ADVERTISEMENT

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ: ಹೋರಾಟಕ್ಕೆ ‘ಕೈ’ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 5:37 IST
Last Updated 17 ಆಗಸ್ಟ್ 2024, 5:37 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್‌) ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯವ್ಯಾಪಿ ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.

ADVERTISEMENT

ಸಿಎಂ ಸಿದ್ದರಾಮಯ್ಯ ಅವರು ಇಂದು ಸಂಜೆ 5 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಎಲ್ಲ ಸಚಿವರು ರಾಜ್ಯಪಾಲರ ಭೇಟಿ ಮಾಡಲು ನಿರ್ಧರಿಸಿದ ಬಳಿಕ ಸಂಪುಟ ಸಭೆಯನ್ನು ರದ್ದುಪಡಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್,‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ದೂರವಾಣಿ ಕರೆ ಮಾಡಿದ್ದು, ‘ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ. ಏನೇ ಆದರೂ ಕಾನೂನು ಹೋರಾಟ ನಡೆಸೋಣ’ ಎಂದು ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜಕೀಯ ಹಾಗೂ ಕಾನೂನಾತ್ಮಕ ಹೋರಾಟ ನಡೆಸುವುದು ಮತ್ತು ಇಡೀ ಪಕ್ಷ ಮುಖ್ಯಮಂತ್ರಿ ಬೆನ್ನಿಗೆ ನಿಂತು ಹೋರಾಟ ಮಾಡುವಂತೆ ಕಾಂಗ್ರೆಸ್ ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್‌) ರಾಜ್ಯಪಾಲರು ಅನುಮತಿ ನೀಡಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರೊಂದಿಗೆ ಮುಂದಿನ ಕಾನೂನು ಹೋರಾಟದ ಬಗ್ಗೆ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಿಎಂ ಸರ್ಕಾರಿ ನಿವಾಸಕ್ಕೆ ಬಂದಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾನೂನು ಸಚಿವ ಎಚ್.ಕೆ ಪಾಟೀಲ, ಗೃಹ ಸಚಿವ ಪರಮೇಶ್ವರ, ಎನ್. ಚಲುವರಾಯಸ್ವಾಮಿ, ಕೃಷ್ಣ ಭೈರೇಗೌಡ ಭೈರತಿ ಸುರೇಶ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದಾರೆ.

ಇತ್ತ ದೂರುದಾರರಾದ ವಕೀಲ ಟಿ.ಜೆ. ಅಬ್ರಹಾಂ, ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಅವರನ್ನು ರಾಜಭವನಕ್ಕೆ ಬರುವಂತೆ ಆಹ್ವಾನಿಸಲಾಗಿದೆ.

ಸಿ.ಎಂ ವಿರುದ್ಧ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್‌) ಅನುಮತಿ ಕೋರಿ ಜುಲೈ 26ರಂದು ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಮರುದಿನವೇ, ಮುಖ್ಯಮಂತ್ರಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.