ADVERTISEMENT

ಮುಡಾ | ಮೃತರ ಹೆಸರಿನಲ್ಲಿ ಡಿನೋಟಿಫೈ ಸಾಧ್ಯವೇ: ಎಚ್‌ಡಿಕೆ ಪ್ರಶ್ನೆ

‘ರಾಜ್ಯದ ಜನರಿಗೆ ಸಿದ್ದರಾಮಯ್ಯ ಉತ್ತರಿಸಲಿ’

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:41 IST
Last Updated 13 ಜುಲೈ 2024, 15:41 IST
<div class="paragraphs"><p>ಮುಡಾ ಜಮೀನು ಭೂಸ್ವಾಧೀನ ಮತ್ತು ನಿವೇಶನ ಮಂಜೂರಾತಿಗೆ ಸಂಬಂಧಿಸಿದ ನಕ್ಷೆ ಮತ್ತು ದಾಖಲೆಗಳನ್ನು ಎಚ್‌.ಡಿ. ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು. ಮಾಜಿ ಶಾಸಕ ಬಂಡೆಪ್ಪ ಕಾಶೆಂಪೂರ ಉಪಸ್ಥಿತರಿದ್ದರು</p></div>

ಮುಡಾ ಜಮೀನು ಭೂಸ್ವಾಧೀನ ಮತ್ತು ನಿವೇಶನ ಮಂಜೂರಾತಿಗೆ ಸಂಬಂಧಿಸಿದ ನಕ್ಷೆ ಮತ್ತು ದಾಖಲೆಗಳನ್ನು ಎಚ್‌.ಡಿ. ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು. ಮಾಜಿ ಶಾಸಕ ಬಂಡೆಪ್ಪ ಕಾಶೆಂಪೂರ ಉಪಸ್ಥಿತರಿದ್ದರು

   

ಬೆಂಗಳೂರು: ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಮೈಸೂರು ನಗಾರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಜಮೀನನ್ನು ಸತ್ತವರ ಹೆಸರಿನಲ್ಲಿ ಡಿ–ನೋಟಿಫಿಕೇಷನ್‌ ಮಾಡಿ ಅಕ್ರಮ ಎಸಗಲಾಗಿದೆ ಎಂದು ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಜೆಡಿಎಸ್‌ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ವಿವಾದ ಕೇಂದ್ರವಾಗಿರುವ ಜಮೀನಿಗೆ ಸಂಬಂಧಿಸಿದಂತೆ ಆಸ್ತಿ ವರ್ಗಾವಣೆ ದಾಖಲೆಗಳನ್ನು ಪ್ರದರ್ಶಿಸಿದರು. 1998ರಿಂದ 2022ರವರೆಗೂ ಹಲವು ಅಕ್ರಮಗಳು ನಡೆದಿವೆ ಎಂದರು.

ADVERTISEMENT

‘ಬಾಮೈದ ಖರೀದಿಸಿ, ತನ್ನ ಸೋದರಿಗೆ ದಾನವಾಗಿ ನೀಡಿದ ಕೆಸರೆ ಬಳಿಯ ಜಮೀನಿಗೆ ಸಂಬಂಧಿಸಿದ ಆಸ್ತಿ ವರ್ಗಾವಣೆ, ಪರಿವರ್ತನೆ ಪ್ರಕ್ರಿಯೆಗಳೆಲ್ಲವೂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾಗಲೇ ನಡೆದಿದೆ. ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಆಪಾದಿಸಿದರು.

ಇದು ತಮ್ಮದು ಎಂದು ಸಿದ್ದರಾಮಯ್ಯ ಅವರು ಹೇಳಿಕೊಳ್ಳುತ್ತಿರುವ ಜಮೀನು ಅವರದ್ದು ಆಗಿರಲೇ ಇಲ್ಲ. ಆ ಜಮೀನಿಗೆ ಮುಡಾ ಹಣ ಪಾವತಿ ಮಾಡಿತ್ತು. ಆ ಜಮೀನಿನ ಪರಿವರ್ತನೆಗೆ ಅರ್ಜಿ ಸಲ್ಲಿಸಿದಾಗಲೂ, ಅಕ್ರಮ ನಡೆದಿದೆ. ಅಲ್ಲದೆ, ಪರಿಹಾರಾತ್ಮಕವಾಗಿ ಜಮೀನು ಪಡೆಯುವಾಗಲೂ ಅಕ್ರಮ ನಡೆದಿದೆ. ಈ ಎಲ್ಲದಕ್ಕೂ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಈಗ ಉಪ ಮುಖ್ಯಮಂತ್ರಿ ಆಗಿರುವವರು, ಬೆನ್ನಿಗಾನಹಳ್ಳಿಯಲ್ಲಿ ಸತ್ತವರ ಹೆಸರಿನಲ್ಲಿ ಡಿ–ನೋಟಿಫಿಕೇಷನ್‌ ಮಾಡಿಸಿಕೊಂಡಿದ್ದರು. ಹೀಗೇ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಆ ವ್ಯಕ್ತಿಯೇ ಸಲಹೆ ನೀಡಿರಬೇಕು ಎಂದು ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದೇ ಲೇವಡಿ ಮಾಡಿದರು.

