ADVERTISEMENT

ನಾನು ಹಿಟ್‌ ಅಂಡ್‌ ರನ್ ಆದ್ರೆ ಸಿದ್ದರಾಮಯ್ಯ ಅವರೇನು U-ಟರ್ನಾ: ಎಚ್‌ಡಿಕೆ ಲೇವಡಿ

ವಸತಿ ಶಾಲೆ ಜಾಗ ಡಿನೋಟಿಫೈ ಮಾಡಿಸಿದ್ದ ಸಿಎಂ: HDK ಆರೋಪ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 10:45 IST
Last Updated 1 ಅಕ್ಟೋಬರ್ 2024, 10:45 IST
<div class="paragraphs"><p>ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ </p></div>

ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ

   

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ 14 ನಿವೇಶನಗಳನ್ನು ವಾಪಸ್ ಕೊಡುವ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ‘ಇದು ಹೇಗಿದೆ ಎಂದರೆ, 'ಕಳ್ಳತನ ಮಾಡಿ ಆಮೇಲೆ ತಪ್ಪಾಯಿತು' ಎಂದು ಹೇಳಿದ ಹಾಗಿದೆ’ ಎಂದು ಲೇವಡಿ ಮಾಡಿದರು.

ನವದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು; ‘ಸಿದ್ದರಾಮಯ್ಯ ಅವರ ಪತ್ನಿ ನನಗೂ ಸಹೋದರಿ ಸಮಾನ. ಅವರ ಬಗ್ಗೆ ಗೌರವ ಇಟ್ಟಿಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ’ ಎಂದರು.

ADVERTISEMENT

ಸಿದ್ದರಾಮಯ್ಯ ನನ್ನ ಬಗ್ಗೆ ಯಾವಾಗಲೂ ಹಿಟ್ ಅಂಡ್ ರನ್ ಎಂದು ಹೇಳಿದ್ದಾರೆ. ಹಾಗಾದರೆ ಇವರೇನು? ಯೂಟರ್ನಾ? ಎಂದು ಅವರು ಪ್ರಶ್ನಿಸಿದರು.

‘ಸೋಮವಾರ ರಾತ್ರಿ ಏಕಾಏಕಿ ಪತ್ರ ಬರೆದು ನಿವೇಶನಗಳು ಬೇಡ, ವಾಪಸ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಮನೆ, ಚಿನ್ನ, ಒಡವೆ ಯಾವುದರ ಮೇಲೆಯೂ ಮಮತೆ ಇಲ್ಲ. ನನ್ನ ಪತಿಯ ಮುಂದೆ ಅದೆಲ್ಲ ತೃಣಕ್ಕೆ ಸಮಾನ ಎಂದು ಹೇಳಿಕೊಂಡಿದ್ದಾರೆ. ನಾನು ಆ ಹೆಣ್ಣು ಮಗಳ ಬಗ್ಗೆ ಮಾತನಾಡಲ್ಲ, ಆದರೆ ಅದೇನೋ‌ ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿದ್ದಾರಂತೆ ಸಿದ್ದರಾಮಯ್ಯನವರು. ಆ ಹೆಣ್ಣು ಮಗಳು ತಮ್ಮ ಪತಿಯ ಗಮನಕ್ಕೆ ಇಲ್ಲದಂತೆಯೇ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರಾ? ವಿನಾಕಾರಣ ನನ್ನನ್ನು ಸುಳ್ಳುಗಾರ ಎಂದು ಹೇಳುತ್ತಾರೆ. ಆದರೆ, ಇವರ ಮಾತು ಕೇಳಿಸಿಕೊಂಡರೆ ಸುಳ್ಳು ಎಲ್ಲಿ ಹುಟ್ಟಿದೆ ಎನ್ನುವುದು ಗೊತ್ತಾಗುತ್ತದೆ’ ಎಂದು ಕೇಂದ್ರ ಸಚಿವರು ಹೇಳಿದರು.

