ಬೆಂಗಳೂರು/ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ದಾಖಲೆಗಳ ಬೆನ್ನುಬಿದ್ದಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮತ್ತು ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ ಅವರ ಮನೆಯಲ್ಲಿ ಸತತ ಎರಡನೇ ದಿನವೂ ಶೋಧ ಮುಂದುವರಿಸಿದ್ದು, ಅವರನ್ನು ವಿಚಾರಣೆ ನಡೆಸಿದೆ.
ಮೈಸೂರಿನ ಹಿನಕಲ್‌ನಲ್ಲಿರುವ ರಾಕೇಶ್ ಪಾಪಣ್ಣ ಅವರ ಮನೆಯಲ್ಲಿ ಸೋಮವರ ಬೆಳಿಗ್ಗೆ ಶೋಧ ಆರಂಭಿಸಿದ್ದ ಅಧಿಕಾರಿಗಳು, ಮಂಗಳವಾರ ಸಂಜೆವರೆಗೂ ಅವರ ವಿಚಾರಣೆ ನಡೆಸಿದರು. ಪ್ರಕರಣದ ತನಿಖೆ ಚುರುಕುಗೊಳಿಸಿದ ಇ.ಡಿ ಅಧಿಕಾರಿಗಳ ತಂಡ, ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಬಿಲ್ಡರ್‌ಗಳ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಿದೆ.
‘ಪರಿಹಾರದ ರೂಪದಲ್ಲಿ ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ರಾಕೇಶ್ ಹಾಗೂ ಬಿಲ್ಡರ್‌ಗಳ ಮನೆಗಳಿಂದ ವಶಕ್ಕೆ ಪಡೆಯಲಾಗಿದೆ’ ಎಂದು ಇ.ಡಿ. ಮೂಲಗಳು ಹೇಳಿವೆ.
ರಾಕೇಶ್ ಅವರ ತಂದೆ ಎ. ಪಾಪಣ್ಣ ಅವರಿಗೆ ಸೇರಿದ ಹಿನಕಲ್ ಗ್ರಾಮದ ಸರ್ವೆ ಸಂಖ್ಯೆ 211ರ 3 ಎಕರೆ 5 ಗುಂಟೆ ಜಮೀನನ್ನು, ವಿಜಯನಗರ ಬಡಾವಣೆಗಾಗಿ ಮುಡಾ ಸ್ವಾಧೀನಪಡಿಸಿಕೊಂಡಿತ್ತು. ಅದಕ್ಕೆ ಪರಿಹಾರವಾಗಿ ‘50:50’ ಅನುಪಾತದಲ್ಲಿ ಒಟ್ಟು 36,573 ಚ.ಅಡಿ ಅಳತೆಯ 20 ಬದಲಿ ನಿವೇಶನಗಳನ್ನು ಮುಡಾವು ಇದೇ ಜೂನ್ 12ರಂದು ಹಂಚಿಕೆ ಮಾಡಿತ್ತು. ಪ್ರಕರಣವು ವಿವಾದದ ಸ್ವರೂಪ ಪಡೆಯುತ್ತಲೇ ಈ ನಿವೇಶನಗಳ ಹಂಚಿಕೆಗೆ ತಡೆ ನೀಡಲಾಗಿತ್ತು.
ಬಿಲ್ಡರ್ ಮನೆ ಕಚೇರಿ ಶೋಧ: ಇದಲ್ಲದೇ ಇ.ಡಿ ಅಧಿಕಾರಿಗಳು ಮೈಸೂರು ಮತ್ತು ಮಂಡ್ಯದ ಹಲವೆಡೆ ಮಂಗಳವಾರ ಹೊಸದಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಜಯರಾಮ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅವರು ಎಂಎಂಜಿ ಕನ್‌ಸ್ಟ್ರಕ್ಷನ್ ಮತ್ತು ವಕ್ರತುಂಡ ಹೌಸಿಂಗ್ ಸೊಸೈಟಿ ಎಂಬ ಎರಡು ರಿಯಲ್ ಎಸ್ಟೇಟ್ ಸಂಸ್ಥೆಗಳನ್ನು ನಡೆಸುತ್ತಿದ್ದು, ಎರಡರ ಕಚೇರಿಗಳೂ ಮೈಸೂರಿನ ಕಾಂತರಾಜ ಅರಸ್ ರಸ್ತೆಯಲ್ಲಿವೆ.
‘ಶೋಧ ಕಾರ್ಯದ ವೇಳೆ 50:50 ಅನುಪಾತದಲ್ಲಿ ಪರಿಹಾರ ನಿವೇಶನ ಹಂಚಿಕೆಯಾದವರ ಮಾಹಿತಿಗಳು ದೊರೆತಿವೆ’ ಎಂದು ಮೂಲಗಳು ತಿಳಿಸಿವೆ.
