ADVERTISEMENT

MUDA | ಜಿಟಿಡಿ ಬೆಂಬಲ; ಸತ್ಯಕ್ಕೆ ಜಯ ಸಿಗಲಿದೆ ಎಂಬುದಕ್ಕೆ ಸಾಕ್ಷಿ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2024, 12:55 IST
Last Updated 3 ಅಕ್ಟೋಬರ್ 2024, 12:55 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಪರ ಬೆಂಬಲ ವ್ಯಕ್ತಪಡಿಸಿರುವ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾಯಿ ಚಾಮುಂಡೇಶ್ವರಿಯನ್ನು ಸಾಕ್ಷಿಯಾಗಿಟ್ಟುಕೊಂಡು ದಸರಾ ಹಬ್ಬದ ಬೃಹತ್ ಸಮಾರಂಭದಲ್ಲಿ ಜಿಟಿಡಿ ಸತ್ಯ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಶಾಸಕ ಮಿತ್ರರಾದ ಜಿ.ಟಿ.ದೇವೇಗೌಡ ಅವರು ಬಹಳ ವರ್ಷಗಳಿಂದ ನನ್ನ ವೈಯಕ್ತಿಕ ಮತ್ತು ರಾಜಕೀಯ ಜೀವನವನ್ನು ಸಮೀಪದಿಂದ ಕಂಡು ಬಲ್ಲವರು. ಕಳೆದ ಹಲವು ವರ್ಷಗಳಿಂದ ಅವರು ಮುಡಾದ ಸದಸ್ಯರೂ ಆಗಿದ್ದಾರೆ. ರಾಜಕೀಯವಾಗಿ ನಾವು ಬೇರೆ ಬೇರೆ ಪಕ್ಷದಲ್ಲಿರಬಹುದು. ಆದರೆ, ಸತ್ಯ ಮತ್ತು ನ್ಯಾಯಕ್ಕೆ ಪಕ್ಷ ಮುಖ್ಯವಲ್ಲ. ಅದು ವ್ಯಕ್ತಿಯ ಆತ್ಮಸಾಕ್ಷಿಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.

ADVERTISEMENT

‘ಜಿ.ಟಿ.ದೇವೇಗೌಡ ಅವರು ಇಂದು ತಮ್ಮ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು, ತಾಯಿ ಚಾಮುಂಡೇಶ್ವರಿಯನ್ನು ಸಾಕ್ಷಿಯಾಗಿಟ್ಟುಕೊಂಡು ದಸರಾ ಹಬ್ಬದ ಬೃಹತ್‌ ಸಮಾರಂಭದಲ್ಲಿ ಸತ್ಯ ಮಾತನಾಡಿದ್ದಾರೆ. ನಾನು ಎಂದೂ ದ್ವೇಷ ರಾಜಕೀಯ ಮಾಡಿದವನಲ್ಲ, ವಿರೋಧಿ ರಾಜಕಾರಣಿಗಳ ವೈಯಕ್ತಿಕ ಬದುಕು ಇಲ್ಲವೆ ಅವರ ಕುಟುಂಬವನ್ನು ರಾಜಕೀಯ ಜಿದ್ದಾಜಿದ್ದಿಗೆ ಬಳಸಿಕೊಂಡವನಲ್ಲ’ ಎಂದು ಸಿಎಂ ಬರೆದುಕೊಂಡಿದ್ದಾರೆ.

‘ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದಲ್ಲಿರುವ ಅನೇಕ ನಾಯಕರಿಗೆ ಜಿ.ಟಿ.ದೇವೇಗೌಡ ಅವರು ಹೇಳಿರುವ ಸತ್ಯ ಗೊತ್ತಿದೆ. ಆದರೆ, ತಮ್ಮ ಪಕ್ಷದ ಕೆಲವು ಹಿರಿಯ ನಾಯಕರ ಒತ್ತಡಕ್ಕೆ ಬಲಿಯಾಗಿ ಮೌನವಾಗಿದ್ದಾರೆ. ಅವರು ಕೂಡಾ ಮುಕ್ತವಾಗಿ ಮಾತನಾಡಬೇಕಾದ ಕಾಲ ಸನ್ನಿಹಿತವಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕೆ ವಿನಃ ಸುಳ್ಳು ಆರೋಪಗಳ ಮೂಲಕ ಹೆಣೆಯುವ ರಾಜಕೀಯ ಷಡ್ಯಂತ್ರದಿಂದಲ್ಲ. ಈ ಕೆಟ್ಟ ಪರಂಪರೆಯನ್ನು ತಡೆಗಟ್ಟಬೇಕಾದರೆ ನಮ್ಮ ರಾಜಕೀಯ ನಾಯಕರೆಲ್ಲರೂ ಪಕ್ಷಾತೀತವಾಗಿ ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವ ಧೈರ್ಯ ಮಾಡಬೇಕಾಗುತ್ತದೆ. ಈ ಮೂಲಕ ಕರ್ನಾಟಕದಿಂದ ಹೊಸ ರಾಜಕೀಯ ಪರಂಪರೆಗೆ ನಾಂದಿ ಹಾಡಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಈ ಮೊದಲು ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಸ್ ಮುಖಂಡರು ಎಲ್ಲರಿಗೂ ದೇವಿ ಚಾಮುಂಡೇಶ್ವರಿ ಒಳ್ಳೆ ಬುದ್ಧಿ ಕೊಡಲಿ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.