ADVERTISEMENT

Muda Case | ಮುಡಾ ಪ್ರಕರಣ: ಸುರೇಶ್, ಪೊನ್ನಣ್ಣ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 11:12 IST
Last Updated 28 ಸೆಪ್ಟೆಂಬರ್ 2024, 11:12 IST
<div class="paragraphs"><p> ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿನ ಟಿ.ಕೆ. ಲೇಔಟ್‌ನ ತಮ್ಮ ನಿವಾಸದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಮತ್ತು ಕಾನೂನು ಸಲಹಗಾರ ಎ.ಎಸ್. ಪೊನ್ನಣ್ಣ ಅವರೊಂದಿಗೆ ಶನಿವಾರ ಎರಡು ತಾಸು ಗೋಪ್ಯ ಮಾತುಕತೆ ನಡೆಸಿದರು.

ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಕಾರಣ ನಡೆಸಬೇಕಾದ ಕಾನೂನು ಹೋರಾಟದ ಕುರಿತು ಅವರು ಚರ್ಚಿಸಿದರು. ಬಳಿಕ ಪಕ್ಷದ ಸ್ಥಳೀಯ ಮುಖಂಡರ ಜೊತೆಗೂ ಸಮಾಲೋಚನೆ ನಡೆಸಿದರು. ‘ಮುಡಾ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಕಾನೂನು ಹೋರಾಟ ನಡೆಸುತ್ತೇನೆ, ವಿರೋಧ ಪಕ್ಷದವರಿಗೆ ತಕ್ಕ ಉತ್ತರ ಕೊಡುವ ಕೆಸಲವನ್ನು ನೀವು ಮಾಡಬೇಕು ಎಂದು ತಿಳಿಸಿದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಿಎಂ, ‘ಬಿಜೆಪಿಯಲ್ಲೇ ಬಹಳ ಭ್ರಷ್ಟಾಚಾರಿಗಳಿದ್ದು, ಅವರ ಮೇಲೆ ಪ್ರಧಾನಿ ಮೋದಿಯವರು ಮೊದಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಹರಿಯಾಣ ವಿಧಾನಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಮುಡಾ ವಿಚಾರವನ್ನು ಮೋದಿ ಅವರು ಪ್ರಸ್ತಾಪಿಸಿದ ಬಗ್ಗೆ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಮೋದಿಯವರು ಮಣಿಪುರದ ಹಿಂಸೆಯ ಬಗ್ಗೆ ಮಾತನಾಡುವುದೂ ಇಲ್ಲ; ಅಲ್ಲಿಗೆ ಭೇಟಿಯನ್ನೂ ಕೊಡಲಿಲ್ಲವೇಕೆ? ಮೊದಲು ಅದಕ್ಕೆ ಉತ್ತರ ನೀಡಲಿ’ ಎಂದರು.

‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸುಳ್ಳುವುದೆಲ್ಲ ಸುಳ್ಳು. ಅವರ ಎಲ್ಲ ಹೇಳಿಕೆಗಳಿಗೂ ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದರು.

‘ಪೊನ್ನಣ್ಣ ನನ್ನ ಕಾನೂನು ಸಲಹೆಗಾರ ಆಗಿರುವುದರಿಂದ, ನಿತ್ಯವೂ ಅವರೊಂದಿಗೆ ಕಾನೂನಿನ ಚರ್ಚೆ ನಡೆಸುತ್ತೇನೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಶನಿವಾರ ಕ್ಷೇತ್ರಕ್ಕೆ ಹೋಗುತ್ತಿದ್ದ ಅವರು ಸೌಜನ್ಯದ ಭೇಟಿಯಾಗಿದ್ದಾರಷ್ಟೆ. ನಾನು ಅವರ ಬಳಿ ಯಾವ ಚರ್ಚೆಯನ್ನೂ ಮಾಡಿಲ್ಲ. ಕಾನೂನು ಹೋರಾಟದ ವಿಚಾರವನ್ನು ನಮ್ಮ ವಕೀಲರ ತಂಡ ನೋಡಿಕೊಳ್ಳುತ್ತದೆ’ ಎಂದು ತಿಳಿಸಿದರು.

ತಲೆನೋವಿನ ಕಾರಣಕ್ಕೆ:

‘ತಲೆನೋವಿದೆ, ಅದಕ್ಕಾಗಿ ಮಡಿಕೇರಿ ಕಡೆಗೆ ಹೋಗುತ್ತಿದ್ದೇನೆ. ಮುಡಾ ಪ್ರಕರಣದ ತಲೆನೋವೇನಿಲ್ಲ. ಹೀಗೆ ಸಮಸ್ಯೆ ಇರುತ್ತವಲ್ಲಾ? ಹಾಗಾಗಿ ರಿಲ್ಯಾಕ್ಸ್‌ಗೆ ಹೋಗುತ್ತಿದ್ದೇನೆ. ನಮಗೆ ಮುಡಾ ಪ್ರಕರಣ ತಲೆನೋವು ಅನ್ನಿಸಿಲ್ಲ. ಮುಖ್ಯಮಂತ್ರಿ ವಿರುದ್ಧ ಎಫ್ಐಆರ್ ಆಗಿರುವುದು ನಿರೀಕ್ಷಿತ. ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇವೆ’ ಎಂದು ಸಚಿವ ಸುರೇಶ್ ಹೇಳಿದರು.

‘ನಾನು ಆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿಲ್ಲ. ಅವರೊಂದಿಗೆ ಉಪಾಹಾರಕ್ಕೆ ಬಂದಿದ್ದೆ. ಮುಡಾದಲ್ಲಿ ನನ್ನ ಅವಧಿಯಲ್ಲಿ ಯಾವ ಹಗರಣವೂ ನಡೆದಿಲ್ಲ. ನನ್ನಿಂದಲೆ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಆಗಿದೆ ಎನ್ನುವುದರಲ್ಲಿ ಅರ್ಥವಿಲ್ಲ. ಹಗರಣ ನಡೆದ ಅವಧಿ ಯಾವುದು ಎಂಬುದನ್ನು ನೋಡಿರಿ. ನನ್ನನ್ನೇಕೆ ಇದರಲ್ಲಿ ಎಳೆಯುತ್ತೀರಾ?’ ಎಂದು ಕೇಳಿದರು.

ಕುರ್ಚಿ ಖಾಲಿ ಆಗುತ್ತದೆಂದು ಕೆಲವರು ಕಾಯುತ್ತಿದ್ದಾರೆ:

ಸಿದ್ದರಾಮಯ್ಯ ಅಪ್ಪಟ ಚಿನ್ನ. ಕೆಲವರಿಗೆ ಅವರನ್ನು ಕಂಡರೆ ಕೆಲವರಿಗೆ ಹೊಟ್ಟೆಹುರಿ. ಕುರ್ಚಿ ಖಾಲಿಯಾಗುತ್ತದೆ ಎಂದು ಕೆಲವರು ಕಾಯುತ್ತಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.