ನವದೆಹಲಿ: ಮುಡಾ ಹಗರಣದ ಕಾವು ತೀವ್ರಗೊಂಡು ದಿನಕ್ಕೊಂದು ತಿರುವು ಪಡೆಯುತ್ತಿರುವ ಹೊತ್ತಿನಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರುವಾರ ರಾತ್ರಿ ಭೇಟಿ ಮಾಡಿ ಸುದೀರ್ಘ ಹೊತ್ತು ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಬೆನ್ನಲ್ಲೇ ದಲಿತ ಮುಖ್ಯಮಂತ್ರಿ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಾನ ತ್ಯಜಿಸಲೇಬೇಕಾದ ಅನಿವಾರ್ಯ ಸನ್ನಿವೇಶ ಬಂದೊದಗಿದರೆ, ಆ ಸ್ಥಾನವನ್ನು ನೀವೇ ತುಂಬಬೇಕು ಎಂದು ಜಾರಕಿಹೊಳಿ ಅವರು ಖರ್ಗೆ ಅವರಿಗೆ ‘ಆಮಂತ್ರಣ’ ಕೊಟ್ಟರು. ‘ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್ ನಿಂತಿದೆ. ಈಗ ಈ ವಿಷಯ ಚರ್ಚೆ ಬೇಡ’ ಎಂದು ಖರ್ಗೆ ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಎಐಸಿಸಿ ಅಧ್ಯಕ್ಷನಾಗಿದ್ದು, ರಾಜ್ಯ ರಾಜಕಾರ ಣಕ್ಕೆ ಬಂದರೆ ಅಧಿಕಾರದಾಹಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ. 50 ವರ್ಷದಿಂದ ಕಾಪಿಟ್ಟುಕೊಂಡು ಬಂದಿದ್ದ ಮೌಲ್ಯಗಳನ್ನು ಬದಿಗೆ ಸರಿಸಿದಂತಾಗುತ್ತದೆ’ ಎಂದು ಖರ್ಗೆ ಅವರು ಜಾರಕಿಹೊಳಿ ಪ್ರಸ್ತಾವವನ್ನು ಖಡಾಖಂಡಿತವಾಗಿ ನಿರಾಕರಿಸಿದರು’ ಎಂದು ಮೂಲಗಳು ತಿಳಿಸಿವೆ.
‘ಕಾಂಗ್ರೆಸ್ ಸರ್ಕಾರ ಐದು ವರ್ಷ ಸುಭದ್ರ ವಾಗಿರಬೇಕಾದರೆ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕು ಎಂಬುದು ನಮ್ಮೆಲ್ಲರ ಆಶಯ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಆಕ್ರಮಣ ಕಾರಿಯಾಗಿ ವರ್ತಿಸುತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ಅನಿವಾರ್ಯವಾದರೆ ರಾಜ್ಯ ರಾಜಕಾರಣಕ್ಕೆ ನೀವು ಬರಬೇಕು. ಅದಕ್ಕೆ ಯಾರೂ ತಗಾದೆ ಎತ್ತುವುದಿಲ್ಲ. ಸರ್ಕಾರವೂ ಸುಭದ್ರವಾಗಿರುತ್ತದೆ’ ಎಂದು ಜಾರಕಿಹೊಳಿ ಅವರು ಖರ್ಗೆಯವರ ಮನವೊಲಿಸಲು ಯತ್ನಿಸಿದರು’ ಎಂದು ಮೂಲಗಳು ವಿವರಿಸಿವೆ.
‘1999, 2004 ಹಾಗೂ 2013ರಲ್ಲಿ ಸಿ.ಎಂ ಆಗುವ ಅವಕಾಶ ಕೂದಲೆಳೆಯ ಅಂತರದಲ್ಲಿ ತಪ್ಪಿ ಹೋಯಿತು. 2018ರಲ್ಲಿ ಎಚ್.ಡಿ.ಕುಮಾರ ಸ್ವಾಮಿಗೆ ಬೆಂಬಲಿಸಿದೆವು. ಈಗ ಕಾಂಗ್ರೆಸ್ ಅಧ್ಯಕ್ಷನಾ ಗಿದ್ದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡಲು ಸಾಧ್ಯವೇ? ನಾನು ಯಾವತ್ತೂ ಹುದ್ದೆಗೆ ಆಸೆಪಟ್ಟ ವನು ಅಲ್ಲ. ಆ ಜಾಯಮಾನವೂ ನನ್ನದಲ್ಲ’ಎಂದು ಖರ್ಗೆ ಸ್ಪಷ್ಟಪಡಿಸಿದರು ಎಂದು ಗೊತ್ತಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ಎತ್ತಿನಹೊಳೆ ಯೋಜನೆ ಅನುಷ್ಠಾನದ ನೆಪದಲ್ಲಿ ರಾಜಕೀಯ ಬೆಳವಣಿಗೆಗಳ ಕುರಿತು ಕಳೆದ ವಾರ ಚರ್ಚಿಸಿದ್ದರು. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ ಹಾಗೂ ಸತೀಶ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಗೋಪ್ಯ ಸಭೆ ನಡೆಸಿದ್ದರು.
