ಮೈಸೂರು: ‘ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಗಣಿಗೆ ಸಂಬಂಧಿಸಿದ ಹಗರಣದಲ್ಲಿ ತನಿಖೆ ನಡೆಸಲು ಲೋಕಾಯುಕ್ತ ಸಂಸ್ಥೆ ಅನುಮತಿ ಕೇಳಿ 10 ತಿಂಗಳಾದರೂ ರಾಜ್ಯಪಾಲರು ಸಂಪೂರ್ಣ ಮೌನ ವಹಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಬಿಜೆಪಿ ಸರ್ಕಾರದಲ್ಲಿ ಸಚಿವೆ ಆಗಿದ್ದ ಶಶಿಕಲಾ ಜೊಲ್ಲೆ ಅವರ ವಿರುದ್ಧದ ತನಿಖೆಗೆ ಅನುಮತಿ ನೀಡಿ ಎಂದು ಕೋರಿದ್ದ ಕಡತವನ್ನೂ ರಾಜ್ಯಪಾಲರು ಮೂಲೆಗೆ ತಳ್ಳಿದ್ದಾರೆ. ಸಾಲದು ಎಂಬಂತೆ ಮುರುಗೇಶ್ ನಿರಾಣಿ ಅವರ ತನಿಖೆಗೆ ಸಂಬಂಧಿಸಿದ ಕಡತವೂ ರಾಜ್ಯಪಾಲರ ಕಚೇರಿಯಲ್ಲಿ ಧೂಳು ಹಿಡಿಯುತ್ತದೆ’ ಎಂದು ಟೀಕಿಸಿದ್ದಾರೆ.
‘ಪರಿಸ್ಥಿತಿ ಹೀಗಿರುವಾಗ, ನ್ಯಾಯಾಲಯದಿಂದಲೇ ಛೀಮಾರಿ ಹಾಕಿಸಿಕೊಂಡ ವ್ಯಕ್ತಿಯೊಬ್ಬ ನೀಡಿರುವ ದೂರನ್ನು ಆಧರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾತ್ರೋರಾತ್ರಿ ನೋಟಿಸ್ ಜಾರಿಗೊಳಿಸಿ ಈಗ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರು, ತಾರತಮ್ಯದಿಂದ ಮತ್ತು ಪೂರ್ವಾಗ್ರಹ ಪೀಡಿತರಾಗಿ ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ. ರಾಜ್ಯಪಾಲರಾಗಿ ಒಂದು ಕ್ಷಣವೂ ಮುಂದುವರೆಯುವ ನೈತಿಕತೆ ಅವರಿಗಿಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ರಾಜಕೀಯ ಪಕ್ಷಗಳ ಹಿತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಅವರನ್ನು ರಾಷ್ಟ್ರಪತಿಗಳು ಕೂಡಲೇ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.