ADVERTISEMENT

MUDA Scam | ರಾಜಭವನ ಜತೆ ಸರ್ಕಾರ ಸಂಘರ್ಷ

ಸಿ.ಎಂ ಸಿದ್ದರಾಮಯ್ಯಗೆ ನೀಡಿದ್ದ ಶೋಕಾಸ್‌ ನೋಟಿಸ್‌ ವಾಪಸ್‌ಗೆ ರಾಜ್ಯಪಾಲರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 0:30 IST
Last Updated 2 ಆಗಸ್ಟ್ 2024, 0:30 IST
<div class="paragraphs"><p>ಥಾವರಚಂದ್ ಗೆಹಲೋತ್,&nbsp;ಸಿದ್ದರಾಮಯ್ಯ</p></div>

ಥಾವರಚಂದ್ ಗೆಹಲೋತ್, ಸಿದ್ದರಾಮಯ್ಯ

   

ಬೆಂಗಳೂರು: ‘ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಯಾಕೆ ಅನುಮತಿ ನೀಡಬಾರದು’ ಎಂದು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಿರುವ ರಾಜ್ಯಪಾಲರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ‘ಮಂತ್ರಿ ಪರಿಷತ್ ಸಭೆ’, ರಾಜಭವನದ ಜೊತೆ ಸಂಘರ್ಷದ ಹಾದಿ ಹಿಡಿದಿದೆ.

‘ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆಯು ಸಂವಿಧಾನದ ಕಗ್ಗೊಲೆ ಮತ್ತು ಪ್ರಜಾತಂತ್ರದ ಸರ್ವನಾಶ’ ಎಂದೂ ಸಭೆ ಪ್ರತಿಪಾದಿಸಿತು.

ADVERTISEMENT

ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಬೆಳಿಗ್ಗೆ ಸುಮಾರು ಮೂರು ಗಂಟೆಗೂ ಹೆಚ್ಚು ಹೊತ್ತು ಮಂತ್ರಿ ಪರಿಷತ್‌ ಸಭೆ ನಡೆಯಿತು. ‘ಸಿದ್ದರಾಮಯ್ಯ ಅವರಿಗೆ ನೀಡಿರುವ ಶೋಕಾಸ್‌ ನೋಟಿಸ್‌ ಹಿಂದಕ್ಕೆ ಪಡೆಯಬೇಕು ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ರಾಜ್ಯಪಾಲರಿಗೆ ಸಲಹೆ ನೀಡಲು ಸಭೆ ನಿರ್ಧರಿಸಿತು.

ಈಗ ಲಭ್ಯವಿರುವ ವಾಸ್ತವಾಂಶ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಮಂತ್ರಿ ಪರಿಷತ್‌ ಸಭೆ ನೀಡಿರುವ ಸಲಹೆಯ ಪ್ರಕಾರವೇ ರಾಜ್ಯಪಾಲರು ನಡೆದುಕೊಳ್ಳಬೇಕು. ಸ್ವಂತ ವಿವೇಚನೆಯಿಂದ ನಡೆದುಕೊಳ್ಳಬಾರದು ಎಂದು ರಾಜಭವನಕ್ಕೆ ಸಂದೇಶ ರವಾನಿಸಲು ಸಭೆ ನಿರ್ಣಯ ಕೈಗೊಂಡಿತು. 

‘ನಿಮ್ಮ ವಿರುದ್ಧ ಆರೋಪಗಳು ಗಂಭೀರವಾದುದು ಮತ್ತು ಮೇಲ್ನೋಟಕ್ಕೆ ನಿಜ ಎಂಬುದು ಸಾಬೀತಾಗುತ್ತದೆ’ ಎಂದು ನೋಟಿಸ್‌ನಲ್ಲಿ ಹೇಳಿದ್ದೀರಿ. ನಾವು ನೀಡಿದ ಸ್ಪಷ್ಟನೆಯನ್ನು ನೋಡದೆಯೇ, ನೀವು ಈ ರೀತಿ ಉಲ್ಲೇಖಿಸಿರುವುದನ್ನು ಗಮನಿಸಿದರೆ ನೋಟಿಸ್‌ ನೀಡಬೇಕೆಂಬ ತೀರ್ಮಾನವನ್ನು ಮೊದಲೇ ಮಾಡಿದ್ದೀರಿ ಎಂದು ಮಂತ್ರಿ ಪರಿಷತ್‌ ಭಾವಿಸಬೇಕಾಗುತ್ತದೆ’ ಎಂದೂ ನಿರ್ಣಯದಲ್ಲಿ ಪ್ರಸ್ತಾವಿಸಲಾಗಿದೆ. 

