ADVERTISEMENT

ಮುಡಾ ಪ್ರಕರಣ: ದಾಖಲೆ ಜಾಲಾಡಿದ ಇ.ಡಿ

ಶನಿವಾರ ರಾತ್ರಿವರೆಗೆ ಕಚೇರಿಯಲ್ಲೇ ಬೀಡುಬಿಟ್ಟ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 23:30 IST
Last Updated 19 ಅಕ್ಟೋಬರ್ 2024, 23:30 IST
ಮುಡಾ ಕಚೇರಿ ಪ್ರವೇಶ ದ್ವಾರದಲ್ಲಿ ಶನಿವಾರ ಕಾವಲಿಗೆ ನಿಂತ ಸಿಎರ್‌ಪಿಎಫ್‌ ಸಿಬ್ಬಂದಿ – ಪ್ರಜಾವಾಣಿ ಚಿತ್ರ
ಮುಡಾ ಕಚೇರಿ ಪ್ರವೇಶ ದ್ವಾರದಲ್ಲಿ ಶನಿವಾರ ಕಾವಲಿಗೆ ನಿಂತ ಸಿಎರ್‌ಪಿಎಫ್‌ ಸಿಬ್ಬಂದಿ – ಪ್ರಜಾವಾಣಿ ಚಿತ್ರ   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 50:50 ಅನುಪಾತದ ಅಡಿ ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಜಾಲಾಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಪ್ರಕರಣಕ್ಕೆ ತಿರುವು ನೀಡಬಲ್ಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಎರಡನೇ ದಿನವಾದ ಶನಿವಾರ ರಾತ್ರಿವರೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಿದ ಇ.ಡಿ. ತಂಡವು, ಕೆಸರೆ ಸರ್ವೆ ಸಂಖ್ಯೆ 464ಕ್ಕೆ ಸಂಬಂಧಿಸಿದ ಪ್ರತಿ ಕಡತವನ್ನೂ ಪಡೆಯಿತು. ಮೂಲ ದಾಖಲೆಗಳೇ ನಾಪತ್ತೆಯಾಗಿರುವ ಕುರಿತು ಆಯುಕ್ತ ರಘುನಂದನ್‌ ಸೇರಿದಂತೆ ಹಿರಿಯ ಅಧಿಕಾರಿಗಳ ಬೆವರಿಳಿಸಿತು. ಕಚೇರಿಯ ಮುಖ್ಯದ್ವಾರವನ್ನು ಬಂದ್ ಮಾಡಿ, ಸಿಆರ್‌ಪಿಎಫ್‌ ಸಿಬ್ಬಂದಿ ಭದ್ರತೆಯಲ್ಲಿ ವಿಚಾರಣೆ ನಡೆಸಿತು.

ವೈಟ್ನರ್ ಮೇಲೆ ಕಣ್ಣು!:

ಬದಲಿ ನಿವೇಶನ ಕೋರಿ ಪಾರ್ವತಿ ಅವರು ಮುಡಾಕ್ಕೆ ಸಲ್ಲಿಸಿದ್ದ, ನಂತರ ವೈಟ್ನರ್ ಹಚ್ಚಿ ತಿದ್ದುಪಡಿ ಮಾಡಲಾಗಿದೆ ಎನ್ನಲಾದ ಪತ್ರ ಕೂಡ ಇ.ಡಿ.ಗೆ ಸಿಕ್ಕಿದೆ ಎನ್ನಲಾಗಿದೆ. ಎರಡನೇ ಪುಟದಲ್ಲಿ ವೈಟ್ನರ್ ಹಾಕಿದ್ದ ಜಾಗದಲ್ಲಿ ಏನಿತ್ತು ಎಂಬುದರ ಕುರಿತು ಪರಿಣಿತರು ಅಲ್ಲೇ ಪರಿಶೀಲಿಸಿದ್ದಾರೆ. ಇಬ್ಬರು ಪರಿಣತರಿದ್ದ ಎಫ್‌ಎಸ್‌ಎಲ್ ತಂಡವೂ ಪತ್ರದ ನೈಜತೆ ಪರಿಶೀಲಿಸಿತು ಎನ್ನಲಾಗಿದೆ.

