ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆ ಕುತೂಹಲ ಮೂಡಿಸಿದೆ.
ದೆಹಲಿಗೆ ತೆರಳಿದ್ದ ರಾಜ್ಯಪಾಲರು ಸೋಮವಾರ ತಡರಾತ್ರಿ ರಾಜಭವನಕ್ಕೆ ಮರಳಿದ್ದಾರೆ. ಸಿ.ಎಂ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದ ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲರನ್ನು ಮಂಗಳವಾರ ಭೇಟಿ ಮಾಡಿ ಚರ್ಚಿಸಿದರು.
ರಾಜಭವನಕ್ಕೆ ತೆರಳಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ರಾಜ್ಯಪಾಲರ ಜತೆ ಒಂದು ಗಂಟೆ ಚರ್ಚಿಸಿದರು. ಜುಲೈ 31ರಂದು ಅಧಿಕಾರ ಸ್ವೀಕರಿಸಿದ್ದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಾಜ್ಯಪಾಲರನ್ನು ಭೇಟಿ ಆದರು.
ಸಿ.ಎಂ ವಿರುದ್ಧ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ಅನುಮತಿ ಕೋರಿ ಜುಲೈ 26ರಂದು ಅಬ್ರಹಾಂ ಅವರು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಮರುದಿನವೇ, ಮುಖ್ಯಮಂತ್ರಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದರು.
ಆಗಸ್ಟ್ 1ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಪರಿಷತ್ ಸಭೆ, ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ನೋಟಿಸ್ ಹಿಂದಕ್ಕೆ ಪಡೆಯಬೇಕು ಮತ್ತು ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ರಾಜ್ಯಪಾಲರಿಗೆ ಸಲಹೆ ನೀಡುವ ತೀರ್ಮಾನ ಕೈಗೊಂಡಿತ್ತು.
ಸಭೆಯ ಬಳಿಕ ಎಲ್ಲ ಸಚಿವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ‘ರಾಜ್ಯಪಾಲರು ನೀಡಿರುವ ನೋಟಿಸ್ ಕಾನೂನು ಮತ್ತು ಸಂವಿಧಾನ ಬಾಹಿರ. ರಾಜಭವನವನ್ನು ಬಳಸಿಕೊಂಡು ಬಹುಮತದ ಸರ್ಕಾರವನ್ನು ಅಸ್ಥಿರಗೊಳಿಸುವ ಮತ್ತು ಬುಡಮೇಲು ಮಾಡುವ ಪ್ರಯತ್ನ ನಡೆದಿದೆ. ಕೇಂದ್ರ ರಾಜ್ಯಪಾಲರನ್ನು ಕೈಗೊಂಬೆಯಾಗಿ ಬಳಸಿಕೊಳ್ಳುತ್ತಿದೆ’ ಎಂದು ಆರೋಪ ಮಾಡಿದ್ದರು.
ಇದೇ ಮಾತನ್ನು ಸಿದ್ದರಾಮಯ್ಯ ಮಾರನೇ ದಿನ ಪುನರುಚ್ಚರಿಸಿದ್ದರು. ಸರ್ಕಾರ ಉರುಳಿಸುವ ಸಂಚು ನಡೆಯುತ್ತಿದ್ದು, ಪ್ರಕರಣ ದಾಖಲಿಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ, ಹಿಂದುಳಿದ ಸಮುದಾಯದ ಸಂಘಟನೆಗಳು ರಾಜ್ಯದ ವಿವಿಧೆಡೆ ಪ್ರತಿಭಟನೆ, ಬಂದ್ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.