ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಾದ ಬಿಜೆಪಿ–ಜೆಡಿಎಸ್ ನಡುವಣ ಸಂಘರ್ಷ ಮತ್ತಷ್ಟು ಬಿರುಸು ಪಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೆಡೆ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದರೆ, ಮತ್ತೊಂದೆಡೆ ಬೀದಿ ಹೋರಾಟ ಆಗಲೇ ಆರಂಭಗೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸೋಮವಾರ ಪ್ರತಿಭಟನೆಯನ್ನೂ ನಡೆಸಲಿವೆ.
ಹೈಕೋರ್ಟ್‌ಗೆ ಸಿಎಂ ರಿಟ್ ಅರ್ಜಿ ಇಂದು
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧದ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಆಗಸ್ಟ್ 19) ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಿದ್ದಾರೆ.
ಮುಖ್ಯಮಂತ್ರಿ ಪರವಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ವಕಾಲತ್ತು ವಹಿಸಲಿದ್ದಾರೆ. ತನಿಖೆಗೆ ನೀಡಿರುವ ಅನುಮತಿಯನ್ನು ವಜಾಗೊಳಿಸುವಂತೆ ರಾಜ್ಯ ಕಾಂಗ್ರೆಸ್ ಪಕ್ಷದ ವತಿಯಿಂದಲೂ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಗುವುದು. ಪಕ್ಷದ ಪರವಾಗಿ ಎಐಸಿಸಿ ಕಾನೂನು ಘಟಕದ ಅಧ್ಯಕ್ಷ ಅಭಿಷೇಕ್ ಮನು ಸಿಂಘ್ವಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ಈ ಇಬ್ಬರು ವಕೀಲರು ಸೋಮವಾರ ಬೆಳಿಗ್ಗೆ ರಾಜ್ಯಕ್ಕೆ ಬರಲಿದ್ದಾರೆ. ಅವರ ಜೊತೆ ಚರ್ಚೆ ನಡೆಸಬೇಕಿರುವ ಕಾರಣ, ಬಳ್ಳಾರಿ ಜಿಲ್ಲೆ ಮತ್ತು ಮಂತ್ರಾಲಯಕ್ಕೆ ಸೋಮವಾರ ಕೈಗೊಳ್ಳಬೇಕಿದ್ದ ಪ್ರವಾಸವನ್ನು ಮುಖ್ಯಮಂತ್ರಿ ರದ್ದುಪಡಿಸಿದ್ದಾರೆ.
‘ಸಂವಿಧಾನದ ವಿಧಿ 163ರ ಪ್ರಕಾರ ಮಂತ್ರಿ ಪರಿಷತ್‌ನ ಸಲಹೆಯನ್ನು ತಿರಸ್ಕರಿಸಲು ಅವಕಾಶ ಇಲ್ಲ. ಆದರೆ, ರಾಜ್ಯಪಾಲರು ಅದನ್ನು ತಿರಸ್ಕರಿಸಿ ತನಿಖೆಗೆ ಅನುಮತಿ ನೀಡಿದ್ದಾರೆ. ಅವರ ಈ ನಡೆಯನ್ನು ಖಂಡಿಸಿ ಸರ್ಕಾರ ಈಗಾಗಲೇ ನಿರ್ಣಯ ತೆಗೆದುಕೊಂಡಿದೆ. ತನಿಖೆಗೆ ಅನುಮತಿ ನೀಡಿರುವ ತಮ್ಮ ಪತ್ರದಲ್ಲಿ ಕೆಲವು ಕೋರ್ಟ್ ತೀರ್ಪುಗಳನ್ನು ಅವರು ಉಲ್ಲೇಖಿಸಿದ್ದಾರೆ. ಆದರೆ, ಆಯ್ದ ಭಾಗಗಳನ್ನಷ್ಟೆ ಪ್ರಸ್ತಾಪಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17 ‘ಎ’ಯ ನಿಯಮಗಳನ್ನು ಗಾಳಿಗೆ ತೂರಿ ಅವರು ಈ ಅನುಮತಿ ನೀಡಿದ್ದಾರೆ. ಕಾನೂನುಬಾಹಿರವಾಗಿ ತನಿಖೆಗೆ ಅನುಮತಿ ನೀಡಿರುವ ವಿಚಾರವನ್ನು ರಿಟ್ ಅರ್ಜಿಯಲ್ಲಿ ಪ್ರಸ್ತಾಪಿಸಿ, ಅದನ್ನು ವಜಾಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಲು ನಿರ್ಧರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಎಚ್.ಡಿ. ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಅವರ ವಿರುದ್ಧದ ಪ್ರಕರಣಗಳಲ್ಲಿ ತನಿಖಾ ವರದಿಯ ಸಹಿತ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತವು ಈ ಹಿಂದೆಯೇ ಮನವಿ ಸಲ್ಲಿಸಿದ್ದರೂ ರಾಜ್ಯಪಾಲರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ತನಿಖೆಗೆ ಅನುಮತಿ ನೀಡಿದ್ದಾರೆ. ಈ ತಾರತಮ್ಯ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ತೀರ್ಮಾನಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.
ಆಪ್ತ ಸಚಿವರ ಜೊತೆ ಚರ್ಚೆ:
ಭಾನುವಾರ ದಿನವಿಡೀ ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಆಪ್ತ ಸಚಿವರು, ವಕೀಲರು ಮತ್ತು ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಜೊತೆ ಮುಖ್ಯಮಂತ್ರಿ ಚರ್ಚೆ ನಡೆಸಿದರು. ಸಚಿವರಾದ ಜಿ. ಪರಮೇಶ್ವರ, ಎಚ್.ಕೆ. ಪಾಟೀಲ, ಎಚ್.ಸಿ. ಮಹದೇವಪ್ಪ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಶಿವರಾಜ ತಂಗಡಗಿ, ಕೆಲವು ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು.
