ADVERTISEMENT

ಮುಡಾ ಹಗರಣ | ಸಿಎಂ ಅರ್ಜಿ ವಜಾ: ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2024, 7:35 IST
Last Updated 24 ಸೆಪ್ಟೆಂಬರ್ 2024, 7:35 IST
<div class="paragraphs"><p>ಬಿಜೆಪಿ ಧ್ವಜ</p></div>

ಬಿಜೆಪಿ ಧ್ವಜ

   

ಬೆಂಗಳೂರು: ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ತನಿಖೆಗೆ ತಮ್ಮ ವಿರುದ್ಧ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಇಂದು (ಮಂಗಳವಾರ) ವಜಾಗೊಳಿಸಿದೆ.

ಈ ಸಂಬಂಧ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಬಿಜೆಪಿ, 'ಸತ್ಯಕ್ಕೆ ಜಯ ಸಂದಿದೆ' ಎಂದು ಬಣ್ಣಿಸಿದೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿದೆ.

ADVERTISEMENT

ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, 'ಬಡವರ ನಿವೇಶನ ಕಬಳಿಸಿ, ಲಜ್ಜೆ ಬಿಟ್ಟು ಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಿರುವ ಸಿದ್ದರಾಮಯ್ಯನವರೇ ಒಂದು ಕ್ಷಣವೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ರಾಜೀನಾಮೆ ನೀಡಿ, ತನಿಖೆ ಎದುರಿಸಿ' ಎಂದು ಸವಾಲು ಹಾಕಿದೆ.

'ನೀವು ಕಟ್ಟಿರುವ ಸುಳ್ಳಿನ ಸಾಮ್ರಾಜ್ಯ ಸಂಪೂರ್ಣ ಕುಸಿದಿದೆ ಇನ್ನು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ' ಎಂದು ಹೇಳಿದೆ.

'ದಲಿತರ ಭೂಮಿಯನ್ನು ಅಕ್ರಮವಾಗಿ ಕಬಳಿಸಿ, ಬಡವರ ಪಾಲಿಗೆ ಸೇರಬೇಕಾಗಿದ್ದ ಸೈಟುಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ವಿರುದ್ಧ ತನಿಖೆಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿರುವುದು ಸ್ವಾಗತಾರ್ಹ' ಎಂದಿದೆ.

'ತಮ್ಮ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಘನತೆವೆತ್ತ ರಾಜ್ಯಪಾಲರ ಮೇಲೆ ಕೀಳುಮಟ್ಟದ ರಾಜಕೀಯಕ್ಕೆ ಕಾಂಗ್ರೆಸ್‌ನ ನಾಯಕರು ಮುಂದಾಗಿದ್ದರು. ಆದರೆ ನ್ಯಾಯಾಲಯ ರಾಜ್ಯಪಾಲರ ನಡೆಯನ್ನು ಎತ್ತಿ ಹಿಡಿದು, ಭ್ರಷ್ಟರಿಗೆ ಭಾರತದಲ್ಲಿ ಜಾಗವಿಲ್ಲ ಎಂಬುದನ್ನು ಪುನರುಚ್ಚರಿಸಿದೆ. ಸಿದ್ದರಾಮಯ್ಯ ಅವರಿಗೆ ಈ ನೆಲದ ಕಾನೂನಿನ ಬಗ್ಗೆ, ಸಂವಿಧಾನದ ಬಗ್ಗೆ , ನ್ಯಾಯಾಲಯದ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ, ಭಂಡತನವನ್ನು ಮುಂದುವರಿಸದೆ, ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.