ಮೈಸೂರು: ಇಲ್ಲಿನ ಲೋಕಾಯುಕ್ತ ಪೊಲೀಸರು ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಗುರುವಾರ ವಿಚಾರಣೆಗೆ ಹಾಜರಾಗುವಂತೆ ಮೂರನೇ ಮತ್ತು ನಾಲ್ಕನೇ ಆರೋಪಿಗಳಾದ, ಮುಖ್ಯಮಂತ್ರಿ ಬಾಮೈದ ಮಲ್ಲಿಕಾರ್ಜುನಸ್ವಾಮಿ ಹಾಗೂ ಜಮೀನಿನ ಹಿಂದಿನ ಮಾಲೀಕ ದೇವರಾಜು ಅವರಿಗೆ ನೋಟಿಸ್ ನೀಡಿದ್ದಾರೆ. ಈ ಇಬ್ಬರ ನಡುವೆ ಜಮೀನು ವ್ಯವಹಾರ ನಡೆದಿದ್ದು, ವಿಚಾರಣೆಯು ಮಹತ್ವ ಪಡೆದುಕೊಂಡಿದೆ.
‘ಕಚೇರಿ ಸಮಯದಲ್ಲಿ ವಿಚಾರಣೆಗೆ ಬರುವಂತೆ ಇಬ್ಬರಿಗೂ ನೋಟಿಸ್ ನೀಡಿದ್ದೇವೆ’ ಎಂದು ಲೋಕಾಯುಕ್ತ ಎಸ್‌ಪಿ ಟಿ.ಜೆ.ಉದೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆಂದು ನಾಲ್ಕು ತಂಡಗಳನ್ನು ರಚಿಸಿದ್ದು, ಕೆಸರೆ ಗ್ರಾಮದ ವಿವಾದಿತ ಜಮೀನು ಹಾಗೂ ವಿಜಯನಗರದಲ್ಲಿ ಮುಡಾ ನೀಡಿದ್ದ 14 ಬದಲಿ ನಿವೇಶನಗಳ ಸ್ಥಳ ಮಹಜರು ಮುಗಿದಿದೆ.
ತನಿಖಾಧಿಕಾರಿಗಳ ತಂಡವು ಮುಡಾದಲ್ಲಿ ದಾಖಲೆಗಳ ಪರಿಶೀಲನೆ ಮಾಡಿ ದೃಢೀಕೃತ ಪ್ರತಿಗಳನ್ನು ಪಡೆದುಕೊಳ್ಳುತ್ತಿದ್ದು, ತಹಶೀಲ್ದಾರ್ ಕಚೇರಿಯಲ್ಲಿ ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಲಾಗಿದೆ.
ಮೊದಲ ಮತ್ತು ಎರಡನೇ ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಬಿ.ಎಂ. ಪಾರ್ವತಿ ಅವರನ್ನು ಶೀಘ್ರ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.