ADVERTISEMENT

ಮುಡಾ ಪ್ರಕರಣ: ಮರೀಗೌಡಗೆ ಇ.ಡಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 15:27 IST
Last Updated 14 ನವೆಂಬರ್ 2024, 15:27 IST
ಕೆ.ಮರೀಗೌಡ
ಕೆ.ಮರೀಗೌಡ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ಆರು ಗಂಟೆ ವಿಚಾರಣೆ ನಡೆಸಿದೆ.

ಮುಖ್ಯಮಂತ್ರಿಯ ಆಪ್ತರೂ ಆಗಿರುವ ಮರೀಗೌಡ ಮತ್ತು ಇನ್ನೂ ಆರು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್‌ ನೀಡಿತ್ತು. ನಗರದ ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಮರೀಗೌಡ ಅವರು ಗುರುವಾರ ಬಂದು ವಿಚಾರಣೆಗೆ ಹಾಜರಾಗಿದ್ದಾರೆ. ಸಮನ್ಸ್‌ ಪಡೆದಿದ್ದ ಇನ್ನೂ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಇ.ಡಿ ಮೂಲಗಳು ಹೇಳಿವೆ.

ಮರೀಗೌಡ ಅವರು ಮುಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 50:50 ಅನುಪಾತದಲ್ಲಿ ಹಂಚಿಕೆಯಾದ ಪರಿಹಾರಾತ್ಮಕ ನಿವೇಶನಗಳ ಬಗ್ಗೆ ಅವರಿಂದ ವಿವರಣೆ ಕೇಳಲಾಗಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಿದ್ದರ ಸಂಬಂಧ ಅವರನ್ನು ಪ್ರಶ್ನಿಸಲಾಗಿದೆ. ಕೆಲವು ಪ್ರಮುಖ ಮಾಹಿತಿಗಳನ್ನು ಅವರು ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ADVERTISEMENT

ಗುರುವಾರ ವಿಚಾರಣೆಗೆ ಹಾಜರಾಗಿದ್ದವರಲ್ಲಿ ಮರೀಗೌಡ ಅವರ ಆಪ್ತರೂ ಇದ್ದರು. ಅವರನ್ನು ಪ್ರತ್ಯೇಕವಾಗಿ ಪ್ರಶ್ನಿಸಿಲಾಗಿದೆ. ವಿಚಾರಣೆ ವೇಳೆ ಎದೆನೋವು ಎಂದು ಅವರು ಹೇಳಿದರು. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಅಪಾಯ ಇಲ್ಲ ಎಂದು ಮೂಲಗಳು ವಿವರಿಸಿವೆ. ರಾತ್ರಿಯೂ ವಿಚಾರಣೆ ಮುಂದುವರೆದಿತ್ತು.

ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಪ್ರಕರಣದ ಸಂಬಂಧ ರಾಜಕೀಯ ಜಟಾಪಟಿ ಜೋರಾಗಿತ್ತು. ಅದರ ಬೆನ್ನಲ್ಲೇ ಅಕ್ಟೋಬರ್‌ನಲ್ಲಿ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.