ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಸಂಬಂಧ ತನಿಖೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯವು (ಇ.ಡಿ), 50:50ರ ಅನುಪಾತದಲ್ಲಿ ಪರಿಹಾರ ನಿವೇಶನಗಳನ್ನು ಪಡೆದ ಎಲ್ಲ ಪ್ರಕರಣಗಳಿಗೂ ತನಿಖೆಯನ್ನು ವಿಸ್ತರಿಸಿದೆ. ಈ ಸಂಬಂಧ ಬೆಂಗಳೂರು, ಮೈಸೂರು ಮತ್ತು ಮಂಡ್ಯದ 8 ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ.
ಮೂರೂ ಜಿಲ್ಲೆಗಳ ಎಂಟು ಸ್ಥಳಗಳಲ್ಲಿ ಸೋಮವಾರ ಬೆಳಿಗ್ಗೆ ಏಕಕಾಲದಲ್ಲಿ ತಲಾ 5–6 ಸಿಬ್ಬಂದಿ ಇದ್ದ ಇ.ಡಿ ತಂಡಗಳು ದಾಳಿ ನಡೆಸಿವೆ. ಕೆಲವೆಡೆ ಮಧ್ಯಾಹ್ನದ ವೇಳೆಗೇ ಶೋಧಕಾರ್ಯ ಮುಗಿದಿದ್ದರೆ, ಕೆಲವೆಡೆ ಸಂಜೆಯವರೆಗೂ ಶೋಧ ಮತ್ತು ವಿಚಾರಣೆ ನಡೆಸಿದ್ದಾರೆ.
‘50:50ರ ಅನುಪಾತದಲ್ಲಿ ಭೂಮಾಲೀಕರಿಗೆ ಪರಿಹಾರ ನಿವೇಶನಗಳನ್ನು ನೀಡುವಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂಬುದು ಇದೇ ಅಕ್ಟೋಬರ್ 18 ಮತ್ತು 19ರಂದು ಮುಡಾ ಕಚೇರಿಯಲ್ಲಿ ನಡೆಸಿದ ಶೋಧಕಾರ್ಯ ಮತ್ತು ಮುಡಾ ಸಿಬ್ಬಂದಿಯ ವಿಚಾರಣೆ ವೇಳೆ ಪತ್ತೆಯಾಗಿತ್ತು. ಈ ಸಂಬಂಧ ಇನ್ನಷ್ಟು ದಾಖಲೆ ಮತ್ತು ಮಾಹಿತಿ ಕಲೆಹಾಕಲು ಶೋಧಕಾರ್ಯ ನಡೆಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಮುಡಾವು ಭೂಸ್ವಾಧೀನಪಡಿಸಿಕೊಳ್ಳದೇ ಬಡಾವಣೆ ಅಭಿವೃದ್ಧಿಪಡಿಸಿದ್ದ ಪ್ರಕರಣಗಳಲ್ಲಿ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳು ಭೂಮಾಲೀಕರಿಂದ ಅಂತಹ ಜಮೀನಿಗಳನ್ನು ಜಿಪಿಎ ಮಾಡಿಸಿಕೊಂಡಿದ್ದಾರೆ. ಜಿಪಿಎ ಮಾಡಿಸಿಕೊಂಡ ಉದ್ಯಮಿಗಳ ಹೆಸರಿಗೇ ಅಕ್ರಮವಾಗಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇಂತಹ ನೂರಾರು ಪ್ರಕರಣಗಳು ನಡೆದಿವೆ’ ಎಂದು ಮೂಲಗಳು ಹೇಳಿವೆ.
‘ರಟ್ಟಗಳ್ಳಿ, ಬೆಳವಟ್ಟ, ಹಿನಕಲ್, ಕೇರ್ಗಳ್ಳಿ ಮತ್ತು ಕೆಸರೆ ಗ್ರಾಮದಲ್ಲಿ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ನಂತರ ಕೈಬಿಡಲಾಗಿದೆ. ಅಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಲಾಗಿದೆ ಎಂದು ಭೂಮಾಲೀಕರಿಗೆ ಬೇರೆಡೆ ಪರಿಹಾರ ಜಮೀನುಗಳನ್ನು ನೀಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಭೂಮಾಲೀಕರಿಗೇ ನಿವೇಶನ ದೊರೆತಿದ್ದರೆ, ಉಳಿದ ಪ್ರಕರಣಗಳಲ್ಲಿ ಜಿಪಿಎ ಹೊಂದಿರುವವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವುದು ಪತ್ತೆಯಾಗಿದೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.