ಮಂಡ್ಯದ ಪಾಂಡವಪುರದಲ್ಲಿನ ಹೇರೋಹಳ್ಳಿಯಲ್ಲಿ ಜಯರಾಮ್ ಸಂಬಂಧಿಕರು ಮತ್ತು ಆಪ್ತರಿಗೆ ಸೇರಿದ ಮೂರು ಮನೆಗಳಲ್ಲಿ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಿನಲ್ಲಿ ನಡೆಸಿದ ವಿಚಾರಣೆ ವೇಳೆ ಜಯರಾಮ್ ನೀಡಿದ ಮಾಹಿತಿ ಮೇರೆಗೆ ಮಂಡ್ಯದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಗೊತ್ತಾಗಿದೆ. ವಿಚಾರಣೆ ಮಂದುವರಿದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಸೋಮವಾರ ಎಂಟು ಕಡೆ ಶೋಧಕಾರ್ಯ ನಡೆಸಿದ್ದರು. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್, ಮೈಸೂರಿನಲ್ಲಿ ಮುಡಾದ ಕೆಲ ನಿವೃತ್ತ ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆದಿತ್ತು.
ಮಾಜಿ ಆಯುಕ್ತ ನಟೇಶ್ ವಶ ಬಿಡುಗಡೆ
ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಿದ್ದಾಗ ಮುಡಾ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಅವರನ್ನು ಇ.ಡಿ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದು ನಂತರ ಬಿಟ್ಟು ಕಳಿಸಿದ್ದಾರೆ. ನಟೇಶ್ ಅವರ ಮಲ್ಲೇಶ್ವರದ ಮನೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಶೋಧಕಾರ್ಯ ನಡೆಸಿದ್ದ ಅವರು ಮಂಗಳವಾರ ಸಂಜೆ ವಶಕ್ಕೆ ಪಡೆದಿದ್ದರು. ನಂತರ ಶಾಂತಿನಗರದ ಕಚೇರಿಯಲ್ಲಿ ಹೇಳಿಕೆ ದಾಖಲಿಸಿಕೊಂಡ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
ದಿನೇಶ್ ಮನೆಗೆ ಸಮನ್ಸ್
ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರ ಮನೆಗೆ ಮಂಗಳವಾರ ವಿಚಾರಣೆಗೆಂದು ತೆರಳಿದ್ದ ಇ.ಡಿ ಅಧಿಕಾರಿಗಳು ಬರಿಗೈಲಿ ಮರಳಿದ್ದಾರೆ. ಬೆಂಗಳೂರಿನ ಬಾಣಸವಾಡಿಯ ದೀಪಿಕಾ ರಾಯಲ್ ಅಪಾರ್ಟ್‌ಮೆಂಟ್ಸ್‌ನಲ್ಲಿರುವ ದಿನೇಶ್ ಅವರ ಮನೆಗೆ ಇ.ಡಿ ಅಧಿಕಾರಿಗಳು ಬೆಳಿಗ್ಗೆಯೇ ತೆರಳಿದ್ದರು.
ಈ ವೇಳೆ ಅವರು ಮನೆಯಲ್ಲಿ ಇಲ್ಲ ಎಂಬುದು ಗೊತ್ತಾದ ನಂತರ ಹಲವು ಗಂಟೆ ಅಲ್ಲೇ ಕಾದಿದ್ದರು. ಮಧ್ಯಾಹ್ನ 12ರ ವೇಳೆಗೆ ಮನೆ ಬಾಗಿಲಿಗೆ ಸಮನ್ಸ್ ಅಂಟಿಸಿ ವಾಪಸಾದರು. ‘ವಿಚಾರಣೆಗೆ ಹಾಜರಾಗಿ ಎಂದು ಸಮನ್ಸ್‌ನಲ್ಲಿ ಸೂಚಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ. ‘ಮೈಸೂರಿನಲ್ಲಿ ಶೋಧಕ್ಕೆ ಗುರಿಯಾಗಿರುವ ಉದ್ಯಮಿ ಜಯರಾಮ್ ಅವರು ದಿನೇಶ್ ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ ಅವರೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದರು ಎಂಬ ಮಾಹಿತಿ ಇತ್ತು. ಮೈಸೂರು ಮತ್ತು ಮಂಡ್ಯದಲ್ಲಿ ನಡೆದ ಶೋಧಕಾರ್ಯದ ವೇಳೆ ಇದಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.