ADVERTISEMENT

ರಾಜೀನಾಮೆ ರಾಜಕಾರಣ | ಅವಧಿ ಪೂರ್ಣಗೊಳಿಸುವೆ: ಸಿದ್ದರಾಮಯ್ಯ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 23:31 IST
Last Updated 3 ಅಕ್ಟೋಬರ್ 2024, 23:31 IST
   

ಬೆಂಗಳೂರು/ಮೈಸೂರು: ‘ಮುಡಾ ನಿವೇಶನ ಹಂಚಿಕೆಯ ಹಗರಣದ ಆರೋಪ ಎದುರಿಸುತ್ತಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಪ್ರತಿಪಕ್ಷಗಳಾದ ಬಿಜೆಪಿ–ಜೆಡಿಎಸ್ ನಾಯಕರು ಪಟ್ಟು ಹಿಡಿದಿರುವ ಹೊತ್ತಿನೊಳಗೆ, ರಾಜೀನಾಮೆ ಅಗತ್ಯವೇ ಇಲ್ಲ ಎಂದು ವಿಪಕ್ಷ ಶಾಸಕರೇ ಧ್ವನಿ ಎತ್ತಿರುವುದು ರಾಜಕೀಯ ತಿರುವಿಗೆ ಕಾರಣವಾಗಿದೆ.

ಗುರುವಾರ ಮೈಸೂರಿನಲ್ಲಿ ದಸರಾ ಉದ್ಘಾಟಿಸಿದ ಸಾಹಿತಿ ಹಂ.ಪ. ನಾಗರಾಜಯ್ಯ ಅವರು, ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಆತಂಕಗಳ ಬಗ್ಗೆ ಪ್ರಾಸಂಗಿಕವಾಗಿ ಉಲ್ಲೇಖಿಸಿದರು. ಇದನ್ನೇ, ವಿಸ್ತರಿಸಿದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇ ಗೌಡರು, ‘ಎಫ್ಐಆರ್ ದಾಖಲಾಗಿರುವ ಎಲ್ಲರೂ ತಾಕತ್ತಿದ್ದರೆ ರಾಜೀನಾಮೆ ಕೊಡಲಿ’ ಎಂದು ಸವಾಲೆಸೆದರು.

ಅಷ್ಟಕ್ಕೇ ನಿಲ್ಲದೆ, ಸಿದ್ದರಾಮಯ್ಯನವರ ರಾಜೀನಾಮೆ ಕೇಳುತ್ತಿರುವವರ ವಿರುದ್ಧವೂ ಹರಿಹಾಯ್ದರು. ತಮ್ಮ ಪಕ್ಷದ ನಾಯಕ, ಎಚ್.ಡಿ. ಕುಮಾರಸ್ವಾಮಿ ಹೆಸರು ಉಲ್ಲೇಖಿಸದ ಅವರು, ‘ಕೇಂದ್ರದಿಂದ ಆಗಬೇಕಾದ ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದರು.

ADVERTISEMENT

ಸಾರ್ವಜನಿಕ ವೇದಿಕೆಯಲ್ಲಿಯೇ ತಮ್ಮ ಎದುರಾಳಿ ಬೆಂಬಲಕ್ಕೆ ನಿಂತಿದ್ದನ್ನು ಕಂಡು ಹುರುಪುಗೊಂಡ ಸಿದ್ದರಾಮಯ್ಯ, ‘ಜಿ.ಟಿ.ದೇವೇಗೌಡರು ಇಂದು ತಮ್ಮ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು, ತಾಯಿ ಚಾಮುಂಡೇಶ್ವರಿಯನ್ನು ಸಾಕ್ಷಿಯಾಗಿಟ್ಟುಕೊಂಡು ದಸರಾ ಹಬ್ಬದ ಬೃಹತ್ ಸಮಾರಂಭದಲ್ಲಿ ಸತ್ಯ ಮಾತನಾಡಿದ್ದಾರೆ. ಜನರ ಆಶೀರ್ವಾದದಿಂದ ನಾವು ಆಡಳಿತಕ್ಕೆ ಬಂದಿದ್ದೇವೆ. ಐದು ವರ್ಷ ರಾಜ್ಯದ ಜನರು ನಮಗೆ ಅವಕಾಶ ಕೊಟ್ಟಿದ್ದಾರೆ. ಎಷ್ಟೇ ತೊಡಕುಗಳು ಎದುರಾದರೂ ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷ ನಾವು ಆಡಳಿತ ಮಾಡಿಯೇ ತೀರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿ.ಟಿ. ದೇವೇಗೌಡರ ಹೇಳಿಕೆ ರಾಜಕೀಯ ಸಪ್ಪಳಕ್ಕೆ ಕಾರಣವಾಗಿದ್ದು, ಪರ–ವಿರೋಧದ ಹೇಳಿಕೆಗಳೂ ವ್ಯಕ್ತವಾಗಿವೆ. ಅವರ ಮಾತಿಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ರಾಜೀನಾಮೆ ಕೊಡಬೇಕೆಂದರೆ ಕೊಡೋಣ’ ಎಂದು ವ್ಯಂಗ್ಯವಾಗಿ ಹೇಳಿದ್ದಲ್ಲದೇ, ‘ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ’ ಎಂದೂ ಕುಟುಕಿದರು. 

‘ನಿವೇಶನ ಹಂಚಿಕೆಯಾದಾಗ ಬಿಜೆಪಿಯೇ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ ಏಕೆ ರಾಜೀನಾಮೆ ಕೊಡಬೇಕು’ ಎಂದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರು ಹೇಳಿದ್ದರು. ಈ ಸಾಲಿಗೆ ಜೆಡಿಎಸ್ ಶಾಸಕರೊಬ್ಬರೂ ಸೇರಿದಂತಾಗಿದೆ.

