ADVERTISEMENT

Muda Scam: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 16:11 IST
Last Updated 24 ಸೆಪ್ಟೆಂಬರ್ 2024, 16:11 IST
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ   

ನವದೆಹಲಿ: ಮುಡಾ ಹಗರಣದಲ್ಲಿ ರಿಟ್ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಲು ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನಿಸಿದೆ. ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ’ ಎಂದು ಪಕ್ಷದ ರಾಷ್ಟ್ರೀಯ ನಾಯಕರು ಪುನರುಚ್ಚರಿಸಿದ್ದಾರೆ. 

‘ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಮತ್ತು ಹಿಂದುಳಿದ ವರ್ಗದಿಂದ ಬಂದ ಮುಖ್ಯಮಂತ್ರಿಯನ್ನು ಪದಚ್ಯುತಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ವಿರುದ್ಧ ನಿರಂತರ ಪಿತೂರಿ ನಡೆಯುತ್ತಿದೆ. ಕರ್ನಾಟಕದಲ್ಲಿ ‘ಗ್ಯಾರಂಟಿ’ ಯೋಜನೆಗಳು ಜಾರಿಗೆ ಬಂದ ನಂತರ ಸಿದ್ದರಾಮಯ್ಯ ಜನಪ್ರಿಯತೆ ಹೆಚ್ಚಿದೆ. ಇದು ಬಿಜೆಪಿಯ ಭೀತಿಗೆ ಕಾರಣವಾಗಿದೆ. ಈ ಕಾರಣಕ್ಕೆ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರ ಷಡ್ಯಂತ್ರಗಳನ್ನು ನಡೆಸುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ಹೈಕಮಾಂಡ್‌ ಮೂಲಗಳು ತಿಳಿಸಿವೆ. 

‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತರು ಪ್ರಸ್ತಾವ ಸಲ್ಲಿಸಿ ವರ್ಷಗಳೇ ಕಳೆದಿವೆ. ಆದರೆ, ರಾಜ್ಯಪಾಲರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದು ರಾಜ್ಯಪಾಲರ ಪಕ್ಷಪಾತದ ನಿಲುವಿಗೆ ಪುರಾವೆ’ ಎಂದು ನಾಯಕರೊಬ್ಬರು ಹೇಳಿದರು. 

ADVERTISEMENT

‘ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಹಗರಣದಲ್ಲಿ ಇ.ಡಿ. ಅಧಿಕಾರಿಗಳು ಬಂಧಿಸಿದರು. ಆದರೆ, ಕೇಜ್ರಿವಾಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ. ಮುಖ್ಯಮಂತ್ರಿಗೆ ರಾಜೀನಾಮೆ ನೀಡಲು ಸೂಚಿಸುವ ಮೂಲಕ ಬಿಜೆಪಿ ಖೆಡ್ಡಾಕ್ಕೆ ಬೀಳಲು ನಾವು ಸಿದ್ಧರಿಲ್ಲ’ ಎಂದು ಅವರು ತಿಳಿಸಿದರು. 

‘ಹರಿಯಾಣ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿವೆ. ಮಹಾರಾಷ್ಟ್ರ, ಜಾರ್ಖಂಡ್‌ ಹಾಗೂ ದೆಹಲಿ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇಂತಹ ಸಮಯದಲ್ಲಿ ರಾಜೀನಾಮೆ ಪಡೆದರೆ ತಪ್ಪು ಸಂದೇಶ ರವಾನೆಯಾಗಲಿದೆ. ಬಿಜೆಪಿಗೆ ಚುನಾವಣಾ ಅಸ್ತ್ರ ನೀಡಿದಂತಾಗುತ್ತದೆ’ ಎಂದು ಅವರು ವ್ಯಾಖ್ಯಾನಿಸಿದರು. 

‘ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳಿಂದ ಕಾಂಗ್ರೆಸ್‌ ಸರ್ಕಾರಕ್ಕೆ ಹಾಗೂ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಕಳಂಕ ತಟ್ಟಿರುವುದು ನಿಜ’ ಎಂದು ಅವರು ಒಪ್ಪಿಕೊಂಡರು. 

‘ವಿನಮ್ರ ಹಿನ್ನೆಲೆ ಹಾಗೂ ಸರಳ ವ್ಯಕ್ತಿತ್ವದ ನಾಯಕನ ಜನಪರ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌, ‘ರಾಜ್ಯ ಸರ್ಕಾರ ಸದೃಢವಾಗಿದೆ. ನಮ್ಮ ಸರ್ಕಾರ ಜನರ ಮಾತು ಕೇಳುತ್ತದೆಯೇ ಹೊರತು ದೆಹಲಿಯ ದಬ್ಬಾಳಿಕೆಯ ನುಡಿಗಳನ್ನಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.