಕೀಯ ದುರುದ್ದೇಶ ಪೂರಿತ’ ಎಂದರು.
ಬೆಂಗಳೂರು: ‘ಬಿಜೆಪಿ ಅವಧಿಯ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ಮೂಲಕ ಆ ಪಕ್ಷದವರನ್ನು ನಾವು ಬೆತ್ತಲೆ ಮಾಡುತ್ತೇವೆ’ ಎಂದು ವಿಧಾನಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್ ಹೇಳಿದರು.
‘ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಸಹಿಸದ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಷಡ್ಯಂತ್ರಕ್ಕೆ ನಾವು ಬಗ್ಗುವುದೂ ಇಲ್ಲ. ಜಗ್ಗುವುದೂ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.