ಸಿದ್ದರಾಮಯ್ಯ ಹೇಳಿದ್ದೇನು?: 

ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಮೊದಲ ಬಾರಿಗೆ ಸಚಿವನಾಗಿ 40 ವರ್ಷವಾಯಿತು. ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಯಾವ ತಪ್ಪನ್ನೂ ಮಾಡಿಲ್ಲ. ಮಾಡಿದ್ದರೆ ರಾಜಕಾರಣದಲ್ಲಿ ಇಷ್ಟು ದೀರ್ಘ ಕಾಲ ನಿಲ್ಲಲು ಆಗುತ್ತಿರಲಿಲ್ಲ' ಎಂದು ಹೇಳಿದರು.

‘ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುವ ಪ್ರಜಾಪ್ರಭುತ್ವ ವಿರೋಧಿ ನಿಲುವು ಸರಿಯಲ್ಲವೆಂದು, ಬೇರೆ ಪಕ್ಷದಲ್ಲಿದ್ದರೂ, ದೇವೇಗೌಡರು ಸತ್ಯವನ್ನು ಹೇಳಿದ್ದಾರೆ. ‌ಮುಡಾ ಸದಸ್ಯರೂ ಆಗಿರುವ ಅವರ ಮಾತಿನಿಂದ ನನಗೆ ಬಲ ಬಂದಂತಾಗಿದೆ. ಸತ್ಯಕ್ಕೇ ಸದಾ ಜಯ’ ಎಂದರು. 

‘ರಾಜಕೀಯವಾಗಿ ನಾವು ಬೇರೆ ಬೇರೆ ಪಕ್ಷಗಳಲ್ಲಿ ಇರಬಹುದು. ಆದರೆ ಸತ್ಯ ಮತ್ತು ನ್ಯಾಯಕ್ಕೆ ಪಕ್ಷ ಇಲ್ಲ. ಅದು ವ್ಯಕ್ತಿಯ ಆತ್ಮಸಾಕ್ಷಿಗೆ ಸಂಬಂಧಿಸಿದ್ದಾಗಿದೆ’ ಎಂದು ಹೇಳಿದರು.

‘ನಾನೆಂದೂ ದ್ವೇಷದ ರಾಜಕೀಯ ಮಾಡಿದವನಲ್ಲ. ವಿರೋಧಿ ರಾಜಕಾರಣಿಗಳ ವೈಯಕ್ತಿಕ ಬದುಕು ಇಲ್ಲವೆ, ಅವರ ಕುಟುಂಬವನ್ನು ರಾಜಕೀಯ ಜಿದ್ದಾಜಿದ್ದಿಗೆ ಬಳಸಿಕೊಂಡವನಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿರುವ ಅನೇಕ ನಾಯಕರಿಗೆ ದೇವೇಗೌಡರು ಹೇಳಿರುವ ಸತ್ಯ ಗೊತ್ತಿದೆ. ಆದರೆ, ತಮ್ಮ ಪಕ್ಷದ ಕೆಲವು ಹಿರಿಯ ನಾಯಕರ ಒತ್ತಡಕ್ಕೆ ಬಲಿಯಾಗಿ ಮೌನವಾಗಿದ್ದಾರೆ. ಅವರು ಕೂಡಾ ಮುಕ್ತವಾಗಿ ಮಾತನಾಡಬೇಕಾದ ಕಾಲ ಸನ್ನಿಹಿತವಾಗಿದೆ’ ಎಂದರು.

‘ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕೇ ವಿನಾ ಸುಳ್ಳು ಆರೋಪಗಳ ಮೂಲಕ ಹೆಣೆಯುವ ಷಡ್ಯಂತ್ರದಿಂದ ಅಲ್ಲ. ಈ ಕೆಟ್ಟ ಪರಂಪರೆಯನ್ನು ತಡೆಗಟ್ಟಬೇಕಾದರೆ ನಮ್ಮ ರಾಜಕೀಯ ನಾಯಕರೆಲ್ಲರೂ ಪಕ್ಷಾತೀತವಾಗಿ ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವ ಧೈರ್ಯ ಮಾಡಬೇಕಾಗುತ್ತದೆ. ಈ ಮೂಲಕ ಕರ್ನಾಟಕದಿಂದ ಹೊಸ ರಾಜಕೀಯ ಪರಂಪರೆಗೆ ನಾಂದಿ ಹಾಡಬೇಕಾಗುತ್ತದೆ’ ಎಂದು ಪ್ರತಿಪಾದಿಸಿದರು.

ಸರ್ಕಾರ ಉರುಳಿಸುವ ದುರಾಲೋಚನೆ ಬೇಡ: ಹಂಪನಾ
ಮೈಸೂರು: ‘ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲಿ’ ಎಂದು ಹಂ.ಪ. ನಾಗರಾಜಯ್ಯ ಆಶಿಸಿದರು. ಈ ಮಾತನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಹಂ.ಪ. ನಾಗರಾಜಯ್ಯ ಅವರು ಮೌಲ್ಯಯುತ ಭಾಷಣ ಮಾಡಿದ್ದಾರೆ. ಚುನಾಯಿತ ಸರ್ಕಾರ ಗಳನ್ನು ವಾಮ ಮಾರ್ಗಗಳಲ್ಲಿ ಕಿತ್ತು ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.