ADVERTISEMENT

2004–05ರಲ್ಲಿ ಈ ಜಮೀನು ಮಲ್ಲಿಕಾರ್ಜುನ ಸ್ವಾಮಿಯವರಿಗೆ ನೋಂದಣಿಯಾಗುವ ಮುನ್ನ ಯಾರಿಗೆಲ್ಲ ನಿವೇಶನ ಹಂಚಿಕೆಯಾಗಿತ್ತು? ಹಂಚಿಕೆಯಾಗಿದ್ದರೂ ಕೃಷಿ ಜಮೀನು ಎಂದು ನೋಂದಣಿ ಮಾಡಿದ್ದು ಹೇಗೆ? ಎಂಬುದನ್ನು ಇ.ಡಿ. ಪ್ರಶ್ನಿಸಿದೆ.

ದಾಖಲೆಗಳ ಸಂಗ್ರಹ:


ಈ ಪ್ರಕರಣದ ಜೊತೆಗೇ, 2015ರಿಂದ 2024ರವರೆಗೆ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಅಷ್ಟೂ ನಿವೇಶನಗಳ ದಾಖಲೆಗಳನ್ನು ಇ.ಡಿ. ಸಂಗ್ರಹಿಸಿದೆ. ಯಾವ ಶಿಫಾರಸಿನ ಮೇಲೆ ನಿವೇಶನಗಳನ್ನು ಹಂಚಲಾಯಿತು? ಯಾವ ಸಭೆಯಲ್ಲಿ ನಿರ್ಣಯಿಸಲಾಯಿತು? ಯಾರೆಲ್ಲಾ ಸಭೆಯಲ್ಲಿದ್ದರು? ಜನಪ್ರತಿನಿಧಿಗಳು ಪತ್ರ ಕೊಟ್ಟಿದ್ದರೆ? ಹಣದ ವಹಿವಾಟು ನಡೆದಿದೆಯೇ? ಎಂಬ ಮಾಹಿತಿಯನ್ನು ಕಲೆಹಾಕಿದೆ. ಆಯುಕ್ತರ ಆದೇಶಪತ್ರಗಳು, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸರ್ಕಾರಕ್ಕೆ ಬರೆದಿದ್ದ ಪತ್ರಗಳು ಸಹ ಇ.ಡಿ. ಕೈ ಸೇರಿವೆ.

ಇಬ್ಬರು ತಜ್ಞರನ್ನು ಕರೆಯಿಸಿಕೊಂಡು, ಎಲ್ಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಪಡೆದು, ಅಲ್ಲೇ ಸ್ಕ್ಯಾನ್ ಮಾಡಿಸಿ ಡಿಜಿಟಲ್‌ ರೂಪದಲ್ಲಿ ಸಾಕ್ಷ್ಯಗಳನ್ನು ಇಡಿ ಅಧಿಕಾರಿಗಳು ಸಂಗ್ರಹಿಸಿದರು. ಅದನ್ನು ಆಧರಿಸಿ ಮುಡಾದ ಹಿಂದಿನ ಆಯುಕ್ತರಾದ ಜಿ.ಟಿ. ದಿನೇಶ್‌ಕುಮಾರ್ ಹಾಗೂ ಡಿ.ಬಿ. ನಟೇಶ್‌ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

ತಹಶೀಲ್ದಾರ್‌ ಕಚೇರಿಯಲ್ಲಿ ಶೋಧ:


