ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದ ನಿವೇಶನ ಅಕ್ರಮ ಹಂಚಿಕೆ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಬುಧವಾರ ಮಂಡಿಸಿದ ನಿಲುವಳಿ ಸೂಚನೆಯನ್ನು ಚರ್ಚೆಗೆ ತೆಗೆದುಕೊಳ್ಳಲು ಸಭಾಧ್ಯಕ್ಷ ಯು.ಟಿ. ಖಾದರ್ ನಿರಾಕರಿಸಿದರು. ಈ ವಿಚಾರ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು.
‘ಈ ನಿಲುವಳಿ ಸೂಚನೆಗೆ ಯಾವುದೇ ಆತುರ ಇಲ್ಲ. ಈ ಹಗರಣದ ಕುರಿತು ವಿಚಾರಣಾ ಆಯೋಗ ತನಿಖೆ ನಡೆಸುತ್ತಿದೆ. ಹೀಗಾಗಿ, ನಿಲುವಳಿ ಚರ್ಚೆಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ, ತಿರಸ್ಕರಿಸುತ್ತೇನೆ’ ಎಂದು ಖಾದರ್ ಪ್ರಕಟಿಸಿದರು.
ಬಿಜೆಪಿ ಸದಸ್ಯರ ಗದ್ದಲ ನಡುವೆಯೇ ಕಲಾಪವನ್ನು ಸಭಾಧ್ಯಕ್ಷರು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಬೆಳಿಗ್ಗೆ ಪ್ರಶ್ನೋತ್ತರ ಕಲಾಪಕ್ಕೂ ಮೊದಲೇ ನಿಲುವಳಿ ಮಂಡಿಸಲು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪಟ್ಟು ಹಿಡಿದರು. ಆದರೆ, ಪ್ರಶ್ನೋತ್ತರದ ಅವಧಿ ಮುಗಿಯದೆ ಈ ಬಗ್ಗೆ ತೀರ್ಮಾನಿಸುವುದಿಲ್ಲ ಎಂದು ಸಭಾಧ್ಯಕ್ಷರು ಹೇಳಿದರು.
‘ಪ್ರಶ್ನೋತ್ತರ ಕಲಾಪ ರದ್ದು ಮಾಡಿ ಈ ವಿಚಾರ ತೆಗೆದುಕೊಳ್ಳಿ’ ಎಂದು ಬಿಜೆಪಿಯ ವಿ. ಸುನೀಲ್ ಕುಮಾರ್ ಆಗ್ರಹಿಸಿದರು. ಆಗ ಸಭಧ್ಯಕ್ಷರು, ‘ಯಾಕೆ ಇಷ್ಟು ತುರ್ತು. ಇಷ್ಟು ದಿನ ಸುಮ್ಮನಿದ್ದೀರಿ. ಆಯೋಗದ (ಮುಡಾ ವಿಚಾರಣೆಗೆ ರಚಿಸಿದ ಆಯೋಗ) ಬಳಿ ಹೋಗಿ’ ಎಂದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುನೀಲ್ ಕುಮಾರ್, ‘ಪೀಠದಲ್ಲಿ ಕುಳಿತು ನೀವು ಈ ಮಾತು ಹೇಳುವುದು ಸರಿಯಲ್ಲ’ ಎಂದರು.
ಬಿಜೆಪಿಯ ಆರಗ ಜ್ಞಾನೇಂದ್ರ, ‘ನಗರಾಭಿವೃದ್ಧಿ ಸಚಿವರು ಮುಡಾ ಕಡತಗಳನ್ನು ಹೆಲಿಕಾಪ್ಟರ್‌ನಲ್ಲಿ ತುಂಬಿಕೊಂಡು ಬಂದಿದ್ದಾರೆ’ ಎಂದು ಆರೋಪಿಸಿದರು. ಬಸನಗೌಡ ಪಾಟೀಲ ಯತ್ನಾಳ್, ‘ಈ ಹಗರಣದಲ್ಲಿ ಎಲ್ಲರೂ ಪಾಲುದಾರರೆಂದು ಹೇಳುತ್ತಿದ್ದಾರೆ. ಎಲ್ಲರದ್ದೂ ಹೊರಗೆ ಬರಲಿ’ ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ‘ಇದು ಬಹಳ ಗಂಭೀರ ವಿಷಯ. ಮುಖ್ಯಮಂತ್ರಿ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ. ಈ ವಿಚಾರ ಚರ್ಚೆಗೆ ಅವಕಾಶ ಕೊಡದೇ ಇದ್ದರೆ ಹೇಗೆ’ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯ ಹೆಸರು ಹೇಳುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೆಲಹೊತ್ತು ಗದ್ದಲದ ವಾತಾವರಣ ಸೃಷ್ಟಿಯಾಯಿತು.
