ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರು ಮುಡಾಕ್ಕೆ ಸಲ್ಲಿಸಿರುವ ಕೆಲವು ದಾಖಲೆಗಳಲ್ಲಿ ಅವರ ಬದಲಿಗೆ ಸಿದ್ದರಾಮಯ್ಯ ಆಪ್ತ ಸಹಾಯಕ ಎಸ್.ಜಿ.ದಿನೇಶ್ ಕುಮಾರ್ (ಸಿ.ಟಿ. ಕುಮಾರ್) ಸಹಿ ಇದೆ. ಇದು ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಪುಷ್ಟೀಕರಿಸುವಂತೆ ಇದೆ’ ಎಂದು ಆರೋಪಿಸಲಾಗಿದೆ.
ವಿಜಯನಗರ ಮೂರು ಹಾಗೂ ನಾಲ್ಕನೇ ಹಂತದ ವಿವಿಧೆಡೆ ತಮ್ಮ ಹೆಸರಿಗೆ ಮುಡಾದಿಂದ ಕ್ರಯಪತ್ರ ವಾಗಿರುವ 13 ನಿವೇಶನಗಳ ಖಾತೆ ನೋಂದಣಿ ಕೋರಿ ಪಾರ್ವತಿ ಅವರು 2022ರ ಜನವರಿ 14ರಂದು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದರು. ಆದರೆ ಈ ಪತ್ರದ ಕೊನೆಯಲ್ಲಿ ಅವರ ಸಹಿಯ ಜಾಗದಲ್ಲಿ ದಿನೇಶ್‌ಕುಮಾರ್ ಸಹಿ ಮಾಡಿದ್ದಾರೆ. ಅದನ್ನೇ ಮಾನ್ಯ ಮಾಡಿ ಮುಡಾ ಅಧಿಕಾರಿಗಳು ನಿವೇಶನಗಳ ಖಾತೆ ನೋಂದಣಿ ಮಾಡಿಕೊಟ್ಟಿದ್ದಾರೆ ಇದರ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
2014ರ ಜೂನ್ 23ರಂದು ಪಾರ್ವತಿ ಅವರು ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ ಜಮೀನಿಗೆ ಬದಲಿ ಜಮೀನು ಇಲ್ಲವೇ ನಿವೇಶನ ಕೋರಿ ಮುಡಾಕ್ಕೆ ಪತ್ರ ಬರೆದಿದ್ದರು. ಪ್ರತಿಯಾಗಿ ಮುಡಾ ಆಗಸ್ಟ್ 18ರಂದು ಪಾರ್ವತಿ ಅವರಿಗೆ ತಿಳಿವಳಿಕೆ ಪತ್ರ ಬರೆದು, ಬದಲಿ ನಿವೇಶನದ ಸಾಧ್ಯತೆ ಕುರಿತು ವಿವರಿಸಿತ್ತು. ಆ ಪತ್ರಕ್ಕೆ ಪಾರ್ವತಿ ಅವರ ಬದಲಿಗೆ ದಿನೇಶ್‌ಕುಮಾರ್ ಅವರು ಸ್ವೀಕೃತಿ ಸಹಿ ಮಾಡಿಕೊಟ್ಟಿದ್ದಾರೆ.
ದೂರು: ‘ಮುಖ್ಯಮಂತ್ರಿ ಪತ್ನಿ ಬದಲಿಗೆ ಅವರ ಆಪ್ತ ಸಹಾಯಕ ಸಹಿ ಮಾಡಿರುವುದು ನಿಯಮಬಾಹಿರ. ಹೀಗಾಗಿ ಎಲ್ಲ ನಿವೇಶನಗಳ ಖಾತೆ ರದ್ದುಪಡಿಸಬೇಕು’ ಎಂದು ಒತ್ತಾಯಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಎನ್.ಗಂಗರಾಜು ಮುಡಾ ಆಯುಕ್ತರು ಹಾಗೂ ಕಾರ್ಯದರ್ಶಿಗೆ ಬುಧವಾರ ದೂರು ಸಲ್ಲಿಸಿದ್ದಾರೆ.
‘ಮುಡಾದಿಂದ ನೀಡಲಾಗಿದ್ದ ತಿಳಿವಳಿಕೆ ಪತ್ರಕ್ಕೆ ಪಾರ್ವತಿ ಅವರ ಬದಲಿಗೆ ದಿನೇಶ್‌ಕುಮಾರ್ ಸ್ವೀಕೃತಿ ಸಹಿ ಮಾಡಿದ್ದಾರೆ. ಪ್ರಕರಣದ ಆರಂಭದಿಂದಲೂ ಇದನ್ನು ಸಿದ್ದರಾಮಯ್ಯ ಅವರ ಆಪ್ತ ಸಹಾಯಕನೇ ನಿರ್ವಹಿಸುತ್ತಿರುವುದಕ್ಕೆ ಇದೇ ಸಾಕ್ಷ್ಯವಾಗಿದೆ’ ಎಂದು ಗಂಗರಾಜು ಹೇಳುತ್ತಾರೆ.
‘2022ರಲ್ಲಿ ಪಾರ್ವತಿ ಅವರು ಬರೆದಿದ್ದ ಪತ್ರದಲ್ಲಿ ದಿನೇಶ್‌ಕುಮಾರ್ ಸಹಿ ಇದೆ. ಅರ್ಜಿದಾರ ಹೊರತುಪಡಿಸಿ ಉಳಿದವರಿಗೆ ಸಹಿ ಮಾಡಲು ಅವಕಾಶ ವಿಲ್ಲ. ಇದು ಗೊತ್ತಿದ್ದೂ ಅಧಿಕಾರಿಗಳು ನಿವೇಶನಗಳ ಖಾತೆ ಮಾಡಿದ್ದಾರೆ. 13 ನಿವೇಶನ ಮಂಜೂರಾಗಿದ್ದು, 14 ನಿವೇಶನಗಳನ್ನು ಖಾತೆ ಮಾಡಿಕೊಡಲಾಗಿದೆ.
‘ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದಕ್ಕೆ ಇದು ಸಾಕ್ಷ್ಯ. ಈ ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಹೀಗಾಗಿ ಇಡೀ ಪ್ರಕರಣ ವನ್ನು ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.