ಮೈಸೂರು: ಎಲ್ಲ ಮುಗಿದ ಮೇಲೆ ಈಗ ನಿವೇಶನ ವಾಪಸ್ ಕೊಟ್ಟರೆ ಪ್ರಯೋಜನ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಬಿಜೆಪಿ ಮುಖಂಡ ಪ್ರತಾಪ ಸಿಂಹ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು.
' ಪ್ರಕರಣ ಬೆಳಕಿಗೆ ಬಂದ ಕೂಡಲೇ ನಿವೇಶನ ವಾಪಸ್ ನೀಡಿ, ಮುಕ್ತ ತನಿಖೆ ಎದುರಿಸುವಂತೆ ಸಲಹೆ ನೀಡಿದ್ದೆ. ಈಗ ಇ.ಡಿ. ಪ್ರಕರಣ ದಾಖಲಾದ ನಂತರ ವಾಪಸ್ ನೀಡಿದ್ದಾರೆ. ಆಗಲೇ ನೀಡಿದ್ದರೆ ಕುರ್ಚಿ ಕಳೆದುಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಈಗ ಕೊಟ್ಟರೂ ಪ್ರಯೋಜನ ಇಲ್ಲ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು' ಎಂದರು.
'2023ರ ಚುನಾವಣೆ ಸಂದರ್ಭವೇ ಈ ನಿವೇಶನಗಳ ಅಕ್ರಮದ ದಾಖಲೆ ಬಂದಿತ್ತು. ಆದರೆ ಸಿದ್ದರಾಮಯ್ಯ ಪತ್ನಿ ವಿಚಾರ ಎಂಬ ಕಾರಣಕ್ಕೆ ಸುದ್ದಿಗೋಷ್ಡಿ ನಡೆಸಲಿಲ್ಲ' ಎಂದರು.
ಕುಟುಂಬ ರಾಜಕಾರಣಕ್ಕೆ ಪಾಠ: ' ಕುಟುಂಬ ರಾಜಕಾರಣ ಮಾಡುವ ಎಲ್ಲ ರಾಜಕಾರಣಿಗಳಿಗೆ ಈ ಪ್ರಕರಣ ಒಂದು ಪಾಠ. ಮುಂದೆ ಆದರೂ ಎಚ್ಚರಿಕೆಯ ಹೆಜ್ಜೆ ಇಡಿ. ನಿಮ್ಮ ಸ್ಥಾನದ ದುರುಪಯೋಗ ಪಡಿಸಿಕೊಂಡು ಅಕ್ರಮ ಮಾಡುತ್ತಾರೆ. ಸಿಕ್ಕಿಹಾಕಿಕೊಂಡ ನಂತರ ಕಣ್ಣೀರು ಹಾಕಿದರೆ ಪ್ರಯೋಜನ ಇಲ್ಲ' ಎಂದು ಸಲಹೆ ನೀಡಿದರು.
' ಸಿದ್ದರಾಮಯ್ಯರ ಪತ್ನಿ ಬಗ್ಗೆ ವೈಯಕ್ತಿಕವಾಗಿ ಮರುಕ ಇದೆ. ಎಂದೂ ಅವರು ಬಹಿರಂಗವಾಗಿ ಕಾಣಿಸಿಕೊಂಡವರಲ್ಲ. ಇಂದು ಕಟಕಟೆಗೆ ನಿಲ್ಲುವ ಸ್ಥಿತಿ ಬಂದಿದೆ. ನ್ಯಾಯಾಲಯ ವಿಚಾರಣೆಗೆ ಅನುಮತಿ ನೀಡಿದ ನಂತರ ನಿವೇಶನ ವಾಪಸ್ ಕೊಟ್ಟರೆ ಯಾರೂ ಒಪ್ಪುವುದಿಲ್ಲ. ಕದ್ದ ಮಾಲು ವಾಪಸ್ ಕೊಟ್ಟ ಮಾತ್ರಕ್ಕೆ ಕಳ್ಳನನ್ನು ಬಿಡಲು ಆಗದು. ಸಿದ್ದರಾಮಯ್ಯ ಮುಡಾದಿಂದ ಅಕ್ರಮವಾಗಿ ಪಡೆದ ನಿವೇಶನಗಳಿಗೆ 62 ಕೋಟಿ ಕೇಳಿದಾಗಲೇ ಅವರ ಮೇಲೆ ಇದ್ದ ಗೌರವ ನೆಲ ಕಚ್ಚಿದೆ. ಅವರು ಈ ಮಾತು ಆಡಬಾರದಿತ್ತು' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.