ಸಭೆಯ ಬಳಿಕ, ಎಲ್ಲ ಸಚಿವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ‘ರಾಜ್ಯಪಾಲರು ನೀಡಿರುವ ನೋಟಿಸ್‌ ಸಂಪೂರ್ಣ ಕಾನೂನು ಮತ್ತು ಸಂವಿಧಾನ ಬಾಹಿರ. ಅಲ್ಲದೇ, ರಾಜಭವನವನ್ನು ಬಳಸಿಕೊಂಡು ಬಹುಮತವಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಮತ್ತು ಬುಡಮೇಲು ಮಾಡುವ ಪ್ರಯತ್ನ ನಡೆದಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಕೈಗೊಂಬೆಯಾಗಿ ಬಳಸಿಕೊಳ್ಳುತ್ತಿದೆ’ ಎಂದು ದೂರಿದರು.

‘ಈ ಪ್ರಕರಣದಲ್ಲಿ ಮುಖ್ಯಮಂತ್ರಿಯವರಿಂದ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಾಗಲಿ, ತನಿಖಾ ಸಂಸ್ಥೆಗಳ ವಿಚಾರಣೆಯಾಗಲಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯವರ ವಿಚಾರಣೆ ಹೇಗೆ ಸಾಧ್ಯ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುದೊಡ್ಡ ಬಹುಮತದೊಂದಿಗೆ ಆಯ್ಕೆಯಾದ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಕಿಡಿಕಾರಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 5ರಂದು ರಾಜ್ಯಪಾಲರು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದರು.

ಅಲ್ಲದೇ, ಜುಲೈ 15ರಂದು ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು, ‘ಮುಡಾದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ್ದು, ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಒಕ್ಕೂಟವು ಮನವಿ ಸಲ್ಲಿಸಿದ್ದು, ಆದಷ್ಟು ಬೇಗ ವರದಿ ನೀಡಬೇಕು’ ಎಂದು ಸೂಚಿಸಿದ್ದರು.

ರಾಜ್ಯಪಾಲರ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿಯವರು ಅವರನ್ನು ಗೌರವಿಸಬೇಕು ಎಂಬ ಆಶಯದಡಿಯೇ ನ್ಯಾಯಾಂಗ ತನಿಖೆಗೆ ಆದೇಶ ನೀಡಿದರು. ಆ ಬಳಿಕ, ಟಿ.ಜೆ.ಅಬ್ರಾಹಂ ಅವರು ಜುಲೈ 26ರಂದು ದೂರು ನೀಡಿದರು. ಅದೇ ದಿನ ಮುಖ್ಯ ಕಾರ್ಯದರ್ಶಿಯವರು ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ಆದರೆ, ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಯವರ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸುವ ಮುನ್ನವೇ ಶೋಕಾಸ್‌ ನೋಟಿಸ್‌ ನೀಡಿದ್ದಾರೆ ಎಂದರು.

‘ಇಷ್ಟು ತರಾತುರಿಯಲ್ಲಿ ಇಂತಹ ತೀರ್ಮಾನ ಮಾಡುತ್ತಿರುವುದೇಕೆ? ನಮ್ಮ ಅನುಭವದ ಪ್ರಕಾರ ಯಾವುದೇ ದೂರು ದಾಖಲಾದರೂ ತನಿಖೆಗೆ ಆದೇಶ ನೀಡುವ ಮುನ್ನ ಆರೋಪ ಸಾಬೀತುಪಡಿಸಲು ಪೂರಕ ಸಾಕ್ಷ್ಯಾಧಾರಗಳು ಬೇಕು. ಅಥವಾ ಯಾವುದಾದರೂ ತನಿಖಾ ಸಂಸ್ಥೆಗಳು ಅನುಮತಿಗೆ ಮನವಿ ನೀಡುತ್ತಾರೆ. ಆದರೆ, ಈ ಪ್ರಕರಣದಲ್ಲಿ ತನಿಖೆ ಮಾಡುವ ಮುನ್ನವೇ ಶೋಕಾಸ್‌ ನೋಟಿಸ್‌ ನೀಡಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಚಿವರಾದ ಕೃಷ್ಣಬೈರೇಗೌಡ, ಎಂ.ಬಿ.ಪಾಟೀಲ, ಜಿ.ಪರಮೇಶ್ವರ, ಎಚ್‌.ಕೆ.ಪಾಟೀಲ, ಕೆ.ಎಚ್‌. ಮುನಿಯಪ್ಪ, ಬೈರತಿ ಸುರೇಶ್‌ ಮಾತನಾಡಿದರು.