‘ಸಂವಿಧಾನದ ಉಲ್ಲಂಘನೆ’
‘ಕಳೆದ ಹತ್ತು ವರ್ಷಗಳಲ್ಲಿ ಐಟಿ, ಇ.ಡಿ, ಸಿಬಿಐ ಮತ್ತು ರಾಜ್ಯಪಾಲರನ್ನು ಬಳಸಿ ತಮ್ಮ ಮಾತು ಕೇಳದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ದೆಹಲಿ ಮತ್ತಿತರ ರಾಜ್ಯಗಳಲ್ಲಿ ನಡೆಯುತ್ತಿರುವ ಜಟಾಪಟಿ ಈಗ ಇಲ್ಲೂ ನಡೆಯುತ್ತಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕೆಲವು ರಾಜ್ಯಪಾಲರ ನಡೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾದ ರಾಜ್ಯಪಾಲರು ತಮ್ಮ ಅಧಿಕಾರವನ್ನು ದುರಾಡಳಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
‘ಹೋರಾಟ ಅನಿವಾರ್ಯ’
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಭಾನುವಾರ ಬೆಳಿಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಭೇಟಿ ಮಾಡಿ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಪರಮೇಶ್ವರ, ‘ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ವಿಚಾರದಲ್ಲಿ ನಮಗೆ ಉಳಿದಿರುವುದು ರಾಜಕೀಯ ಮತ್ತು ಕಾನೂನು ಹೋರಾಟ ಮಾತ್ರ. ಈ ಹೋರಾಟ ಅನಿವಾರ್ಯ. ಬಿಜೆಪಿ ರಾಜಕೀಯ ದಾರಿ ಹಿಡಿದಿದೆ. ನಾವೂ ಅದನ್ನೇ ಮಾಡಬೇಕಿದೆ’ ಎಂದರು.
‘ಈ ಪ್ರಕರಣದಲ್ಲಿ ಅನವಶ್ಯಕವಾಗಿ ರಾಜಕೀಯ ಬಳಸಲಾಗಿದೆ. ಬೇರೆ ರಾಜ್ಯಗಳಲ್ಲಿ ರಾಜ್ಯಪಾಲರನ್ನು ಬಳಸಿ ಸರ್ಕಾರ ಬೀಳಿಸಲು ನಡೆಸಿದ ಪ್ರಯತ್ನದಂತೆ, ಇಲ್ಲೂ ಅಂತಹ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಕಾನೂನಿನಲ್ಲಿ ನಮಗೆ ಹಿನ್ನಡೆಯಾದರೆ ಮುಂದಿನ ನಡೆಯ ಕುರಿತು ಯೋಚನೆ ಮಾಡುತ್ತೇವೆ. ಆದರೆ, ನ್ಯಾಯಾಲಯದ ವ್ಯವಸ್ಥೆ ಬಗ್ಗೆ ನಂಬಿಕೆ ಇದೆ. ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.
‘ರಾಜ್ಯಪಾಲರುಗಳು ಮಾಡಬೇಕಾದ ಕೆಲಸಗಳನ್ನು ಬಿಟ್ಟು ಬೇರೆಲ್ಲ ಕೆಲಸಗಳನ್ನು ಮಾಡುತ್ತಿರುವ ಬಗ್ಗೆ ನ್ಯಾಯಾಧೀಶರುಗಳೇ ಟೀಕೆ ಮಾಡಿದ್ದಾರೆ’ ಎಂದರು.
ಅವರು ಟಗರು, ಧೈರ್ಯ ಹೇಳಿದ್ದೇನೆ:
ಮುಖ್ಯಮಂತ್ರಿಯನ್ನು ಭೇಟಿ ಮಾಡಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಿ.ಎಂ. ಇಬ್ರಾಹಿಂ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಕರ್ನಾಟಕದ ಜನರ ಸ್ವಾಭಿಮಾನವನ್ನು ಕೆಣಕಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ರಾಜ್ಯಪಾಲರು ಉಲ್ಲಂಘಿಸಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ಮೇಲೆ ಪ್ರಕರಣಗಳಿವೆ. ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಏಕೆ ಕೊಟ್ಟಿಲ್ಲ? ಸಾಮಾನ್ಯ ಮನುಷ್ಯನ ದೂರಿನ ಮೇಲೆ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಅವರು (ಸಿದ್ದರಾಮಯ್ಯ) ಟಗರು, ಧೈರ್ಯ ಹೇಳಿದ್ದೇನೆ’ ಎಂದರು.
ಕಾಂಗ್ರೆಸ್ ಪ್ರತಿಭಟನೆ
ರಾಜ್ಯಪಾಲರ ನಡೆಯನ್ನು ಖಂಡಿಸಿ ಕಾಂಗ್ರೆಸ್ ರಾಜ್ಯದಾದ್ಯಂತ ಸೋಮವಾರ (ಆ. 19) ಪ್ರತಿಭಟನೆ ಹಮ್ಮಿಕೊಂಡಿದೆ. ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಿಜೆಪಿ ಧರಣಿ
ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಸೋಮವಾರ ಬೆಳಿಗ್ಗೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ
ಹಮ್ಮಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.