ಬೆಂಗಳೂರು: ‘ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ಪೂರ್ಣಗೊಳಿಸಿದರು.
ತೀರ್ಪು ಕಾಯ್ದಿರಿಸಿದ ನ್ಯಾಯಮೂರ್ತಿಗಳು ಮಧ್ಯಾಹ್ನ 12 ಗಂಟೆಯಿಂದ ಸಂಜೆ 6.25ರವರೆಗೆ ಪ್ರಕರಣದ ವಿಚಾರಣೆಯನ್ನು ಆಲಿಸಿದರು.
ವಾದ ಸರಣಿ ಹೀಗಿತ್ತು
‘ವಿಷಲ್ ಬ್ಲೋವರ್‌ಗಳ ವಿರುದ್ಧ ಆರೋಪಗಳು ಬರುವುದು ಸಹಜ...’
‘ಪಿಐಎಲ್ ಪ್ರಕರಣವೊಂದರಲ್ಲಿ ಟಿ.ಜೆ.ಅಬ್ರಹಾಂಗೆ ಸುಪ್ರೀಂ ಕೋರ್ಟ್ ₹25 ಲಕ್ಷ ದಂಡ ಹಾಕಿದೆ’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ಆರೋಪಕ್ಕೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಪ್ರತಿಕ್ರಿಯಿಸಿದ್ದು ಹೀಗೆ.
* ಮುಖ್ಯಮಂತ್ರಿ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶ ತರ್ಕರಹಿತ ಅನುಮತಿ. ಅನುಮತಿ ನೀಡುವ ಮುನ್ನ ತಮ್ಮ ವಿವೇಚನೆಯನ್ನು ಹೇಗೆ ಬಳಸಿದ್ದೇನೆ ಎಂದು ಅವರು ಎಲ್ಲಿಯೂ ತಿಳಿಸಿಲ್ಲ. ಈ ಕೇಸಿನಲ್ಲಿ ಸಿದ್ದರಾಮಯ್ಯನವರ ಪಾತ್ರವೇನು ಎಂದು ಎಲ್ಲೂ ಹೇಳಿಲ್ಲ. ಸಿದ್ದರಾಮಯ್ಯನವರ ಸಹಿಯೇ ಇಲ್ಲದ 23 ವರ್ಷಗಳ ಹಳೆಯ ಪ್ರಕರಣದ ಆರೋಪದಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರು, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧದ ಮೊಟ್ಟೆ ಖರೀದಿ ಹಗರಣದ ಆರೋಪಕ್ಕೆ ತನಿಖೆಗೆ ಅನುಮತಿ ನೀಡದಿರಲು ಕಾರಣಗಳನ್ನು ನೀಡಿದ್ದಾರೆ. ಆದರೆ, ಸಿದ್ದರಾಮಯ್ಯನವರ ಪ್ರಕರಣದಲ್ಲಿ ತಾರತಮ್ಯಪೂರಿತ ನಡೆ ಅನುಸರಿಸಿದ್ದಾರೆ.
–ಅಭಿಷೇಕ್ ಮನು ಸಿಂಘ್ವಿ
* ಕಳೆದ ಐವತ್ತು ವರ್ಷಗಳಲ್ಲಿ ಸಿದ್ದರಾಮಯ್ಯ ಮಾತ್ರವೇ ಐದು ವರ್ಷಗಳ ಅಧಿಕಾರವಧಿ ಪೂರೈಸಿದ ಮುಖ್ಯಮಂತ್ರಿ ಎನಿಸಿದ್ದಾರೆ. ಐದು ವರ್ಷಗಳ ನಂತರ ಮತ್ತೊಮ್ಮೆ ಸಿ.ಎಂ ಆಗಿ ಆಯ್ಕೆಯಾಗಿದ್ದಾರೆ. ದೀರ್ಘಾವಧಿ ಸಿ.ಎಂ ಆಗಿರುವವರು ಜುಜುಬಿ ಸೈಟ್‌ಗೆ ಹೀಗೆಲ್ಲಾ ಮಾಡುವ ಅಗತ್ಯವಿರಲಿಲ್ಲ. ಜನಪ್ರಿಯ ನಾಯಕರು ಅಧಿಕಾರದಲ್ಲಿದ್ದಾಗ ಸಂಬಂಧಿಕರು, ಅಧಿಕಾರಿಗಳು ಅಸೂಯೆಯಿಂದ ಈ ರೀತಿ ಏನಾದರೂ ಮಾಡಿರಬಹುದು. ಅದಕ್ಕೆಲ್ಲಾ ಸಿದ್ದರಾಮಯ್ಯರನ್ನು ಹೊಣೆ ಮಾಡುವುದು ಸರಿಯಲ್ಲ.
– ಸಿಎಂ ಪರ ಹಿರಿಯ ವಕೀಲ ರವಿವರ್ಮ ಕುಮಾರ್
* ರಾಜ್ಯಪಾಲರು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿಲ್ಲ. ಹೀಗಾಗಿ, ರಾಜ್ಯಪಾಲರ ಅನುಮತಿ ಕಾನೂನುಬಾಹಿರ.
– ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ
* ಭೂ ಸ್ವಾಧೀನ ಪ್ರಕರಣಗಳಲ್ಲಿ ಜಮೀನು ಕಳೆದುಕೊಂಡವರಿಗೆ ಪರಿಹಾರ ರೂಪದಲ್ಲಿ ನೀಡಲಾಗುವ ನಿವೇಶನಗಳು ಸಕ್ಷಮ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಬಡಾವಣೆಯನ್ನು ಎಲ್ಲಿ ಅಭಿವೃದ್ಧಿ ಮಾಡಿರುತ್ತದೆಯೋ ಅಲ್ಲೇ ಅಥವಾ ಸಮಾನಾಂತರ ಮೌಲ್ಯದ ವ್ಯಾಪ್ತಿ ಪ್ರದೇಶದಲ್ಲೇ ಬದಲಿ ನಿವೇಶನ ಪಡೆಯಬೇಕು.
– ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.