ಬೆಳಗಾವಿ: ‘ಕಾಂಗ್ರೆಸ್ ಹೈ ಕಮಾಂಡ್ ಹಾಗೂ ರಾಜ್ಯದ ಎಲ್ಲ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಇದ್ದೇವೆ. ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಕಾನೂನು ಹೋರಾಟ ಮಾಡುತ್ತೇವೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂಬ ಬಿಜೆಪಿ ಹೋರಾಟಕ್ಕೆ ಅರ್ಥವಿಲ್ಲ. ಹೈಕೋರ್ಟ್ ತನಿಖೆಗೆ ಆದೇಶ ನೀಡಿದೆ ಅಷ್ಟೇ. ತನಿಖೆಯಾಗಲಿ. ತಪ್ಪು ಕಂಡುಬಂದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ’ ಎಂದು ಅವರು ನಗರದಲ್ಲಿ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
‘ಮುಡಾ ಪ್ರಕರಣ ತನಿಖೆ ಸಮಗ್ರವಾಗಿ ಆಗಲಿ. ಅಲ್ಲಿಯವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ. ಎಲ್ಲ ಶಾಸಕರದ್ದು, ಹೈಕಮಾಂಡ್‌ನದ್ದು ಕೂಡ ಇದೇ ಆಗ್ರಹವಾಗಿದೆ ಎಂದರು. ಹಾಗಾಗಿ, ಯಾರೂ ಈಗ ಮುಖ್ಯಮಂತ್ರಿ ರೇಸ್‌ನಲ್ಲಿ ಇಲ್ಲ. ಅದರ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಹೈಕೋರ್ಟ್ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠ ಅಥವಾ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದರು.
‘ರಾಜ್ಯಪಾಲರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಈ ಹಿಂದಿನ ಯಾವುದೇ ರಾಜ್ಯಪಾಲರು ಈ ರೀತಿ ಸರ್ಕಾರದ ವಿರುದ್ಧ ಧೋರಣೆ ಹೊಂದಿರಲಿಲ್ಲ. ಕೇಂದ್ರ ಸರ್ಕಾರ ತನ್ನ ಏಜೆನ್ಸಿಗಳ ಮೂಲಕ, ರಾಜ್ಯಪಾಲರುಗಳ ಮೂಲಕ ಕಾಂಗ್ರೆಸ್ ಶಕ್ತಿ ಕುಂದಿಸುವ ಹುನ್ನಾರ ಮುಂದುವರಿಸಿದೆ’ ಎಂದೂ ಆರೋಪಿಸಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರವೇ ಬೇರೆ, ಸಿದ್ದರಾಮಯ್ಯ ಪ್ರಕರಣವೇ ಬೇರೆ. ಅಲ್ಲಿ ಹಣ ವರ್ಗಾವಣೆ ನೇರವಾಗಿ ಆಗಿದ್ದರಿಂದ ಸಚಿವರ ರಾಜೀನಾಮೆ ಪಡೆಯಲಾಗಿದೆ. ಆದರೆ, ಸಿ.ಎಂ ವಿಚಾರದಲ್ಲಿ ಅಂಥ ಆರೋಪಗಳು ಇಲ್ಲ’ ಎಂದು ಅವರು ಉತ್ತರಿಸಿದರು.
ಶಾಸಕ ಆಸಿಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.
***
‘ಬಾಹುಬಲಿ’ ಮಾತು ಕೇಳಿದವರಿಗೇ ದಂಡ’
‘ಬೆಳಗಾವಿ ನಗರದಲ್ಲಿ ಭೂ ಸ್ವಾಧೀನಕ್ಕೂ ಮುನ್ನ ರಸ್ತೆ ಕಾಮಗಾರಿ ಮಾಡಿ ಅದ್ವಾನ ಮಾಡಿದವರೇ ದಂಡ ಭರಿಸಬೇಕಾಗುತ್ತದೆ. ಹೈಕೋರ್ಟ್ ಆದೇಶದಂತೆ ಜಾಗ ಮರಳಿ ಮಾಲೀಕರಿಗೆ ಕೊಡಲಾಗಿದೆ. ಆದರೆ, ಕಾಮಗಾರಿಗೆ ಮಾಡಿದ ವೆಚ್ಚ, ದಂಡ ಎಲ್ಲದಕ್ಕೂ ಆಯಾ ಅಧಿಕಾರಿಗಳೇ ಜವಾಬ್ದಾರಿ’ ಎಂದು ಸಚಿವ ಸತೀಶ ಜಾರಕಿಹೊಳಿ ಎಚ್ಚರಿಸಿದರು.
‘ಅವನೊಬ್ಬ ಇದ್ದಾನಲ್ಲ ‘ಬಾಹುಬಲಿ’. ಅವನ ಮಾತು ಕೇಳಿ ಆಗಿನ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಅವನು ಪಾರಾಗುತ್ತಾನೆ. ಅವನ ಮೇಲೆ ಏನೂ ಆರೋಪ ಬರುವುದಿಲ್ಲ. ಮಾತು ಕೇಳಿ ಹಾಳಾದವರು ಈಗ ಅನುಭವಿಸಬೇಕು’ ಎಂದು ಅವರು ಪರೋಕ್ಷವಾಗಿ ಶಾಸಕ ಅಭಯ ಪಾಟೀಲಗೆ ಟಾಂಗ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.