ADVERTISEMENT

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್‌

ರಾಜ್ಯ ನಾಯಕರೊಂದಿಗೆ ‘ಕೈ’ ಉನ್ನತ ನಾಯಕರ ಸಭೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 23:55 IST
Last Updated 23 ಆಗಸ್ಟ್ 2024, 23:55 IST
ರಾಜ್ಯದ ಸಚಿವರು ಹಾಗೂ ನಾಯಕರ ಜತೆಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ
ರಾಜ್ಯದ ಸಚಿವರು ಹಾಗೂ ನಾಯಕರ ಜತೆಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ   

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ಸಚಿವರ ಜತೆಗೆ ಕಾಂಗ್ರೆಸ್‌ನ ಉನ್ನತ ನಾಯಕರು ಶುಕ್ರವಾರ ಸಮಾಲೋಚನೆ ನಡೆಸಿದರು. 

‘ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಷಡ್ಯಂತ್ರವನ್ನು ಕಾನೂನು ಹಾಗೂ ರಾಜಕೀಯ ಹೋರಾಟದ ಮೂಲಕವೇ ಎದುರಿಸಬೇಕು’ ಎಂದು ಹೈಕಮಾಂಡ್‌ನ ನಾಯಕರು ರಾಜ್ಯ ನಾಯಕರಿಗೆ ಸೂಚಿಸಿದರು. ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ‘ಈ ಪ್ರಕರಣದಲ್ಲಿ ನಾವು ಎಲ್ಲರೂ ಒಟ್ಟಿಗೆ ಇದ್ದೇವೆ. ನಾವೆಲ್ಲ ಮುಖ್ಯಮಂತ್ರಿ ಬೆನ್ನಿಗೆ ನಿಂತಿದ್ದೇವೆ’ ಎಂದು ಪ್ರಕಟಿಸಿದರು. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಹಿರಿಯ ನಾಯಕರು ತೆಲಂಗಾಣದ ಮುಖ್ಯಮಂತ್ರಿ ಹಾಗೂ ರಾಜ್ಯದ ನಾಯಕರೊಂದಿಗೆ ಸಭೆ ನಡೆಸಿದರು. ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜತೆಗೆ ಖರ್ಗೆ, ರಾಹುಲ್‌, ಸುರ್ಜೇವಾಲಾ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಸಮಾಲೋಚಿಸಿದರು. ನಂತರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಆ ಬಳಿಕ, ಕರ್ನಾಟಕದ ಹಿರಿಯ ಸಚಿವರನ್ನು ಕರೆಸಿಕೊಂಡ ಹೈಕಮಾಂಡ್‌ನ ನಾಯಕರು ರಾಜ್ಯದ ಈಗಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದರು. 

ADVERTISEMENT

ಸುರ್ಜೇವಾಲಾ ಮಾತನಾಡಿ, ‘ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಕೈಗೊಂಬೆ ರಾಜ್ಯಪಾಲರನ್ನು ಇಟ್ಟುಕೊಂಡು ರಾಜ್ಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಐದು ಗ್ಯಾರಂಟಿಗಳ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ. ಇದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮೇಲಿನ ದಾಳಿ ಅಲ್ಲ, ಇದು ರಾಜ್ಯದ ಜನರ ಮೇಲಿನ ದಾಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ರಾಜ್ಯಪಾಲರನ್ನು ಬಳಸಿಕೊಂಡು ಪ್ರಧಾನಿ ಹಾಗೂ ಗೃಹ ಸಚಿವರು ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ರಾಜ್ಯಪಾಲರು ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ಮೇಲಿನ ಪ್ರಕರಣಗಳ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿಲ್ಲ ಏಕೆ’ ಎಂದು ಪ್ರಶ್ನಿಸಿದರು. 

ಹೈಕಮಾಂಡ್ ರಾಜ್ಯ ಸರ್ಕಾರದ ಜೊತೆಗಿದೆ: ಶಿವಕುಮಾರ್

‘ನಾವು ನಿಮ್ಮ ಜೊತೆಗಿದ್ದೇವೆ ಧೈರ್ಯದಿಂದ ಹೋರಾಟ ಮಾಡಿ ಬಡವರ ಪರವಾಗಿ ಕಾರ್ಯಕ್ರಮ ರೂಪಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ನಾಯಕರು ನಮಗೆ ಅಭಯ ಕೊಟ್ಟಿದ್ದಾರೆ’ ಎಂದು ಶಿವಕುಮಾರ್ ಹೇಳಿದರು.

‘ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ಪರವಾಗಿ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ನಿಂತಿದೆ. ಕರ್ನಾಟಕದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಕಿರುಕುಳ ನೀಡುತ್ತಿರುವ ಬಗ್ಗೆ ನಮ್ಮ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರೂ ರಾಜ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ’ ಎಂದರು.

ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ಅಸಾಂವಿಧಾನಿಕ. ಇದು ರಾಜ್ಯಪಾಲರಿಗೇ ಮನದಟ್ಟು ಆಗಿ ಆದೇಶವನ್ನು ವಾಪಸ್ ಪಡೆಯುವ ಕಾಲ ಬರಲಿದೆ ಎಂದು ತಿಳಿಸಿದರು.

‘ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳುವಂತೆ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸುವುದು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದ ವಿರುದ್ಧ ಇಂಡಿಯಾ ಮೈತ್ರಿಕೂಟದಿಂದ ಹೋರಾಟ ನಡೆಸುವ ತಂತ್ರಗಾರಿಕೆಯನ್ನು ಮುಕ್ತವಾಗಿ ಇರಿಸಿಕೊಂಡಿದ್ದೇವೆ’ ಎಂದು ಸುರ್ಜೇವಾಲಾ ತಿಳಿಸಿದರು. ಇದನ್ನು ಸಂದರ್ಭ ಬಂದಾಗ ತಿಳಿಸುತ್ತೇವೆ ಎಂದರು. 

‘ಹೈಕಮಾಂಡ್‌ನ ನಾಯಕರಾದ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರಿಗೆ ಧನ್ಯವಾದ. ನಾವು ನ್ಯಾಯಾಲಯ ಹಾಗೂ ಕಾನೂನನ್ನು ನಂಬಿದ್ದೇವೆ. ರಾಜ್ಯಪಾಲರ ನಿರ್ಣಯವೇ ಸಂವಿಧಾನಬಾಹಿರ’ ಎಂದು ಸಿದ್ದರಾಮಯ್ಯ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.