ಬೆಂಗಳೂರು: ಸದನದಲ್ಲಿ ಮುಡಾ ಹಗರಣದ ಚರ್ಚೆಗೆ ಅವಕಾಶ ನೀಡದೇ ಹೆದರಿ ಪಲಾಯನ ಮಾಡಿದ ಸಿಎಂ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು 'ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿಸಿದಂತಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
'ಚೆಕ್‌ನಲ್ಲಿ ಲಂಚ ಪಡೆದ ಬಿ.ವೈ.ವಿಜಯೇಂದ್ರ, ತನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ಯೋಗ್ಯತೆ ನಾಡಿನ ಜನರಿಗೆ ಗೊತ್ತಿದೆ' ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿರುವ ವಿಜಯೇಂದ್ರ, 'ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡೇ ತನಿಖೆ ಎದುರಿಸುತ್ತಿರುವ ಭ್ರಷ್ಟ ಮುಖ್ಯಮಂತ್ರಿ ಎಂಬ ಅಪಖ್ಯಾತಿಗೆ ಭಾಜನರಾಗಿರುವುದನ್ನು ದೇಶವೇ ಗಮನಿಸುತ್ತಿದೆ. ನೀವು ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ ಎನ್ನುವುದನ್ನು ನ್ಯಾಯಾಲಯವೇ ತೀರ್ಪಿತ್ತಿದೆ' ಎಂದು ಹೇಳಿದ್ದಾರೆ.
'ನೀವೊಬ್ಬ ವಕೀಲರೂ ಆಗಿ ಮತ್ತೆ ಮತ್ತೆ ಪ್ರಸ್ತಾಪಿಸುತ್ತಿರುವುದನ್ನು ನೋಡುತ್ತಿದ್ದರೆ ವಿವೇಕಶೂನ್ಯತೆ ನಿಮ್ಮನ್ನು ಕಾಡುತ್ತಿರುವಂತಿದೆ. ದಿನದಿಂದ ದಿನಕ್ಕೆ ಬಿಗಿಯಾಗುತ್ತಿರುವ ಕಾನೂನಿನ ಕುಣಿಕೆ ನಿಮ್ಮ ನೆಮ್ಮದಿಯನ್ನು ಕಸಿದಿದ್ದು ಇದರಿಂದ ತೀವ್ರ ವಿಚಲಿತಗೊಂಡಂತಿರುವ ನೀವು 'ಆಡಿದ್ದೇ ಆಡೋ ಕಿಸಬಾಯಿ ದಾಸ' ಎನ್ನುವಂತೆ ಅದೇ ಸುಳ್ಳು ಆರೋಪಗಳನ್ನು ಪುನರಾವರ್ತಿಸುತ್ತಿದ್ದೀರಿ' ಎಂದು ತಿರುಗೇಟು ನೀಡಿದ್ದಾರೆ.
'ನಿಮ್ಮದೇ ಸರ್ಕಾರವಿದೆ ನಮ್ಮ ಮೇಲಿನ ಯಾವುದೇ ಆರೋಪವನ್ನು ಸಾಬೀತುಪಡಿಸಲು ತ್ವರಿತಗತಿಯಲ್ಲಿ ತನಿಖೆ ನಡೆಸಲು ನಿಮ್ಮ ಭತ್ತಳಿಕೆಯಲ್ಲಿ ಬ್ರಹ್ಮಾಸ್ತ್ರವೇ ಇದೆ, ಆದಾಗ್ಯೂ ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಮರೆತು ಕ್ಷುಲ್ಲಕ ಆರೋಪಗಳನ್ನೇ ಚುನಾವಣಾ ಪ್ರಚಾರದ ಸರಕಾಗಿ ಬಳಸಿಕೊಳ್ಳುತ್ತಿರುವ ನಿಮ್ಮ ಪರಿಸ್ಥಿತಿ ನೋಡಿ ನಗುವಂತಾಗಿದೆ. ಸದನದಲ್ಲಿ ನಿಮ್ಮ ವಿರುದ್ಧದ ಮುಡಾ ಹಗರಣದ ಚರ್ಚೆಗೆ ಅವಕಾಶ ನೀಡದೇ ಹೆದರಿ ಪಲಾಯನ ಮಾಡಿದ ನೀವು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು 'ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿಸಿದಂತಾಗಿದೆ' ಎಂದು ಹೇಳಿದ್ದಾರೆ.
