ಬೆಂಗಳೂರು: ‘ಮುಡಾ ಭೂಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಹೆಸರಿನಲ್ಲಿ ರಕ್ಷಣೆ ಪಡೆಯುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ತಾವು ಹಿಂದುಳಿದ ವರ್ಗಕ್ಕೆ ಸೇರಿದ್ದೇನೆಂಬ ಕಾರಣಕ್ಕೆ ತಮ್ಮನ್ನು ಗುರಿಯಾಗಿಸಲಾಗಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ‘ಎಕ್ಸ್’ ಮೂಲಕ ಅಶೋಕ ಪ್ರತಿಕ್ರಿಯಿಸಿದ್ದಾರೆ.
‘ತಮ್ಮ ಇಡೀ ಜೀವನವನ್ನು ‘ಅಹಿಂದ’ ಸಮುದಾಯಗಳ ಬೆನ್ನಿನ ಮೇಲೆ ಸವಾರಿ ಮಾಡಿ ಅಧಿಕಾರ ಅನುಭವಿಸಿದ ಸಿದ್ದರಾಮಯ್ಯ, ದಲಿತರಿಗೆ, ಹಿಂದುಳಿದವರಿಗೆ ಮಾಡಿದ್ದಾದರೂ ಏನು? ದಲಿತರ ದುಡ್ಡು ಲೂಟಿ ಹೊಡೆದಿದ್ದು, ದಲಿತರ ಕುರ್ಚಿ ಕಿತ್ತುಕೊಂಡು ಅವರಿಗೆ ಮೋಸ ಮಾಡಿದ್ದು, ಇದಿಷ್ಟೇ ಅವರ ಸಾಧನೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅವರ ಪಾಪದ ಕೊಡ ತುಂಬಿದೆ. ಪ್ರಾಯಶ್ಚಿತ ಕಾದಿದೆ’ ಎಂದು ಹೇಳಿದ್ದಾರೆ.
‘ಮುಡಾ ಭೂಹಗರಣದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಸುಮಾರು ಆರು ಕೋಟಿ ಕನ್ನಡಿಗರ ಮುಖ್ಯಮಂತ್ರಿ ಒಬಿಸಿ ಹಣೆಪಟ್ಟಿ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ. ತಪ್ಪಿಸಿಕೊಳ್ಳಲಾಗದ ವ್ಯಕ್ತಿಯ ಕೊನೆಯ ಉಪಾಯವಿದು ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಮೂಲಕ ಅವರು ಹಿಂದುಳಿದ ವರ್ಗಗಳ ಕನ್ನಡಿಗರನ್ನು ಅವಮಾನಿಸುತ್ತಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದೇ ಸೂಕ್ತ’ ರಾಜ್ಯಸಭೆಯ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.