ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರನ್ನು ವಿಚಾರಣೆಗೆ ಒಳಪಡಿಸಿದರು.
ಪ್ರಕರಣದ ಎರಡನೇ ಆರೋಪಿಯಾಗಿರುವ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಗುರುವಾರ ನೋಟಿಸ್ ನೀಡಲಾಗಿತ್ತು. ಅದರಂತೆ, ಕಚೇರಿಯಲ್ಲಿ ಬೆಳಿಗ್ಗೆ 10ರಿಂದ 12.45ರವರೆಗೆ ಲೋಕಾಯುಕ್ತ ಎಸ್‌ಪಿ ಟಿ.ಜೆ. ಉದೇಶ್ ನೇತೃತ್ವದ ತಂಡವು ವಿಚಾರಣೆ ನಡೆಸಿತು.
ಕೆಸರೆಯ ಸರ್ವೆ ಸಂಖ್ಯೆ 464ರ 3.16 ಎಕರೆ ಭೂಮಿ ಬದಲಿಯಾಗಿ ವಿಜಯನಗರ ಮೂರನೇ ಹಾಗೂ ನಾಲ್ಕನೇ ಹಂತದಲ್ಲಿ 50:50 ಅನುಪಾತದಲ್ಲಿ ಮುಡಾ 14 ನಿವೇಶನಗಳನ್ನು ನೀಡಿತ್ತು. ಈ ಹಂಚಿಕೆ ಕುರಿತು ಪೊಲೀಸರು ಪ್ರಶ್ನೆಗಳನ್ನು ಕೇಳಿದ್ದಾರೆ. ಪಾರ್ವತಿಯವರು ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿ, ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ತನಿಖೆಗೆ ಸಹಕಾರ ನೀಡಿದರು ಎನ್ನಲಾಗಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ಆಧರಿಸಿ, ಬೆಂಗಳೂರಿನ ವಿಶೇಷ ನ್ಯಾಯಾಲಯವು ಸೆ.25ರಂದು ನೀಡಿದ ನಿರ್ದೇಶನದಂತೆ ಲೋಕಾಯುಕ್ತ ಪೊಲೀಸರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಸೆ.27ರಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಕೆಸರೆಯ ಜಮೀನನ್ನು ಪ್ರಕರಣದ ನಾಲ್ಕನೇ ಆರೋಪಿಯಾದ ದೇವರಾಜು ಅವರು ಸಿದ್ದರಾಮಯ್ಯ ಅವರ ಬಾಮೈದ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಅವರಿಗೆ 2004ರ ಆ.25ರಂದು ಮಾರಾಟ ಮಾಡಿದ್ದರು.
2010ರ ಅ.6ರಂದು ಮಲ್ಲಿಕಾರ್ಜುನಸ್ವಾಮಿ ಸೋದರಿ ಪಾರ್ವತಿ ಅವರಿಗೆ ದಾನವಾಗಿ ನೀಡಿದ್ದರು. ಮುಡಾ 2021ರ ಡಿ.12ರಂದು ಕೆಸರೆ ಜಮೀನಿಗೆ ಬದಲಾಗಿ 14 ನಿವೇಶನಗಳನ್ನು ಆಗಿನ ಮುಡಾ ಆಯುಕ್ತ ಡಿ.ಬಿ.ನಟೇಶ್ 50:50 ನಿಯಮದಡಿ ಹಂಚಿಕೆ ಮಾಡಿದ್ದರು.
ಮುಡಾ ಪ್ರಕರಣ ತೀವ್ರಗೊಂಡ ಕಾರಣ ಪಾರ್ವತಿ ಅವರು ಈ ನಿವೇಶನಗಳನ್ನು ಅ.1ರಂದು ಮುಡಾಕ್ಕೆ ವಾಪಸ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.