‘ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅನುಮತಿ ನೀಡಬಾರದೇಕೆ?’

ಬೆಂಗಳೂರು: ‘ಮುಡಾ ನಿವೇಶನ ಅಕ್ರಮ ಹಂಚಿಕೆಗೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ದಾಖಲಾಗಿರುವ ದೂರಿನ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅನುಮತಿ ಏಕೆ ನೀಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಶೋಕಾಸ್ ನೋಟಿಸ್‌ನಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಕೇಳಿದ್ದಾರೆ.

ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅನುಮತಿ ನೀಡಿ ಎಂದು ವಕೀಲ ಟಿ.ಜೆ.ಅಬ್ರಹಾಂ ಅವರು ಸಲ್ಲಿಸಿದ್ದ ಮನವಿಯ ಆಧಾರದಲ್ಲಿ ಸಿದ್ದರಾಮಯ್ಯ ಅವರಿಗೆ ಕಾರಣ ಕೇಳಿ ಇದೇ26 ರಂದು ರಾಜ್ಯಪಾಲ ನೋಟಿಸ್‌ ಜಾರಿ ಮಾಡಿದ್ದರು.

‘ಅಬ್ರಹಾಂ ಅವರ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ನಿಮ್ಮ ಮೇಲಿನ ಆರೋಪಗಳು ಗಂಭೀರ ಸ್ವರೂಪದವು ಮತ್ತು ಆ ಆರೋಪಗಳು ನಿಜ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಹೀಗಾಗಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಬಂದಿರುವ ಮನವಿಯ ಆಧಾರದಲ್ಲಿ ನೋಟಿಸ್‌ ನೀಡಲಾಗುತ್ತಿದೆ’ ಎಂದು ವಿವರಿಸಿದ್ದಾರೆ. ‘ಅನುಮತಿ ಏಕೆ ನೀಡಬಾರದು ಎಂಬುದಕ್ಕೆ ಏಳು ದಿನಗಳ ಒಳಗೆ ಉತ್ತರ ನೀಡಿ. ನಿಮ್ಮ ಉತ್ತರವನ್ನು ಪುಷ್ಟೀಕರಿಸುವ ದಾಖಲೆಗಳನ್ನು ಸಲ್ಲಿಸಿ’ ಎಂದು ರಾಜ್ಯಪಾಲ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

ಸಿ.ಎಂ ಪತ್ನಿ ಹಕ್ಕು ಕಳೆದುಕೊಳ್ಳಬೇಕಾ?: ಡಿ.ಕೆ.ಶಿವಕುಮಾರ್

‘ಮುಖ್ಯಮಂತ್ರಿಗಳ ಪತ್ನಿಯಾದ ಮಾತ್ರಕ್ಕೆ ಪಾರ್ವತಿ ಅವರು ತಮ್ಮ ಹಕ್ಕನ್ನು ಕಳೆದುಕೊಳ್ಳಬೇಕಾ? ತನ್ನ ಅಣ್ಣ ಕೊಟ್ಟ ಜಮೀನನ್ನು ಉಳಿಸಿಕೊಂಡು ತನ್ನ ಮಕ್ಕಳ ಭವಿಷ್ಯ ರಕ್ಷಣೆ ಮಾಡಿಕೊಳ್ಳುವುದು ತಪ್ಪಾ’ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಪಾರ್ವತಿ ಅವರು ಸಾಮಾನ್ಯ ಮಹಿಳೆ ಅಲ್ಲ, ಮುಖ್ಯಮಂತ್ರಿಯವರ ಪತ್ನಿ ಆಗಿದ್ದು, ಈ ಪ್ರಕರಣ ಸ್ವಜಪಕ್ಷಪಾತವಲ್ಲವೇ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.