ಕುಮಾರಸ್ವಾಮಿಯನ್ನು ಹಿಟ್ ಅಂಡ್ ರನ್ ಅಂತಾರೆ ಕಾಂಗ್ರೆಸ್‌ನವರು. ಹಾಗಾದರೆ ಸಿದ್ದರಾಮಯ್ಯ ಅವರೇನು ಯೂಟರ್ನಾ? ನಿವೇಶನ ವಾಪಸ್ ಕೊಡುವ ತರಾತುರಿ ನಿರ್ಧಾರ ಯಾರು ಹೇಳಿಕೊಟ್ಟಿದ್ದು? ಕಳ್ಳತನ ಮಾಡಿ ಆಮೇಲೆ ತಪ್ಪಾಯ್ತು ಅಂದರೆ ಬಿಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಸಿಎಂ ಇದೊಂದೇ ತಪ್ಪು ಮಾಡಿಲ್ಲ: ‘ಮುಡಾ ಹಗರಣ ಮಾತ್ರವಲ್ಲ ಸಿದ್ದರಾಮಯ್ಯ ಇನ್ನೂ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ. ಮೈಸೂರಿನಲ್ಲಿ ಭೂಮಿ ಮೇಲೆ, ಚಿನ್ನದ ಮೇಲೆ ವ್ಯಾಮೋಹ ಇಲ್ಲ ಎನ್ನುತ್ತಾರೆ ಅವರ ಶ್ರೀಮತಿಯವರು. ಈ ಹಿಂದೆ ಏನೆಲ್ಲ ಮಾಡಿದ್ದಾರೆ, ವೈಟ್ನರ್ ಹಾಕಿ ಎಲ್ಲ ಮುಗಿದೊಯ್ತು ಎಂದುಕೊಂಡಿದ್ದರು, ಈಗ ಇಲ್ಲಿಗೆ ಬಂದಿದ್ದಾರೆ’ ಎಂದರು. 

ಸಿದ್ದರಾಮಯ್ಯ ವಿರುದ್ದ ಮತ್ತೊಂದು ಹಳೆ ಸೈಟ್ ಅಕ್ರಮದ ಬಗ್ಗೆ ಮಾಹಿತಿ ಕೊಟ್ಟ ಕೇಂದ್ರ ಸಚಿವರು, ‘14 ಸೈಟ್ ಕೇಸ್ ಕಥೆ ಒಂದಾದರೆ ಇದು ಅದಕ್ಕಿಂತ ಹಳೆ ಕೇಸ್. ಆ ಪ್ರಕರಣ ಕುತ್ತಿಗೆಗೆ ಬಂದಾಗ ಒಂದು ಕೋಟಿ ರೂಪಾಯಿಗೆ ಮಾರಾಟ ಮಾಡಿಕೊಂಡರು. ಚುನಾವಣಾ ಸಾಲಕ್ಕಾಗಿ ಅದನ್ನು ಮಾರಾಟ ಮಾಡಲಾಯಿತು ಎಂದು ಕಥೆ ಕಟ್ಟಿದ್ದರಲ್ಲ, ಆ ನಿವೇಶನ ಎಲ್ಲಿಂದ ಬಂದಿತ್ತು? ಸ್ವಲ್ಪ ಹೇಳುವಿರಾ?’ ಎಂದು ಕೇಳಿದರು.

‘ಬಡವರ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿಸಿಕೊಂಡು, ಅದನ್ನು ಸಿದ್ದರಾಮಯ್ಯ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿಯೂ ಸಿದ್ದರಾಮಯ್ಯ ಮೊದಲ ಆರೋಪಿ. ಒಟ್ಟು 18 ಆರೋಪಿಗಳಿದ್ದಾರೆ. ನ್ಯಾಯಾಲಯದಿಂದ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದಿದೆ. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೋದರು. ಅಲ್ಲಿ ಪರ ತೀರ್ಪು ಬಂತು. ಇದು 14 ಸೈಟ್‌ಗಿಂತ ದೊಡ್ಡ ಹಗರಣ. ಊರಿಗೆ ಬುದ್ದಿ ಹೇಳೊರು ಇಲ್ಲಿ ಏನೇನು ಮಾಡಿದ್ದಿರಿ, ಸತ್ಯ ಹೇಳಿ. ಈಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಇನ್ನು ಎರಡು ಪ್ರಕರಣಗಳಿವೆ’ ಎಂದು ಅವರು ಆರೋಪಿಸಿದರು. 

‘ಸಚಿವ ಕೃಷ್ಣಬೈರೇಗೌಡರೇ, ನೀವು ಮೇಧಾವಿಯಲ್ಲವೇ? ಇವನ್ನೆಲ್ಲಾ ಒಮ್ಮೆ ಪರಿಶೀಲನೆ ಮಾಡಪ್ಪ. ನಾನು ಇಂತಹ ಕೆಲಸ ಮಾಡಿಲ್ಲ. ಸಮಸ್ಯೆ ಬಂದಿದ್ದಕ್ಕೆ ಚುನಾವಣಾ ಖರ್ಚಿನ ಹೆಸರಿನಲ್ಲಿ ಮಾರಾಟ ಮಾಡಿದರು. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯುವುದು ಎಂದರೆ ಇದೇ. ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮನ್ನು ಮುಗಿಸಲು ಹೊರಟರು’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.