‘ಇವರು (ಬಿಜೆಪಿಯವರು) ಮಾಡಿರುವ ಅನಾಚಾರಗಳು ಸಾಕಷ್ಟು ಇವೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕಡತಗಳನ್ನು ಪ್ರದರ್ಶಿಸಿದರು. ‘ಸುಳ್ಳು ದಾಖಲೆ ನೀಡಿ ಎಕರೆಗಟ್ಟಲೆ ಜಾಗ ತೆಗೆದುಕೊಂಡಿದ್ದಾರೆ’ ಎಂದೂ ಆರೋಪಿಸಿದರು.
ಪ್ರಶ್ನೋತ್ತರ ಮುಗಿಯುತ್ತಿದ್ದಂತೆ ಮುಡಾ ಹಗರಣ ವಿಚಾರ ಪ್ರಸ್ತಾಪಿಸಲು ಅಶೋಕ ಮುಂದಾದರು. ಆಗ ಕಾನೂನು ಸಚಿವ ಎಚ್.ಕೆ. ಪಾಟೀಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
‘ವಿಧಾನಸಭೆ ಕಾರ್ಯವಿಧಾನ ನಡವಳಿಕೆಯ ಅನ್ವಯ, ನ್ಯಾಯಾಧಿಕರಣ, ಆಯೋಗ ಪ್ರಕರಣದ ವಿಚಾರಣೆ ನಡೆಸುವಾಗ ನಿಲುವಳಿ ಮಂಡಳಿಸಲು ಅವಕಾಶ ಇಲ್ಲ’ ಎಂದು ಪಾಟೀಲ ಹೇಳಿದರು.
ಆಗ ಕಾರ್ಮಿಕ ಸಚಿವ ಸಚಿವ ಸಂತೋಷ್ ಲಾಡ್, ‘ನಿವೇಶನ ಕೊಟ್ಟವರು ಬಿಜೆಪಿಗರು. ನಿವೇಶನ ಕೊಟ್ಟು ದುಡ್ಡು ತೆಗೆದುಕೊಂಡಿದ್ದೀರಾ’ ಎಂದು ಪ್ರಶ್ನಿಸಿದರು. ಅದಕ್ಕೆ ಅಶೋಕ, ‘ನಿವೇಶನ ಕೊಟ್ಟವರನ್ನು ಜೈಲಿಗೆ ಹಾಕಿ’ ಎಂದು ಸವಾಲು ಹಾಕಿದರು.
ಮಧ್ಯಪ್ರವೇಶಿಸಿದ ಬಿಜೆಪಿ ಎಸ್. ಸುರೇಶ್ ಕುಮಾರ್, ‘ಎಚ್.ಕೆ. ಪಾಟೀಲರು ಕೆಟ್ಟ ಪ್ರರಕಣವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ಸಮಾಜವೇ ಮುಡಾ ಪ್ರಕರಣವನ್ನು ಗಮನಿಸುತ್ತಿದೆ. ರಾಜ್ಯದ ಬಹಳ ಮುಖ್ಯವಾದ ವ್ಯಕ್ತಿಯ ಕಡೆಗೆ ಪ್ರಕರಣ ಇದೆ. ಚರ್ಚೆಗೆ ಅವಕಾಶ ಕೊಡುವುದಿಲ್ಲವೆಂದರೆ ಹೇಗೆ’ ಎಂದು ಪ್ರಶ್ನಿಸಿದರು.
‘ವಿಷಯದ ಗಂಭೀರತೆ ಮೇಲೆ ಮತ್ತು ತನಿಖೆಗೆ ಬಾಧಕ ಆಗದಂತೆ ಚರ್ಚಿಸಬಹುದು. ಹೀಗಾಗಿ ಚರ್ಚೆಗೆ ಅವಕಾಶ ಇಲ್ಲ ಅನ್ನುವುದು ಸರಿಯಲ್ಲ’ ಎಂದು ಸುರೇಶ್ ಕುಮಾರ್ ವಾದಿಸಿದರು.
ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.