‘ಸಿದ್ದರಾಮಯ್ಯ ಅವರು 40 ವರ್ಷಗಳ ರಾಜಕಾರಣ ಮಾಡಿದ್ದಾರೆ. ಮಂತ್ರಿ, ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಆರು ವರ್ಷ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಆದರೂ ಅವರ ಪತ್ನಿ ಎಂದಿಗೂ ಸಾರ್ವಜನಿಕವಾಗಿ ಗುರುತಿಸಿಕೊಂಡಿಲ್ಲ. ಅವರಿಗೆ ಅಧಿಕಾರ ಇದ್ದರೂ ಅದನ್ನು ಬಳಸಿಕೊಂಡಿಲ್ಲ. ನಾವು ಅವಕಾಶ ಸಿಕ್ಕಾಗ ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿದ್ದೇವೆ. ಆದರೆ, ಪಾರ್ವತಿ ಅವರು ಎಂದಿಗೂ ಅಧಿಕಾರ ಬಳಸಿಕೊಂಡವರಲ್ಲ. ಈ ವಿಚಾರವಾಗಿ ಅವರನ್ನು ಎಲ್ಲರೂ ಪ್ರಶಂಸಿಸಬೇಕು. ಅವರಿಗೆ ತಮ್ಮ ತವರಿನಿಂದ ಬಂದ ಆಸ್ತಿ ಉಳಿಸಿಕೊಳ್ಳುವ ಹಕ್ಕು ಇದೆ’ ಎಂದು ಶಿವಕುಮಾರ್ ಹೇಳಿದರು.

ಇದು ರಾಜಕೀಯ ಪಿತೂರಿ: ಕೃಷ್ಣ ಬೈರೇಗೌಡ

‘ಖಾಸಗಿ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ರಾಜ್ಯಪಾಲರು ನೋಟಿಸ್‌ ನೀಡಿರುವುದು ರಾಜಕೀಯ ಪಿತೂರಿ ಮಾತ್ರವಲ್ಲ, ಕಾನೂನಿಗೆ ವಿರುದ್ಧ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದರು.

‘ಅಬ್ರಹಾಂ ಅವರ 200 ಪುಟಗಳ ದೂರು ನೀಡಿದ್ದರು. ಅದನ್ನು ಓದದೇ ನೋಟಿಸ್‌ ನೀಡಿದ್ದಾರೆ. ಸರ್ಕಾರದ ಮುಖ್ಯಕಾರ್ಯದರ್ಶಿ ಬರೆದ ಪತ್ರವನ್ನೂ ಅವರು ಓದಿದಂತಿಲ್ಲ. ಹಿಂದಿನ ಸರ್ಕಾರ ಸಚಿವರಾಗಿದ್ದ ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ ಮತ್ತು ಹಾಲಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ದೂರುಗಳನ್ನು ರಾಜ್ಯಪಾಲರಿಗೆ ನೀಡಲಾಗಿದೆ. ಆದರೆ, ಈವರೆಗೂ ರಾಜ್ಯಪಾಲರು ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಹರಿಹಾಯ್ದರು.

‘ನಮ್ಮ ಸಲಹೆಗೆ ಮಾನ್ಯತೆ ನೀಡದೇ ಇದ್ದರೆ, ಈ ದೇಶದಲ್ಲಿ ಕಾನೂನು ಇದೆ, ಸುಪ್ರೀಂಕೋರ್ಟ್‌ ಇದೆ’ ಎಂದೂ ಹೇಳಿದರು.

ಮುಖ್ಯಮಂತ್ರಿ ಇಲ್ಲದೆಯೇ ಸಭೆ

ರಾಜ್ಯದ ಇತ್ತೀಚಿನ ವರ್ಷಗಳ ಇತಿಹಾಸದಲ್ಲಿ ಮುಖ್ಯಮಂತ್ರಿಯವರ ಅನುಪಸ್ಥಿತಿ
ಯಲ್ಲಿ ಮೊದಲ ಬಾರಿಗೆ ಮಂತ್ರಿ ಪರಿಷತ್‌ ಸಭೆ ನಡೆದಿದೆ.‌‌

ಮುಖ್ಯಮಂತ್ರಿ ವಿರುದ್ಧವೇ ಆರೋಪ ಎದುರಾಗಿದ್ದು, ಆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದ ಹಿನ್ನೆಲೆಯೊಳಗೆ ಸಿದ್ದರಾಮಯ್ಯ ಅವರು ಸಭೆಯಲ್ಲಿ ಪಾಲ್ಗೊಳ್ಳದೇ ಇರುವ ತೀರ್ಮಾನ ಮಾಡಿದ್ದರು. ಹೀಗಾಗಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ರಾಜ್ಯಪಾಲರು ಬಹಳ ಲೆಕ್ಕಾಚಾರದಿಂದ ಹೆಜ್ಜೆ ಇಡಬೇಕಾಗುತ್ತದೆ. ಏನೇ ಒತ್ತಡ ಇದ್ದರೂ ಅವರು ತಮ್ಮ ಸ್ಥಾನದ ಘನತೆ ಹಾಳಾಗದಂತೆ ಜವಾಬ್ದಾರಿ ನಿರ್ವಹಿಸಲಿದ್ದಾರೆ.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.