ಮೈಸೂರು: ‘ವಿರೋಧ ಪಕ್ಷಗಳು ಆರೋಪಿಸುವಂತೆ ಮುಡಾದಲ್ಲಿ ‘ಹಗರಣ’ ನಡೆದಿಲ್ಲ. ಅಧ್ಯಕ್ಷರು ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳಲು ಆಗದು. ಸಮಿತಿಯಲ್ಲಿ ಮೂರು ಪಕ್ಷಗಳ ಶಾಸಕರಿದ್ದು, ಹಾಗೊಂದು ವೇಳೆ ಲೋಪವಾಗಿದ್ದರೆ ಅದಕ್ಕೆ ಎಲ್ಲರೂ ಹೊಣೆ’
ಇದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಅವರ ಪ್ರತಿಪಾದನೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಅವರು ಮುಡಾ ಅಧ್ಯಕ್ಷರಾಗಿದ್ದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ 50;50 ನಿಯಮದಡಿ 14 ನಿವೇಶನಗಳ ಹಂಚಿಕೆಯಾಗಿತ್ತು. ಅವರು ಈಗ ಕಾಂಗ್ರೆಸ್‌ನಲ್ಲಿದ್ದಾರೆ.
ಮುಡಾದಲ್ಲಿ ನಿವೇಶನಗಳ ಹಂಚಿಕೆ ಹಾಗೂ ಅದರ ಸಾಧಕ–ಬಾಧಕಗಳ ಕುರಿತು ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ.
ಪ್ರಕರಣದಲ್ಲಿ ನಿಮ್ಮ ಪಾತ್ರವೂ ಇದ್ದು, ನಿಮ್ಮನ್ನು ಬಂಧಿಸಬೇಕು ಎಂದು ಬಿಜೆಪಿ–ಜೆಡಿಎಸ್ ನಾಯಕರು ಒತ್ತಾಯಿಸಿದ್ದಾರಲ್ಲಾ?
ರಾಜೀವ್: ಯಾರೋ ಒಬ್ಬರು ಬಂಧಿಸಿ ಎಂದ ಮಾತ್ರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಂಧಿಸಲು ಸಾಧ್ಯವೇ? ಕಾನೂನು ಉಲ್ಲಂಘಿಸಿದ್ದರೆ ಮಾತ್ರ ಬಂಧಿಸಲು ಸಾಧ್ಯ. ನಾನು ಬಿಜೆಪಿಯಲ್ಲಿದ್ದಾಗ ಆಗದ ತಪ್ಪು ಈಗ ಆಗಿದೆಯೇ? ಪಕ್ಷ ಬದಲಿಸಿದ ಮಾತ್ರಕ್ಕೆ ಕಾನೂನು ಬದಲಾಗುವುದಿಲ್ಲ.
ಮುಡಾ ಸಮಿತಿಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳ ಶಾಸಕರು ಸದಸ್ಯರಾಗಿದ್ದಾರೆ. ತಪ್ಪು ನಡೆದಿದೆ ಎಂದಾದರೆ ಅಂದೇ ಯಾಕೆ ಯಾರೂ ನನ್ನನ್ನು ಪ್ರಶ್ನಿಸಲಿಲ್ಲ. ಮೇಲಾಗಿ ಅಧ್ಯಕ್ಷರಿಗೆ ಯಾವುದೇ ನಿರ್ಣಯ ಕೈಗೊಳ್ಳುವ ಅಧಿಕಾರವೂ ಇಲ್ಲ.
ಹಾಗಿದ್ದರೆ ಮುಡಾದಲ್ಲಿ ಹಗರಣವೇ ನಡೆದಿಲ್ಲವೇ? ನಿವೇಶನಗಳು ಅಕ್ರಮವಾಗಿ ಹಂಚಿಕೆ ಆಗಿರುವುದನ್ನು ಒಪ್ಪುತ್ತೀರೋ, ಇಲ್ಲವೋ?
ರಾಜೀವ್: ಬಿಜೆಪಿ–ಜೆಡಿಎಸ್ ಆರೋಪಿಸುವಂತೆ ಯಾವ ಹಗರಣವೂ ನಡೆದಿಲ್ಲ. ಕೆಲವು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ನಿವೇಶನ ನೀಡಿರಬಹುದು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿ.
ಮುಡಾದಲ್ಲಿ 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಕಾನೂನುಬದ್ಧವಾಗಿ ನಡೆದಿದೆಯೇ?
ರಾಜೀವ್: ಖಂಡಿತ. 2020ರ ಸೆಪ್ಟೆಂಬರ್ 20ರಂದು ನಡೆದ ಸಭೆಗೆ ಅಧಿಕಾರಿಗಳು ಈ ಪ್ರಸ್ತಾವ ಮಂಡಿಸಿದ್ದರು. ಭೂ ಸ್ವಾಧೀನವಾಗದೆಯೇ ಬಡಾವಣೆ ನಿರ್ಮಿಸಿದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಬೇಕಿತ್ತು. 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನೀಡಬೇಕಿದ್ದರೆ ಕೋಟ್ಯಂತರ ರೂಪಾಯಿ ಬೇಕಿತ್ತು. ಮುಡಾ ಅಷ್ಟು ಶಕ್ತವಲ್ಲದ ಕಾರಣ ಬದಲಿ ನಿವೇಶನಗಳ ಹಂಚಿಕೆಗೆ ನಿರ್ಣಯಿಸಲಾಯಿತು. ಎಲ್ಲರೂ ಒಪ್ಪಿಯೇ ನಿರ್ಣಯಿಸಿದೆವು.
ಮುಡಾದಲ್ಲಿ ಮಂಜೂರಾತಿ ಪತ್ರಗಳ ಬಳಕೆಯಲ್ಲಿ ( ಸೆಕ್ಯುರಿಟಿ ಬಾಂಡ್ ಶೀಟ್) ಅಕ್ರಮ ನಡೆದಿರುವುದನ್ನು ದಾಖಲೆಗಳೇ ಹೇಳುತ್ತಿವೆ. ಈ ಬಗ್ಗೆ ಏನು ಹೇಳುತ್ತೀರಿ?
ರಾಜೀವ್: ಇದು ಆಡಳಿತಾತ್ಮಕ ವಿಚಾರ. ಅಧಿಕಾರಿಗಳೇ ಎಲ್ಲವನ್ನೂ ಕೈಗೊಳ್ಳುತ್ತಾರೆ. ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.