ಮೈಸೂರು ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ತಡರಾತ್ರಿವರೆಗೂ ಶೋಧ ನಡೆಸಿದ್ದ ಇ.ಡಿ. ಅಧಿಕಾರಿಗಳು, 100 ಪುಟದಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಸರೆ ಸರ್ವೆ ಸಂಖ್ಯೆ 464 ಹಾಗೂ 462ರ ಎಲ್ಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಕೊಂಡೊಯ್ದಿದ್ದು, ಕೇಳಿದಾಗ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು ಹಾಗೂ ವಿಚಾರಣೆಗೆ ಬರಬೇಕೆಂದು ತಹಶೀಲ್ದಾರ್‌ ಮಹೇಶ್ ಅವರಿಗೆ ಸೂಚಿಸಿದ್ದಾರೆ.

ವಿಳಂಬ ಕಾರಣ:


ಇ.ಡಿ. ಅಧಿಕಾರಿಗಳು ವಾರದ ಹಿಂದೆಯೇ ಮುಡಾಕ್ಕೆ 4 ಪುಟಗಳ ಪತ್ರ ನೀಡಿದ್ದು, ಕೆಲವು ದಾಖಲೆಗಳು ಹಾಗೂ ಪೂರಕ ಮಾಹಿತಿ ನೀಡುವಂತೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ವಿಳಂಬ ಮಾಡಿದ್ದು, ತಡವಾದರೆ ಇನ್ನಷ್ಟು ದಾಖಲೆ ಕೈತಪ್ಪಬಹುದೆಂದು ಇ.ಡಿ. ದಾಳಿ ನಡೆಸಿತು ಎನ್ನಲಾಗಿದೆ.

ಹಿಂದಿನ ಡಿ.ಸಿ ಸಂಸದ ಕುಮಾರ ನಾಯಕ ವಿಚಾರಣೆ ಮೈಸೂರು: ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಹಾಲಿ ‌ರಾಯಚೂರು ಕ್ಷೇತ್ರದ ಕಾಂಗ್ರೆಸ್‌ ಸಂಸದ ಜಿ. ಕುಮಾರ ನಾಯಕ ಅವರನ್ನು ಲೋಕಾಯುಕ್ತ ಎಸ್‌.ಪಿ. ಟಿ.ಜೆ. ಉದೇಶ್‌ ನೇತೃತ್ವದ ತಂಡವು ಶನಿವಾರ ಸತತ ಮೂರ್ನಾಲ್ಕು ತಾಸು ವಿಚಾರಣೆಗೆ ಒಳಪಡಿಸಿತು. ವಿವಾದಿತ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿನ 3 ಎಕರೆ 16 ಗುಂಟೆ ಜಮೀನನ್ನು 2004ರಲ್ಲಿ ಸಿದ್ದರಾಮಯ್ಯ ಭಾಮೈದ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿ ಭೂಪರಿವರ್ತನೆ ಕೋರಿ 2005ರಲ್ಲಿ ಅರ್ಜಿ ಸಲ್ಲಿಸಿದ್ದ ವೇಳೆ ಜಿಲ್ಲಾಧಿಕಾರಿಯಾಗಿದ್ದ ಕುಮಾರ ನಾಯಕ ಖಾಲಿ ಜಮೀನು ಎಂದು ನಮೂದಿಸಿ ಅನ್ಯಕ್ರಾಂತ ಆದೇಶ ಹೊರಡಿಸಿದ್ದರು. 2004–05ರ ವೇಳೆಗಾಗಲೇ ಈ ಜಮೀನಿನಲ್ಲಿ ಬಡಾವಣೆ ರಚನೆಯಾಗಿ ಫಲಾನಭವಿಗಳಿಗೆ ನಿವೇಶನ ಹಂಚಿಕೆಯಾಗಿತ್ತು. ಹೀಗಿದ್ದೂ ಸ್ಥಳ ಪರಿಶೀಲಿಸದೆ ಅನ್ಯಕ್ರಾಂತ ಆದೇಶ ಹೊರಡಿಸಿದ ಆರೋಪ ಕುಮಾರ ನಾಯಕ ಅವರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.