ADVERTISEMENT

ಮುಡಾ ಅಧಿಕಾರಿಗಳಿಗೆ ಇ.ಡಿ ವಿಚಾರಣೆ

ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:39 IST
Last Updated 25 ಅಕ್ಟೋಬರ್ 2024, 16:39 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

   

– ಪ್ರಜಾವಾಣಿ ಚಿತ್ರ

ಬೆಂಗಳೂರು/ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆರು ಅಧಿಕಾರಿಗಳನ್ನು ವಿಚಾರಣೆ ನಡೆಸಿದೆ.

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾದ ವಿವಿಧ ವಿಭಾಗಗಳ ಆರು ಸಿಬ್ಬಂದಿಗೆ, ಹಣ ಅಕ್ರಮ ವರ್ಗವಣೆ ತಡೆ ಕಾಯ್ದೆಯ 11(1ಸಿ) ಮತ್ತು 11(1ಇ) ಅಡಿಯಲ್ಲಿ ಸಮನ್ಸ್‌ ನೀಡಲಾಗಿತ್ತು. ಮುಡಾ ಕಚೇರಿಯಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ಸಂಗ್ರಹಿಸಲಾದ ದಾಖಲೆಗಳನ್ನು ಕಾಲಾನುಕ್ರಮದಲ್ಲಿ ಪರಿಷ್ಕರಿಸಲು ಮತ್ತು ಕೆಲವು ದಾಖಲೆಗಳನ್ನು ವಿವರಿಸಲು ಸೂಚಿಸಲಾಗಿತ್ತು’ ಎಂದು ಇ.ಡಿ ಮೂಲಗಳು ಹೇಳಿವೆ.

‘ವಿಶೇಷ ತಹಶೀಲ್ದಾರ್‌ ರಾಜಶೇಖರ್, ಈ ಹಿಂದಿನ ಮುಡಾ ಆಯುಕ್ತರ ಆಪ್ತ ಸಹಾಯಕಿ ಹುದ್ದೆಯಲ್ಲಿದ್ದ ಶೃತಿ, ಎಫ್‌ಡಿಎಗಳಾದ ಪ್ರಶಾಂತ್‌, ರವಿ ಕುಮಾರ್‌ ಮತ್ತು ಇನ್ನೂ ಇಬ್ಬರು ಸಿಬ್ಬಂದಿಗೆ ಸಮನ್ಸ್‌ ನೀಡಲಾಗಿತ್ತು. ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಕರೆಯಲಾಗುತ್ತದೆ. ಆಗ ಹಾಜರಾಗಬೇಕು ಎಂದೂ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿವೆ.

‘ಈ ವಾರದಲ್ಲೇ ಕಚೇರಿಗೆ ಹಾಜರಾಗುವಂತೆ ಇ.ಡಿ ಸೂಚಿಸಿತ್ತು. ಹೀಗಾಗಿ ಅಷ್ಟೂ ಸಿಬ್ಬಂದಿ ಶುಕ್ರವಾರವೇ ಇ.ಡಿ ಅಧಿಕಾರಿಗಳ ಎದುರು ಹಾಜರಾಗಿ, ಅವರು ಕೇಳಿದ ವಿವರಣೆ ನೀಡಿದ್ದಾರೆ. ಭೂಸ್ವಾಧೀನ ಮತ್ತು ನಿವೇಶನ ಹಂಚಿಕೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ವಿವರಿಸಿದ್ದಾರೆ’ ಎಂದು ಮುಡಾ ಮೂಲಗಳು ಹೇಳಿವೆ.

‘ಮುಡಾ ಕಚೇರಿಯಲ್ಲಿ ಪ್ರತಿ ಮಾಡಿಕೊಳ್ಳಲಾದ ಹಲವು ದಾಖಲೆಪತ್ರಗಳ ಸಂಬಂಧ ಗೊಂದಲಗಳ ಬಗ್ಗೆ ಇ.ಡಿ ಅಧಿಕಾರಿಗಳು ಪ್ರಶ್ನಿಸಿದರು. ಅವುಗಳನ್ನು ವಿವರಿಸಲಾಗಿದೆ. ಮುಡಾ ನಿವೇಶನ ಹಂಚಿಕೆ ಸಂಬಂಧದ ಶಿಫಾರಸು ಪತ್ರಗಳ ನಿರ್ವಹಣೆ ಪ್ರಕ್ರಿಯೆ, 50:50ರ ಅನುಪಾತದಲ್ಲಿ ಹಂಚಿಕೆಯಾದ ನಿವೇಶನಗಳ ಬಗ್ಗೆ ವಿವರಣೆ ಪಡೆದುಕೊಂಡರು’ ಎಂದು ತಿಳಿಸಿವೆ. 

ಮುಡಾ ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅನುಮತಿ ನೀಡಿದ್ದರು. ಹೈಕೋರ್ಟ್‌ ಏಕಸದಸ್ಯ ಪೀಠವು ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿತ್ತು. ಪರಿಣಾಮವಾಗಿ ಲೋಕಾಯುಕ್ತ ಪೊಲೀಸರು, ಪ್ರಕರಣ ದಾಖಲಿಸಿದ್ದರು.

ಸಿದ್ದರಾಮಯ್ಯ ವಿರುದ್ಧ ಸ್ನೇಹಮಯಿ ಕೃಷ್ಣ ಅವರು ಇ.ಡಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ ತನಿಖೆ ನಡೆಸುತ್ತಿದೆ. ಅ.18 ಮತ್ತು 19ರಂದು ಮುಡಾ ಕಚೇರಿ ಮತ್ತು ಮೈಸೂರು ತಾಲ್ಲೂಕು ಕಚೇರಿಯಲ್ಲಿ ಇ.ಡಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು. ಸಾವಿರಾರು ಪುಟಗಳಷ್ಟು ದಾಖಲೆ  ಪ್ರತಿಗಳನ್ನು ಕೊಂಡೊಯ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.