'ಅಮಾಯಕ ದಲಿತ ಕುಟುಂಬವನ್ನು ವಂಚಿಸಿ ಭೂಮಿ ಪಡೆದುಕೊಂಡ ಆರೋಪ ನಿಮ್ಮ ಕುಟುಂಬದ ಮೇಲಿದೆ. ಅದೇ ಭೂಮಿಯನ್ನು ಮುಡಾ ಬಳಸಿಕೊಂಡಿದೆ ಎಂದು 14 ನಿವೇಶನಗಳನ್ನು ಲಪಟಾಯಿಸಿದ ತನಿಖೆ ನಿಮ್ಮ ವಿರುದ್ಧ ನಡೆಯುತ್ತಿದೆ. ನೀವು ತಪ್ಪು ಮಾಡದಿದ್ದರೆ ನೀವು ಕೇಳಿರುವ ₹62 ಕೋಟಿ ಬರಲೇಬೇಕಾಗಿದ್ದರೆ ನೀವೇಕೆ ಮುಡಾಗೆ ನಿವೇಶನಗಳನ್ನು ಬೇಷರತ್ತಾಗಿ ರಾತ್ರೋರಾತ್ರಿ ವಾಪಸ್ ನೀಡಿದಿರಿ. ನೀವು ಸ್ವಚ್ಛರಾಗಿದ್ದರೆ ಪಾರದರ್ಶಕ ತನಿಖೆಗೆ ಅವಕಾಶ ನೀಡದೇ ಭ್ರಷ್ಟತೆಯನ್ನು ಏಕೆ ಸಮರ್ಥಿಸಿ ಕೊಳ್ಳುತ್ತಿದ್ದೀರಿ? ನೈತಿಕತೆ ಎಂಬ ಪದವನ್ನು ಕಸದಬುಟ್ಟಿಗೆ ಸೇರಿಸಿದ ನಿಮ್ಮಿಂದ ಪ್ರಾಮಾಣಿಕತೆ ಮಾತು ಕೇಳಿಬರುತ್ತಿರುವುದು ಕರ್ಕಶವಾಗಿದೆ' ಎಂದು ಹೇಳಿದ್ದಾರೆ.
'ರಾಜ್ಯಪಾಲರು ನಿಮ್ಮ ಮೇಲಿನ ಆರೋಪದ ಬಗ್ಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿಯಾಯಿತು, ಅದನ್ನು ಪ್ರಶ್ನಿಸಿದ ನಿಮಗೆ ಉಚ್ಛ ನ್ಯಾಯಾಲಯದ ಮೂಲಕ ಮಂಗಳಾರತಿಯೂ ಆಯಿತು, ಜನಪ್ರತಿನಿಧಿಗಳ ನ್ಯಾಯಾಲಯ ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಎಫ್ಐಆರ್ ದಾಖಲಿಸುವಂತೆ ಲೋಕಾಯುಕ್ತಕ್ಕೆ ನಿರ್ದೇಶನ ನೀಡಿಯೂ ಆಯಿತು, ಸದ್ಯ ಲೋಕಾಯುಕ್ತದಲ್ಲಿ ತನಿಖೆ ಮುಂದುವರಿದಿದೆ. ನಿಮ್ಮದೇ ಕೈ ಕೆಳಗಿನ ಅಧಿಕಾರಿಗಳು ಎಷ್ಟರ ಮಟ್ಟಿಗೆ ತನಿಖೆ ನಡೆಸುತ್ತಾರೆ ಎಂಬ ಸಂಶಯದಿಂದ ಉಚ್ಛ ನ್ಯಾಯಾಲಯದಲ್ಲಿ ಸಿಬಿಐ ತನಿಖೆಗೆ ಆದೇಶಿಸುವಂತೆ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಯುತ್ತಿದೆ' ಎಂದು ಹೇಳಿದ್ದಾರೆ.
'ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುವ ನೀವು ಮೊದಲು ಸಾಮಾನ್ಯ ಪ್ರಜೆಯ (ಸ್ನೇಹಮಯಿ ಕೃಷ್ಣ) ನ್ಯಾಯಾಂಗ ಹೋರಾಟದ ವಿರುದ್ಧ ಜಯಿಸಿ ತೋರಿಸಿ ನೋಡೋಣ, ಆಮೇಲೆ ಇತರೆಲ್ಲರ ಭ್ರಷ್ಟತೆಯ ವಿರುದ್ಧ ಮಾತನಾಡುವಿರಂತೆ. ಸದ್ಯ ನಿಮ್ಮ ಮುಖಕ್ಕೆ ಮೆತ್ತಿಕೊಂಡಿರುವ ಕಪ್ಪು ಮಸಿಯನ್ನು ಸ್ವಚ್ಛಗೊಳಿಸುವತ್ತ ಗಮನ ನೀಡಿ. ಏಕೆಂದರೆ ಕರ್ನಾಟಕದ ಸಾರ್ವಭೌಮತ್ವದ ಸಂಕೇತವಾದ ಮುಖ್ಯಮಂತ್ರಿ ಸ್ಥಾನದ ಘನತೆ ನಿಮ್ಮ ಭಂಡತನದ ನಡವಳಿಕೆಯಿಂದ ದಿನದಿಂದ ದಿನಕ್ಕೆ ಕುಗ್ಗುತ್ತಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.