ಕುಮಾರಸ್ವಾಮಿ ಎತ್ತಿದ ಪ್ರಶ್ನೆಗಳು
  • ನಿಂಗ ಉರುಫ್‌ ಜವರ ಹೆಸರಿನಲ್ಲಿದ್ದ 3 ಎಕರೆ 16ಗುಂಟೆ ಜಮೀನು 1992ರಲ್ಲೇ ದೇವರಾಜು ಎಂಬುವವರಿಗೆ ಪೌತಿ ಖಾತೆ ಮೂಲಕ ಕೆಸರೆ ಗ್ರಾಮದ ಜಮೀನಿನ ಮಾಲೀಕತ್ವದ ಬದಲಾವಣೆ ನಡೆದಿದೆ. 1992ರಲ್ಲಿ ಮುಡಾವು ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ವ್ಯಾಜ್ಯ ಇದ್ದ ಕಾರಣ 1997ರಲ್ಲಿ ಈ ಜಮೀನಿನ ಪರಿಹಾರದ ಬಾಬ್ತು ₹3.24 ಲಕ್ಷವನ್ನು ನ್ಯಾಯಾಲಯದಲ್ಲಿ ಮುಡಾ ಠೇವಣಿ ಇರಿಸಿತ್ತು. ಹಣ ಪಾವತಿ ಆಗಿದ್ದರಿಂದ ಇದು ಮುಡಾಗೆ ಸೇರಿತ್ತು. ಅದನ್ನು ಖಾಸಗಿ ವ್ಯಕ್ತಿಗಳಿಂದ ಖರೀದಿಸಿದ್ದು ಹೇಗೆ?

  • 1998ರಲ್ಲಿ ಈ ಜಮೀನನ್ನು ಡಿ–ನೋಟಿಫಿಕೇಷನ್‌ ಮಾಡಲಾಯಿತು. ಆಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ಡಿ–ನೋಟಿಫಿಕೇಷನ್‌ ಮಾಡುವಾಗ ನಿಂಗ ಅಲಿಯಾಸ್‌ ಜವರ ಎಂಬುವವರ ಹೆಸರಿಗೆ ಮಾಡಲಾಗಿದೆ. ಅವರು ಆಗಲೇ ಮೃತಪಟ್ಟಿದ್ದರು. ಸತ್ತವರ ಹೆಸರಿಗೆ ಡಿ–ನೋಟಿಫಿಕೇಷನ್‌ ಹೇಗೆ ಮಾಡಲು ಸಾಧ್ಯ? ಈಗಾಗಲೇ ಪೌತಿ ಖಾತೆ ನೀಡಲಾಗಿದ್ದರೂ ಹಿಂದೆ ಇದ್ದ ಹೆಸರಿಗೇ ಡಿ–ನೋಟಿಫಿಕೇಷನ್‌ ಮಾಡಿದ್ದು ಏಕೆ?

  • 2004ರ ಮೇನಲ್ಲಿ ದೇವರಾಜು ಹೆಸರಿಗೆ ಮತ್ತೆ ಪೌತಿ ಖಾತೆ ಬದಲಾವಣೆ 2004ರ ಅಕ್ಟೋಬರ್‌ನಲ್ಲಿ ಖರೀದಿ ಮೂಲಕ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಖಾತೆ ಬದಲಾವಣೆ ಆಗಿದೆ. 2005ರಲ್ಲಿ ಕೃಷಿ ಬಳಕೆಯಿಂದ ವಸತಿ ಬಳಕೆಗೆ ಭೂಪರಿವರ್ತನೆ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಲಾಗಿದೆ. ಆಗಲೂ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಆಗ ಸ್ಥಳ ಪರಿಶೀಲನೆ ನಡೆಸದೆಯೇ ಮತ್ತು ಜಮೀನು ಯಾರ ಹೆಸರಿನಲ್ಲಿ ಇದೆ ಎಂಬುದನ್ನೂ ಪರಿಶೀಲಸದೇ ಪರಿವರ್ತನೆ ಮಾಡಿದ್ದು ಏಕೆ?

  • 2010ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ತನ್ನ ಸೋದರಿ ಪಾರ್ವತಿ (ಸಿದ್ದರಾಮಯ್ಯ ಅವರ ಪತ್ನಿ) ಅವರಿಗೆ ಈ ಜಮೀನನ್ನು ದಾನ ನೀಡಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಇದು ಕೃಷಿ ಜಮೀನು ಎಂದು ತೋರಿಸಿದ್ದಾರೆ. ವಸತಿ ಜಮೀನನ್ನು ಕೃಷಿ ಜಮೀನು ಎಂದು ತೋರಿಸಿದ್ದು ಸುಳ್ಳಲ್ಲವೇ?

  • ತಮ್ಮ ಜಮೀನನ್ನು ಅತಿಕ್ರಮಣ ಮಾಡಿಕೊಂಡು ಬಡಾವಣೆ ನಿರ್ಮಿಸಿದ್ದೀರಿ ಪರಿಹಾರ ಕೊಡಿ ಎಂದು ಪಾರ್ವತಿ 2014ರಲ್ಲಿ ಅವರು ಅರ್ಜಿ ಸಲ್ಲಿಸಿದ್ದಾರೆ. 2017ರಲ್ಲಿ 50:50ರ ಅನುಪಾತದಲ್ಲಿ ಪರಿಹಾರ ನಿಯಮವನ್ನು ಬದಲಾವಣೆ ಮಾಡಲಾಗಿದೆ. ಆ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಇದು ಅಧಿಕಾರ ದುರುಪಯೋಗ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.