ಬೆಂಗಳೂರು: ‘ಮುಡಾ’ ಪ್ರಕರಣದ ಚರ್ಚೆಗೆ ಅವಕಾಶ ನೀಡದ ನಿರ್ಧಾರ ಸರಿಯಾಗಿತ್ತು. ವಿರೋಧ ಪಕ್ಷಗಳು ಮಾಡಿದ ಟೀಕೆಗೆ ಬೇಸರವಾಗಿಲ್ಲ. ಒಂದು ಸ್ಥಾನದಲ್ಲಿ ಕುಳಿತಾಗ ಟೀಕೆ–ಟಿಪ್ಪಣಿ ಸಹಜ’ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಡಾ’ ನಿವೇಶನ ಹಂಚಿಕೆ ಕುರಿತ ಚರ್ಚೆಯ ವಿಷಯದಲ್ಲಿ ಯಾವುದೇ ಜನಪರ ಕಾಳಜಿ ಇರಲಿಲ್ಲ. ಅಲ್ಲದೇ ನಿವೇಶನ ಹಲವು ವರ್ಷಗಳ ಹಿಂದೆ ಹಂಚಿಕೆಯಾಗಿವೆ. ರಾಜಕೀಯ ಕಾರಣಗಳಿಗಾಗಿ ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ ಎಂದರು.
ನೀಟ್ ಹಗರಣ, ಮಳೆ ಹಾನಿ ಸೇರಿದಂತೆ ಜನರ ಸಮಸ್ಯೆಗಳ ಕುರಿತು ಹೆಚ್ಚಿನ ವಿಷಯಗಳ ಚರ್ಚೆಗೆ ಅವಕಾಶ ದೊರಕಲಿಲ್ಲ ಎನ್ನುವ ಬೇಸರವಿದೆ. ವಾಲ್ಮೀಕಿ ನಿಗಮದ ಹಗರಣದ ಚರ್ಚೆಗಾಗಿಯೇ ನಾಲ್ಕು ದಿನಗಳು ಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಕಲಾಪ ಸಲಹಾ ಸಮಿತಿ ಜಂಟಿ ಸಭೆ
ಕಲಾಪಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಎರಡೂ ಸದನಗಳ ಪ್ರಮುಖರನ್ನು ಒಳಗೊಂಡ ಕಲಾಪ ಸಲಹಾ ಸಮಿತಿ ಸಭೆ ಕರೆಯಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
‘ನಾಲ್ಕು ದಶಕ ವಿಧಾನ ಪರಿಷತ್ ಸದಸ್ಯನಾಗಿ ಕಳೆದಿದ್ದೇನೆ. ಪರಿಷತ್ ಮೊದಲಿನ ವರ್ಚಸ್ಸು ಕಳೆದುಕೊಂಡಿದೆ. ಗಂಭೀರ ಚರ್ಚೆಗಳು ನಡೆಯುತ್ತಿಲ್ಲ. ಹಣ ಹಂಚಿಕೆ ಮಾಡಿ ಗೆದ್ದು ಬರುವ ಸದಸ್ಯರಿಂದ ಅದನ್ನೆಲ್ಲ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.