‘ಸಿದ್ದರಾಮಯ್ಯ ಬೆಂಬಲಕ್ಕೆ ನಾವೆಲ್ಲ ನಿಲ್ಲೋಣ. ಒಂದು ವೇಳೆ ರಾಜೀನಾಮೆ ಸನ್ನಿವೇಶ ಸೃಷ್ಟಿಯಾದರೆ ಪರಿಶಿಷ್ಟ ಸಮುದಾಯದವರನ್ನೇ ಪರಿಗಣಿಸಲು ಹಕ್ಕೊತ್ತಾಯ ಮಂಡಿಸಬೇಕು. ಈ ವಿಷಯದಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು’ ಎಂದು ಸಚಿವರು ಒಮ್ಮತಕ್ಕೆ ಬಂದಿದ್ದರು.
ಈ ಬೆಳವಣಿಗೆಗಳ ಮಧ್ಯೆಯೇ, ದಿಢೀರನೇ ದೆಹಲಿಗೆ ಬಂದಿದ್ದ ಜಾರಕಿಹೊಳಿ, ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಪಕ್ಷದ ವಲಯದಲ್ಲಿ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
‘2028ರಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಆಗ ಸಮಯ, ಸನ್ನಿವೇಶ ನೋಡಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಹಕ್ಕು ಸ್ಥಾಪಿಸುತ್ತೇನೆ’ ಎಂದು ಜಾರಕಿಹೊಳಿ ಅವರು ಬಹಿರಂಗವಾಗಿ ಈಗಾಗಲೇ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಅವರ ಮಹತ್ವಾಕಾಂಕ್ಷೆಗೆ ಕಾಂಗ್ರೆಸ್‌ನಲ್ಲಿ ತಡೆಗೋಡೆ ಆಗಿರುವುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಒಂದು ವೇಳೆ ಸಿದ್ದರಾಮಯ್ಯ ಈಗ ಅಥವಾ ‘ಅಧಿಕಾರ ಹಂಚಿಕೆ ಸೂತ್ರ’ದ ಪ್ರಕಾರ ಎರಡೂವರೆ ವರ್ಷಗಳ ಬಳಿಕ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರೆ 2028ರಲ್ಲಿ ತಮ್ಮ ಕನಸು ಕೈಗೂಡುವುದು ಕಷ್ಟ ಎಂಬುದು ಜಾರಕಿಹೊಳಿಯವರ ಲೆಕ್ಕಾಚಾರ.
ಮುಡಾ ಹಗರಣ ಬಯಲಿಗೆ ಬಂದ ಬಳಿಕ ಸಿದ್ದರಾಮಯ್ಯ–ಶಿವಕುಮಾರ್ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತಿರುವುದು ಅವರ ಆತಂಕಕ್ಕೆ ಕಾರಣ ಎನ್ನಲಾಗಿದೆ.
‘ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರವಾಗಲೇಬೇಕು’ ಎಂದು ಸಂಘರ್ಷದ ಮಾತನಾಡುತ್ತಿದ್ದ ಹೇಳುತ್ತಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರೂ, ‘5 ವರ್ಷ ಸಿದ್ದರಾಮಯ್ಯ ಅವರೇ ಸಿ.ಎಂ ಆಗಿರಬೇಕು ಎಂಬುದೇ ನಮ್ಮ ಬಯಕೆ’ ಎಂದು ಹೇಳಲಾರಂಭಿಸಿದ್ದಾರೆ. ಈ ಬೆಳವಣಿಗೆ ನಂತರ ‘ದಲಿತ ಸಿ.ಎಂ’ ಬೇಡಿಕೆ ಮುಂದಿಟ್ಟುಕೊಂಡು ಜಾರಕಿಹೊಳಿ ಅವರ ‘ದೆಹಲಿ ಯಾನ’ ಹೆಚ್ಚಾಗಿದೆ. ಈ ಲೆಕ್ಕಾಚಾರದ ಕಾರಣಕ್ಕಾಗಿಯೇ ಖರ್ಗೆ ಅವರ ಮುಂದೆ ಜಾರಕಿಹೊಳಿ ದುಂಬಾಲು ಬಿದ್ದಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ಪಡಸಾಲೆಯಲ್ಲಿ ಜೋರಾಗಿದೆ.
ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆಯವರನ್ನು ಪಕ್ಷದಲ್ಲಿ ಸಚಿವರಾಗಿರುವ ಸತೀಶ ಜಾರಕಿಹೊಳಿಯವರು ಭೇಟಿಯಾಗುವುದು ತಪ್ಪೇನಲ್ಲ. ಇಲ್ಲ ಸಲ್ಲದ ಊಹಾಪೋಹಗಳಿಗೆ ಅವಕಾಶ ನೀಡಬಾರದು–ಸಿದ್ದರಾಮಯ್ಯ ಮುಖ್ಯಮಂತ್ರಿ
ಯಾರೇ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದರೂ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಮತ್ತು 136 ಜನ ಶಾಸಕರ ಇಚ್ಛೆ ಮೇರೆಗೆ ಮುಖ್ಯಮಂತ್ರಿ ಆಯ್ಕೆ ನಡೆಯುತ್ತದೆಲಕ್ಷ್ಮಿ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.